ನವದೆಹಲಿ: ಟಿವಿ ಚರ್ಚೆಗಳಲ್ಲಿ ಆಡಳಿತಾರೂಢ ಪಕ್ಷದ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಪಕ್ಷದ ಎಲ್ಲ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, 'ತುರ್ತು' ಆರ್ಥಿಕ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿಯಿಂದ ಹೊರಬಂದ ಬಳಿಕ ತಮ್ಮ ಮೊದಲ ಸಂದರ್ಶನದಲ್ಲಿ ಮಾತನಾಡಿದ ಪೂನಾವಾಲಾ, ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ತಮ್ಮ ವಕ್ತಾರರಿಗೆ ವೇತನ ನೀಡುವುದಿಲ್ಲ ಮತ್ತು ಜೀವನ ನಿರ್ವಹಣೆ ಮಾಡುವುದು ತಮಗೆ ಕಷ್ಟವಾಗುತ್ತಿತ್ತು ಎಂದು ಹೇಳಿದರು.
'ನಾನು ಮನೆ ಬಾಡಿಗೆ ಪಾವತಿಸಬೇಕಿದೆ. ನಾನು ಬಿಜೆಪಿಯವನಾದ ಮಾತ್ರಕ್ಕೆ ಮನೆ ಮಾಲೀಕರು ನನಗೆ ಉಚಿತವಾಗಿ ಬಾಡಿಗೆ ನೀಡಲಾರರು. ಅವರು ಒಂದನೇ ತಾರೀಖಿನಂದೇ ಬಾಡಿಗೆ ಕೇಳುತ್ತಿದ್ದಾರೆ. ರಾಜಕೀಯ ಪಕ್ಷಗಳು ಕಾರ್ಯಕರ್ತರಿಗೆ ಹಣ ಪಾವತಿಸುವುದಿಲ್ಲ. ಆದರೆ, ಬಿಜೆಪಿ ತನ್ನನ್ನು ಉಳಿಸಿಕೊಳ್ಳುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲ ಮತ್ತು ಪಕ್ಷ ಹಾಗೂ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ತಾನು ಈಗಲೂ ಬದ್ಧನಾಗಿದ್ದೇನೆ' ಎಂದು ಶೆಹಜಾದ್ ಪೂನಾವಾಲಾ ಹೇಳಿದರು.
'ನನ್ನನ್ನಾಗಲಿ ಅಥವಾ ಇನ್ನಾವುದೇ ಕಾರ್ಯಕರ್ತರನ್ನಾಗಲಿ ಪೋಷಿಸುವುದು ಬಿಜೆಪಿಯ ಕೆಲಸವಲ್ಲ. ನೋಡಿ, ನೀವು ರಾಜಕೀಯ ಚಳುವಳಿಯೊಂದಕ್ಕೆ ಸೇರಿದಾಗ, ಅದೊಂದು ಉದ್ಯೋಗವಾಗಿರುವುದಿಲ್ಲ. ಸಿದ್ಧಾಂತದ ಮೇಲಿನ ಪ್ರೀತಿ, ವ್ಯಕ್ತಿಯ ಮೇಲಿನ ಪ್ರೀತಿ ಅಥವಾ ಸಂಘಟನೆಯ ಮೇಲಿನ ಪ್ರೀತಿ ಮುಂತಾದ ಕಾರಣಗಳಿಂದಾಗಿ ನೀವು ಕಾರ್ಯಕರ್ತರಾಗುತ್ತೀರಿ. ಆ ಮೂರೂ ಅಂಶಗಳು ಈಗಲೂ ನನ್ನಲ್ಲಿವೆ' ಎಂದರು.
ಕಾಂಗ್ರೆಸ್ ತೊರೆದು 2021ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಶೆಹಜಾದ್ ಪೂನಾವಾಲಾ, ತಾವು ಪಕ್ಷದಿಂದ ಹಠಾತ್ತನೆ ಹೊರಬರಲು ಆರ್ಥಿಕ ಕಾರಣಗಳೇ ಪ್ರಮುಖ ಕಾರಣವೆಂದು ಪ್ರತಿಪಾದಿಸಿದರು. ಹೆಚ್ಚಿನ ರಾಜಕಾರಣಿಗಳು 'leta' ಅಥವಾ 'beta' ವರ್ಗಕ್ಕೆ ಸೇರಿದವರಾಗಿರುತ್ತಾರೆ; ಆದರೆ ತಾವು ಈ ಎರಡೂ ವರ್ಗಗಳಿಗೆ ಸೇರಿಲ್ಲದ ಕಾರಣ, ತಮ್ಮ ಜೀವನೋಪಾಯಕ್ಕಾಗಿ ಬೇರೆ ದಾರಿಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ವಿವರಿಸಿದರು.
'ಎಲ್ಲಾ ರಾಜಕಾರಣಿಗಳೂ 'leta' ಅಥವಾ 'beta' ವರ್ಗಕ್ಕೆ ಸೇರಿದವರು ಎಂದು ನೀವೇಕೆ ಭಾವಿಸುತ್ತೀರಿ? ನಾನು 'leta' ಅಲ್ಲ - ಅಂದರೆ ಯಾರಿಂದಲೂ ಏನನ್ನೂ ಪಡೆಯುವವನಲ್ಲ - ಹಾಗೆಯೇ ನಾನು ಯಾವುದೇ ದೊಡ್ಡ ರಾಜಕಾರಣಿಯ 'ಬೇಟಾ' ಕೂಡ ಅಲ್ಲ. ನನ್ನಂತಹವರು ಅಂದರೆ ಯಾವುದೇ ರಾಜಕೀಯ ಪರಂಪರೆಯಿಲ್ಲದ, ಹೊಸ ತಲೆಮಾರಿನ ರಾಜಕಾರಣಿಗಳು- ಯಾವುದೇ ಹಿನ್ನೆಲೆಯಿಂದ ಬಂದವರಲ್ಲ ಎಂಬುದನ್ನು ಒಪ್ಪಿಕೊಳ್ಳಲು ಜನರಿಗೆ ಮನಸ್ಸಿಲ್ಲ. ವಾಸ್ತವವಾಗಿ, ಸಚಿನ್ ಪೈಲಟ್ ಅವರಂತಹವರನ್ನು ಅಥವಾ ಇತರೆ 'ನೇತಾ' ಮತ್ತು 'ಬೇಟಾ'ಗಳನ್ನು ನೋಡಿ ನಮಗೆ ಅಭ್ಯಾಸವಾಗಿರುವುದರಿಂದ, ಪ್ರತಿಯೊಬ್ಬರೂ ಅಂತಹ ಜೀವನಶೈಲಿಯನ್ನೇ ಹೊಂದಿರುತ್ತಾರೆ ಎಂದು ನಾವು ಭಾವಿಸುತ್ತೇವೆ' ಎಂದು ಹೇಳಿದರು.
ತಮ್ಮ ರಾಜೀನಾಮೆ ಹಠಾತ್ ನಿರ್ಧಾರವಾಗಿರಲಿಲ್ಲ, ಬದಲಾಗಿ 2024ರಿಂದಲೇ ತಾವು ಅದರ ಬಗ್ಗೆ ಯೋಚಿಸುತ್ತಿದ್ದೆ. ಕೆಲವು ವಾರಗಳ ಹಿಂದೆ ತಾವು ಪಕ್ಷ ತೊರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಪಕ್ಷದ ನಾಯಕತ್ವವು ತಮ್ಮನ್ನು ಸಂಪರ್ಕಿಸಿತ್ತು ಎಂದೂ ಅವರು ತಿಳಿಸಿದರು.
'ನನ್ನನ್ನು ಸಂಪರ್ಕಿಸಬೇಕಿದ್ದವರು ಈಗಾಗಲೇ ಜುಲೈ 30ರಂದೇ ನನ್ನನ್ನು ಸಂಪರ್ಕಿಸಿದ್ದಾರೆ. ಅದಕ್ಕೂ ಬಹಳ ಮುಂಚೆಯೇ, ನಾನು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿಸಿದಾಗ, ನನ್ನ ವಿಷಯವನ್ನು ಹೇಗೆ ನಿಭಾಯಿಸಬಹುದು ಅಥವಾ ನನಗೆ ಹೇಗೆ ನೆರವಾಗಬಹುದು ಎಂಬುದನ್ನು ನೋಡಲು ಅವರು ವಿಶೇಷ ಆಸಕ್ತಿ ವಹಿಸಿದ್ದರು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಮನಸ್ಸು ಅದಕ್ಕೆ ಒಪ್ಪುವುದಿಲ್ಲ. ಬಿಜೆಪಿ ನನಗೆ ಕೇವಲ ಉದ್ಯೋಗದ ಅವಕಾಶವಲ್ಲ; ಅದು ನನ್ನ ಪಾಲಿಗೆ ಒಂದು ಸೈದ್ಧಾಂತಿಕ ವೇದಿಕೆ. ಬಿಜೆಪಿ ಸಿದ್ಧಾಂತ ಅಥವಾ ಮೋದಿಜಿಯವರ ದೂರದೃಷ್ಟಿಗೆ ಬದ್ಧವಾಗಿರಲು, ನಾನು ಪಕ್ಷದಲ್ಲಿ ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿರಬೇಕಾದ ಅಗತ್ಯವಿಲ್ಲ' ಎಂದರು.
ತಮ್ಮ ನಿರ್ಗಮನದ ಕುರಿತು ಹರಿದಾಡುತ್ತಿರುವ ವಿವಿಧ 'ಸ್ಟಿಂಗ್ ಆಪರೇಷನ್'ನಂತಹ 'ಷಡ್ಯಂತ್ರ' ಸಿದ್ಧಾಂತಗಳನ್ನು ತಳ್ಳಿಹಾಕಿದ ಪೂನಾವಾಲಾ, ಅಂತಹ ವಿಡಿಯೋದ ಬಗ್ಗೆ ತಾವು ಇದೇ ಮೊದಲ ಬಾರಿಗೆ ಕೇಳುತ್ತಿರುವುದಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕಥೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಇವುಗಳ ಬೆನ್ನಟ್ಟುವುದಿಲ್ಲ. ಇದನ್ನು ಯಾರು ಹರಡುತ್ತಿದ್ದಾರೋ, ಅವರು ಇದನ್ನು ಅಷ್ಟೇನೂ ರೋಚಕವಾಗಿಸುತ್ತಿಲ್ಲ ಎಂದು ಹೇಳಿದರು.
ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದೇ ಇರುತ್ತವೆ. ಯಾವುದೇ ಸಂಸ್ಥೆಯಲ್ಲಿ, ಅದರಲ್ಲೂ ವಿಶೇಷವಾಗಿ ರಾಜಕೀಯ ಅಥವಾ ಮಾಧ್ಯಮ ಸಂಸ್ಥೆಗಳಲ್ಲಿ, ಎಲ್ಲರ ನಡುವೆಯೂ ಅತ್ಯಂತ ಸೌಹಾರ್ದಯುತ ಹಾಗೂ ಸುಗಮವಾದ ಸಂಬಂಧವಿರುತ್ತದೆ ಎಂದು ಭಾವಿಸುವುದು ವಾಸ್ತವಕ್ಕೆ ದೂರವಾದ ಮಾತು ಎಂದು ಪೂನಾವಾಲಾ ತಿಳಿಸಿದರು.
ಯಾವುದೇ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಪ್ರಸ್ತಾಪಿಸದೆ, ತಮ್ಮ ಪತನವನ್ನು ಬಯಸುವವರು ಇದ್ದಾರೆ. ಸಾರ್ವಜನಿಕ ಜೀವನವು ಹೀಗೆಯೇ ಇರುತ್ತದೆ... ಜನರು ನಿಮ್ಮನ್ನು ಕೆಳಗೆ ಎಳೆಯಲು ಬಯಸುತ್ತಾರೆ ಎಂದು ತಿಳಿಸಿದರು.