ಜೈಪುರ: ವಿದ್ಯಾರ್ಥಿನಿಯರ ಜೊತೆ ಡ್ಯಾಂನಲ್ಲಿ ಸ್ನಾನ ಮಾಡುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲನನ್ನು ಅಮಾನತು ಮಾಡಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ರಾಜಸ್ಥಾನದ ಅಳ್ವಾರ್ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲರು ವಿದ್ಯಾರ್ಥಿನಿಯರೊಂದಿಗೆ ಡ್ಯಾಂನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಲಾಗಿದೆ.
ಥಾನಾಗಾಜಿ ಪ್ರದೇಶದ ರೌಬಾವಿ ಪಡಕ್ ಛಾಪ್ಲಿ ಸರ್ಕಾರಿ ಹಿರಿಯ ಪ್ರೌಢಶಾಲೆಯ ಪ್ರಾಂಶುಪಾಲ ಲಾಲ್ ಚಂದ್ ಮೀಣಾ ಅವರನ್ನು ಬಿಕಾನೇರ್‌ನ ಮಾಧ್ಯಮಿಕ ಶಿಕ್ಷಣ ನಿರ್ದೇಶನಾಲಯ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ಶನಿವಾರ ಹೊರಡಿಸಲಾದ ಅಮಾನತು ಆದೇಶದ ಪ್ರಕಾರ, ಮೀಣಾ ಹಾಗೂ ಶಾಲೆಯ ವಿದ್ಯಾರ್ಥಿನಿಯರನ್ನು ಒಳಗೊಂಡಿರುವ ಆಕ್ಷೇಪಾರ್ಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಪ್ರಾಂಶುಪಾಲರ ಈ ವರ್ತನೆಯು ಪ್ರಾಥಮಿಕವಾಗಿ ಸರ್ಕಾರಿ ನೌಕರರಿಗೆ ನಿಗದಿಪಡಿಸಿರುವ ಸೇವಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1958ರ ನಿಯಮ 13(1)ರ ಅಡಿಯಲ್ಲಿ ಮೀಣಾ ವಿರುದ್ಧ ಇಲಾಖಾ ತನಿಖೆಯನ್ನೂ ಆರಂಭಿಸಲಾಗಿದೆ.
ಅಮಾನತು ಅವಧಿಯಲ್ಲಿ ಮೀಣಾ ಅವರ ಕೇಂದ್ರ ಕಚೇರಿ ಬಿಕಾನೇರ್‌ನ ಮಾಧ್ಯಮಿಕ ಶಿಕ್ಷಣ ನಿರ್ದೇಶನಾಲಯದಲ್ಲೇ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.