ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳನ್ನು ನಿಭಾಯಿಸಿದ ಬಿಹಾರ ಮತ್ತು ದೆಹಲಿ ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಗಳವಾರ ಸಮರ್ಥಿಸಿಕೊಂಡರು. ಭದ್ರತಾ ಪಡೆಗಳು ಯಾವುದೇ ಸಾವುನೋವುಗಳು ಅಥವಾ ಗಂಭೀರ ಗಾಯಗಳಿಲ್ಲದೆ ದೊಡ್ಡ ಜನಸಮೂಹವನ್ನು ನಿರ್ವಹಿಸಿದವು ಎಂದು ಹೇಳಿದರು.
'ಒಬ್ಬನೇ ಒಬ್ಬ ವ್ಯಕ್ತಿ ಸಾವಿಗೀಡಾಗಲಿಲ್ಲ; ಒಬ್ಬ ವ್ಯಕ್ತಿಗೂ ಮೂಳೆ ಮುರಿದಿಲ್ಲ. ಗಂಭೀರ ಗಾಯದಿಂದ ಒಬ್ಬ ಪ್ರತಿಭಟನಾಕಾರ ಕೂಡ ಆಸ್ಪತ್ರೆಯಲ್ಲಿಲ್ಲ. ಈ ಚಳವಳಿಯ ಪ್ರಮಾಣವನ್ನು ಪರಿಗಣಿಸಿ: ಸಾವಿರಾರು ಜನರು ಬಂದರು ಮತ್ತು ವಿದ್ಯಾರ್ಥಿಗಳ ಸೋಗಿನಲ್ಲಿ ಹಲವಾರು ಅಪರಾಧಿಗಳು ನುಸುಳಿದರು' ಎಂದು ಹೇಳಿರುವುದಾಗಿ ಸುದ್ದಿಸಂಸ್ಥೆ ANI ಉಲ್ಲೇಖಿಸಿದೆ.
ಪ್ರತಿಭಟನೆಗಳನ್ನು ನಿರ್ವಹಿಸಿದ್ದಕ್ಕಾಗಿ ಪೊಲೀಸರು ಮತ್ತು ಆಡಳಿತವನ್ನು ರಿಜಿಜು ಶ್ಲಾಘಿಸಿದರು. ಆದರೆ, ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅಡಿಯಲ್ಲಿ ನಡೆದ ಘಟನೆಗಳಿಗೆ ಹೋಲಿಸಿದರು.
'ಕಾಂಗ್ರೆಸ್ ಯುಗದಲ್ಲಿ ಇಂತಹ ಚಳುವಳಿ ನಡೆದಿದ್ದರೆ, ಅದು ಸಾವಿರಾರು ಸಾವುಗಳಿಗೆ ಕಾರಣವಾಗಿರುತ್ತಿತ್ತು. ಆದರೆ, ಈಗ ಒಂದೇ ಒಂದು ಗಂಭೀರ ಗಾಯಕ್ಕೂ ಅವಕಾಶ ನೀಡದೆ ಇಂತಹ ಬೃಹತ್ ಪ್ರತಿಭಟನೆಯನ್ನು ನಿರ್ವಹಿಸಿದ್ದಕ್ಕಾಗಿ ದೆಹಲಿ ಪೊಲೀಸರು ಮತ್ತು ಆಡಳಿತವನ್ನು ಹೊಗಳಬೇಕು. ಕಾಂಗ್ರೆಸ್ ಯುಗದಲ್ಲಿ ಸಾವಿರಾರು ಜನರು ಗುಂಡಿನ ದಾಳಿಯಿಂದ ಸಾವಿಗೀಡಾದರು' ಎಂದು ರಿಜಿಜು ಹೇಳಿದರು.
'ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ತುರ್ತು ಪರಿಸ್ಥಿತಿ ಹೇರುವುದು ಕಾಂಗ್ರೆಸ್. ಈ ದೇಶದಲ್ಲಿ ನಡೆದ ವಿವಿಧ ಚಳುವಳಿಗಳ ಸಮಯದಲ್ಲಿ ಎಷ್ಟು ಜನರು ಗುಂಡಿನ ಚಕಮಕಿಯಲ್ಲಿ ಬಲಿಯಾಗಿದ್ದಾರೆಂದು ನಿಮಗೆ ನೆನಪಿರಬಹುದು. ತೆಲಂಗಾಣ ರಾಜ್ಯ ರಚನೆಯ ಚಳುವಳಿಯ ಸಮಯದಲ್ಲಿಯೂ ಸಹ, ಅನೇಕ ಜನರು ಕೊಲ್ಲಲ್ಪಟ್ಟರು... ಆದರೆ ಈ ಚಳುವಳಿಯಲ್ಲಿ, ಒಂದೇ ಒಂದು ಗುಂಡು ಹಾರಿಸಲಾಗಿಲ್ಲ' ಎಂದು ಅವರು ಹೇಳಿದರು.
ಆಮ್ ಆದ್ಮಿ ಪಕ್ಷ, ಭೀಮ್ ಆರ್ಮಿ ಮತ್ತು ಸಮಾಜವಾದಿ ಪಕ್ಷದ ರಾಜಕೀಯ ಚಳವಳಿಗಾರರು ಮತ್ತು 'ಡಫ್ಲಿ ನುಡಿಸುವ ಚಳವಳಿಗಾರರು' (ಗದ್ದಲ ಉಂಟುಮಾಡುವವರು) ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ಹಾಜರಿದ್ದರೂ, ದೆಹಲಿ ಪೊಲೀಸರು ಕನಿಷ್ಠ ಬಲಪ್ರಯೋಗ ಮಾಡಿದರು. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಭೇದಿಸಿ ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ಮಾತ್ರ ಬಲಪ್ರಯೋಗ ಮಾಡಲಾಯಿತು ಎಂದು ರಿಜಿಜು ಹೇಳಿದರು.
'ಇದಲ್ಲದೆ, ಆಮ್ ಆದ್ಮಿ ಪಕ್ಷ, ಡಫ್ಲಿ ನುಡಿಸುವ ಚಳವಳಿಗಾರರು, ಭೀಮ್ ಆರ್ಮಿ ಅಥವಾ ಸಮಾಜವಾದಿ ಪಕ್ಷದಿಂದ ಅರ್ಧಕ್ಕಿಂತ ಹೆಚ್ಚು ಜನರು ಬಂದು ಇತರರನ್ನು ಹಿಂಸಾಚಾರಕ್ಕೆ ಪ್ರಚೋದಿಸಿದರು; ಆದರೂ, ಒಂದೇ ಒಂದು ಸಾವು ಸಂಭವಿಸಿಲ್ಲ' ಎಂದು ರಿಜಿಜು ಹೇಳಿದರು.
Gen-Z ಚಳುವಳಿ ಮತ್ತು ಶಿಕ್ಷಣ ಸುಧಾರಣೆಗಳ ಬೇಡಿಕೆಯ ಕುರಿತು ಮಾತನಾಡಿದ ರಿಜಿಜು, ನರೇಂದ್ರ ಮೋದಿ ನೇತೃತ್ವದ NDA ಸರ್ಕಾರವು ದೇಶದ ಯುವಜನರ ಕಲ್ಯಾಣಕ್ಕೆ ಬದ್ಧವಾಗಿದೆ. ಪರೀಕ್ಷಾ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ನ್ಯಾಯಾಂಗ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಪ್ರತಿಭಟನೆಗಳ ಸಮಯದಲ್ಲಿ ಹಿಂಸಾಚಾರದ ಬಗ್ಗೆ ಸರ್ಕಾರದ ಶೂನ್ಯ-ಸಹಿಷ್ಣುತೆಯ ನಿಲುವನ್ನು ಪುನರುಚ್ಚರಿಸಿದರು.
'ನಾವು ವಿದ್ಯಾರ್ಥಿಗಳ ಭಾವನೆಗಳನ್ನು ಗೌರವಿಸುತ್ತೇವೆ. ಪ್ರಧಾನಿಯವರು ಇಂತಹ ಉತ್ತಮ ಕಾನೂನನ್ನು ಪರಿಚಯಿಸಿದರು ಮತ್ತು ಅವರ ಭವಿಷ್ಯಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿ ಹಂತ ಹಂತವಾಗಿ ಹೆಜ್ಜೆ ಹಾಕಿದರು' ಎಂದು ರಿಜಿಜು ಹೇಳಿದರು.