ವಿದೇಶಾಂಗ ಸಚಿವ ಎಸ್ ಜೈ ಶಂಕರ್ 
ದೇಶ

'ಗಡಿ ಪರಿಸ್ಥಿತಿಯೇ ಕೀಲಿ.. ಶಾಂತಿ ಇದ್ದರೆ ಮಾತ್ರ ಉತ್ತಮ ಬಾಂಧವ್ಯ’: ಚೀನಾಗೆ S Jaishankar ಸ್ಪಷ್ಟ ಸಂದೇಶ

ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, 2020ರಿಂದ 2024ರವರೆಗೆ ಭಾರತ-ಚೀನಾ ಸಂಬಂಧಗಳು ಅತ್ಯಂತ ಕಠಿಣ ಹಂತವನ್ನು ಎದುರಿಸಿದ್ದವು..

ನವದೆಹಲಿ: ಭಾರತ ಮತ್ತು ಚೀನಾ ಎರಡೂ ದೇಶಗಳು ದ್ವಿಪಕ್ಷೀಯ ಸಂಬಂಧವನ್ನು ಸ್ಥಿರವಾಗಿಡಲು ಆಸಕ್ತಿ ಹೊಂದಿವೆಯಾದರೂ ಉಭಯ ದೇಶಗಳ ನಡುವಿನ ಗಡಿಯಲ್ಲಿನ ಪರಿಸ್ಥಿತಿಯೇ ಸಂಬಂಧಗಳ ಸ್ಥಿತಿಗತಿಗಳನ್ನು ಬಹುಮಟ್ಟಿಗೆ ನಿರ್ಧರಿಸಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, 2020ರಿಂದ 2024ರವರೆಗೆ ಭಾರತ-ಚೀನಾ ಸಂಬಂಧಗಳು ಅತ್ಯಂತ ಕಠಿಣ ಹಂತವನ್ನು ಎದುರಿಸಿದ್ದವು. ಇದಕ್ಕೆ ಪ್ರಮುಖ ಕಾರಣ ಗಡಿ ಪ್ರದೇಶದಲ್ಲಿನ ಪರಿಸ್ಥಿತಿ ಎಂದು ಹೇಳಿದರು.

“2020ರ ಬೇಸಿಗೆಯಿಂದ 2024ರ ಶರತ್ಕಾಲದವರೆಗೆ ನಾವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಇದಕ್ಕೆ ಮುಖ್ಯ ಕಾರಣ ಗಡಿ ಪ್ರದೇಶಗಳಲ್ಲಿನ ಬೆಳವಣಿಗೆಗಳು..ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವುದು ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧಕ್ಕೆ ಮೂಲಭೂತ ಅಗತ್ಯ ಎಂದು ಜೈಶಂಕರ್ ಸ್ಪಷ್ಟಪಡಿಸಿದರು.

“ಕೊನೆಗೂ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಉತ್ತಮ ಸಂಬಂಧಗಳಿಗೆ ಪೂರ್ವಾಪೇಕ್ಷಿತ. ಗಡಿಯ ಸ್ಥಿತಿಯೇ ಬಹುಮಟ್ಟಿಗೆ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯನ್ನು ನಿರ್ಧರಿಸುತ್ತದೆ” ಎಂದು ಜೈಶಂಕರ್ ಹೇಳಿದರು.

‘ಚೀನಾದ ಜೊತೆ ವ್ಯಾಪಾರ ಮಾಡುತ್ತೇವೆ, ಆದರೆ ಹಿತಾಸಕ್ತಿಯಲ್ಲಿ ರಾಜಿ ಇಲ್ಲ’

ಭಾರತ ಜಾಗತಿಕ ಆರ್ಥಿಕತೆಯೊಂದಿಗೆ ಮತ್ತಷ್ಟು ತೊಡಗಿಸಿಕೊಳ್ಳಬೇಕಿದ್ದು, ಅದರಲ್ಲಿ ಚೀನಾವೂ ಸೇರಿದೆ. ಆದರೆ ಚೀನಾದೊಂದಿಗೆ ಆರ್ಥಿಕ ಸಂಬಂಧ ಹೊಂದುವ ಜತೆಗೆ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ದೃಢವಾಗಿ ನಿಲ್ಲಬೇಕು ಎಂದರು.

“ಜಗತ್ತು ಸ್ಪರ್ಧಾತ್ಮಕವಾಗಿದೆ. ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇಡೀ ಜಗತ್ತಿನೊಂದಿಗೆ ವ್ಯಾಪಾರ ಮಾಡಬೇಕು. ಅದರಲ್ಲಿ ಚೀನಾವೂ ಸೇರಿದೆ. ಆದರೆ ನಾವು ಆತ್ಮವಿಶ್ವಾಸದಿಂದ ವ್ಯವಹರಿಸಬೇಕು ಮತ್ತು ಗಡಿಯಲ್ಲಿ ಹೇಗೆ ದೃಢವಾಗಿ ನಿಂತಿದ್ದೇವೋ ಹಾಗೆಯೇ ನಮ್ಮ ನಿಲುವಿನಲ್ಲೂ ದೃಢವಾಗಿರಬೇಕು” ಎಂದು ಜೈಶಂಕರ್ ಹೇಳಿದರು.

ಗಲ್ವಾನ್ ಬಳಿಕ ಸಂಬಂಧಕ್ಕೆ ದೊಡ್ಡ ಹೊಡೆತ

2020ರಲ್ಲಿ ನಡೆದ ಮಾರಕ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತ-ಚೀನಾ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು. ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಆರಂಭವಾದ ಮುಖಾಮುಖಿ ಹಲವು ವರ್ಷಗಳ ಕಾಲ ಮುಂದುವರಿದಿತ್ತು.

2024ರ ಅಕ್ಟೋಬರ್‌ನಲ್ಲಿ ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿನ ಸೇನಾ ಹಿಂಪಡೆಯುವಿಕೆ ಕುರಿತು ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿದ್ದವು. ಬಳಿಕ ಕಜಾನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭೇಟಿಯಾಗಿ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳ ಕುರಿತು ಚರ್ಚಿಸಿದ್ದರು.

‘ಎರಡೂ ದೇಶಗಳಿಗೆ ಸ್ಥಿರ ಸಂಬಂಧ ಅಗತ್ಯ’

ಭಾರತ ಮತ್ತು ಚೀನಾ ಎರಡೂ ದೊಡ್ಡ ಆರ್ಥಿಕತೆಗಳಾಗಿದ್ದು, ಹಲವು ಕ್ಷೇತ್ರಗಳಲ್ಲಿ ಪರಸ್ಪರ ಮಾರುಕಟ್ಟೆಗಳಾಗಿವೆ. ಜಾಗತಿಕ ಪೂರೈಕೆ ಸರಪಳಿಗಳಲ್ಲಿಯೂ ಎರಡೂ ದೇಶಗಳು ಪ್ರಮುಖ ಪಾತ್ರ ಹೊಂದಿವೆ. ರಾಜಕೀಯ ಹಾಗೂ ಕಾರ್ಯತಂತ್ರದ ಮಟ್ಟದಲ್ಲಿ, ಎರಡೂ ದೇಶಗಳಿಗೂ ಒಂದು ಸ್ಥಿರ ಸಂಬಂಧವನ್ನು ಕಾಪಾಡಿಕೊಳ್ಳುವ ಆಸಕ್ತಿ ಇದೆ ಎಂದು ಜೈಶಂಕರ್ ಹೇಳಿದರು.

ಚೀನಾವನ್ನು ಎದುರಿಸಲು ಭಾರತದ ಸಾಮರ್ಥ್ಯ ಹೆಚ್ಚಬೇಕು

ಚೀನಾ ಭಾರತಕ್ಕಿಂತ ಮೊದಲೇ ಮತ್ತು ಬಹಳ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೀಕರಣಗೊಂಡಿದೆ. ಭಾರತ ಕಳೆದ ಹಲವು ದಶಕಗಳಲ್ಲಿ ಉತ್ಪಾದನೆ ಹಾಗೂ ಕೈಗಾರಿಕೀಕರಣವನ್ನು ಆಳವಾಗಿ ವಿಸ್ತರಿಸುವ ಹಲವು ಅವಕಾಶಗಳನ್ನು ಕಳೆದುಕೊಂಡಿದೆ.

ಇದೀಗ ಆ ಕೊರತೆಗಳನ್ನು ಸರಿಪಡಿಸುವ ಅಗತ್ಯವಿದೆ ಎಂದ ಅವರು, ಆತ್ಮನಿರ್ಭರ, ಕೈಗಾರಿಕೀಕೃತ ಹಾಗೂ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಬಲಿಷ್ಠ ಭಾರತ ಚೀನಾದಷ್ಟೇ ಅಲ್ಲದೆ ವಿಶ್ವದ ಇತರ ಪ್ರಮುಖ ರಾಷ್ಟ್ರಗಳೊಂದಿಗೂ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಲ್ಲದೆ ಚೀನಾದಲ್ಲಿ ವ್ಯಾಪಾರ ನಡೆಸುತ್ತಿರುವ ಭಾರತೀಯ ಉದ್ಯಮಿಗಳು ಎದುರಿಸುತ್ತಿರುವ ವೀಸಾ ಸಂಬಂಧಿತ ಸಮಸ್ಯೆಗಳನ್ನೂ ಭಾರತ ಅಲ್ಲಿನ ಅಧಿಕಾರಿಗಳ ಗಮನಕ್ಕೆ ತಂದಿದೆ ಎಂದು ಜೈಶಂಕರ್ ತಿಳಿಸಿದರು.

ಅಮೆರಿಕ-ಚೀನಾ ಸಂಬಂಧವನ್ನೂ ಗಮನಿಸುತ್ತೇವೆ

ಅಮೆರಿಕ-ಚೀನಾ ಸಂಬಂಧವನ್ನು ಕೆಲವರು ‘G2’ ಎಂದು ಬಣ್ಣಿಸುವುದರ ಬಗ್ಗೆಯೂ ಜೈಶಂಕರ್ ಎಚ್ಚರಿಕೆ ವಹಿಸಬೇಕು ಎಂದರು. ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧ ಮೂಲಭೂತವಾಗಿ ಸ್ಪರ್ಧಾತ್ಮಕವಾಗಿದ್ದರೂ, ಕೆಲವು ವಿಚಾರಗಳಲ್ಲಿ ಎರಡೂ ದೇಶಗಳು ಸಹಕರಿಸಬಹುದು ಮತ್ತು ಕೆಲವು ಕ್ಷೇತ್ರಗಳಲ್ಲಿ ಪರಸ್ಪರ ನಿರ್ಲಕ್ಷ್ಯ ವಹಿಸಬಹುದು ಎಂದರು.

“ಪ್ರತಿ ವಿಚಾರದಲ್ಲೂ, ಪ್ರತಿ ಪ್ರದೇಶದಲ್ಲೂ, ಪ್ರತಿ ಸಮಯದಲ್ಲೂ ಅವುಗಳು ಪರಸ್ಪರ ಸ್ಪರ್ಧಿಸುವುದಿಲ್ಲ. ಆದ್ದರಿಂದ ಅದು ಸಹಜವಾಗಿಯೇ ಅತ್ಯಂತ ಸಂಕೀರ್ಣವಾದ ಸಂಬಂಧ. ಭಾರತಕ್ಕೆ ಯಾವುದೇ ದೇಶದೊಂದಿಗಿನ ಸಂಬಂಧವನ್ನು ನಿರ್ಧರಿಸುವಾಗ ರಾಷ್ಟ್ರೀಯ ಹಿತಾಸಕ್ತಿಯೇ ಪ್ರಮುಖ ಮಾರ್ಗದರ್ಶಕ ತತ್ವವಾಗಿರಲಿದೆ ಎಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದರು.

“ಆ ಸಂಬಂಧ ನಮ್ಮ ಹಿತಾಸಕ್ತಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತದೆ ಎಂಬುದನ್ನು ಆಧರಿಸಿ ನಾವು ಅದನ್ನು ನಿರಂತರವಾಗಿ ಗಮನಿಸಿ, ಮೌಲ್ಯಮಾಪನ ಮಾಡುತ್ತೇವೆ” ಎಂದು ಜೈಶಂಕರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IAS ಅಧಿಕಾರಿ ನಿಗೂಢ ಕಣ್ಮರೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ನಾಪತ್ತೆ ಆಗಿಲ್ಲ, ಆದ್ರೆ...: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಗೂರ್ಖಾ ಸಮಸ್ಯೆಗೆ 'ಶಾಶ್ವತ ರಾಜಕೀಯ ಪರಿಹಾರಕ್ಕೆ ಕೇಂದ್ರದಿಂದ ಸಮಿತಿ ರಚನೆ

CAA ಅರ್ಜಿದಾರರಿಗೆ ಗುಡ್‌ನ್ಯೂಸ್: ಹಿಂದೂ, ಸಿಖ್, ಜೈನ ನಿರಾಶ್ರಿತರಿಗೆ 6 ತಿಂಗಳಲ್ಲಿ ಭಾರತೀಯ ಪೌರತ್ವ- Amit shah

Nestle, PepsiCo, Coca-Cola.. ದಿಗ್ಗಜ ಕಂಪನಿಗಳ ವಿರುದ್ಧವೇ ಆಕ್ಷನ್; FSSAI ನೋಟಿಸ್, ಉತ್ಪನ್ನಗಳ ಜಪ್ತಿ ಎಚ್ಚರಿಕೆ!

ಬೆಚ್ಚಿಬೀಳಿಸುವ ಅಪಘಾತ: ಪಿಕಪ್ ವ್ಯಾನ್‌ನಿಂದ ಕಬ್ಬಿಣದ ಸರಳುಗಳು ಬಿದ್ದು ಬೈಕ್ ಸವಾರ ಸಾವು!-Video