ಶಾಮ್ಲಿ (ಉತ್ತರ ಪ್ರದೇಶ): ಹರ್ಯಾಣ್ವಿ ಜನಪ್ರಿಯ ಗಾಯಕ ಮತ್ತು ಯೂಟ್ಯೂಬರ್ ಆಗಿದ್ದ 32 ವರ್ಷದ ಅಂಕಿತ್ ಬಲಿಯಾನ್ (Ankit Balyan) ಅವರನ್ನು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಜಿಮ್ ಹೊರಗೆ ದುಷ್ಕರ್ಮಿಗಳು ಗುಂಡಿಕ್ಕಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಇಡೀ ಪ್ರದೇಶದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಆ ಕುರಿತ ವರದಿ ಇಲ್ಲಿದೆ:
ಘಟನೆ ನಡೆದಿದ್ದು ಹೇಗೆ?:
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಶಾಮ್ಲಿ ನಗರ ಕೊತ್ವಾಲಿ ವ್ಯಾಪ್ತಿಯ ಆರ್ಯಪುರಿ ನಾಲಾಪತ್ರಿ ಬಳಿ ಈ ಭೀಕರ ಘಟನೆ ನಡೆದಿದೆ. ಜನಪ್ರಿಯ ಹರ್ಯಾಣ್ವಿ ಗಾಯಕ ಹಾಗೂ ಯೂಟ್ಯೂಬರ್ ಆಗಿದ್ದ 32 ವರ್ಷದ ಅಂಕಿತ್ ಬಲಿಯಾನ್ ಅವರು, ಶಾಮ್ಲಿಯ ಸಿಟಿ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿಮ್ ಒಂದರಿಂದ, ಸಂಜೆ 7 ಗಂಟೆಯ ಸುಮಾರಿಗೆ, ವರ್ಕೌಟ್ ಮುಗಿಸಿ ಹೊರಬಂದು, ತಮ್ಮ ಸ್ಕಾರ್ಪಿಯೋ ಕಾರಿನತ್ತ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದ 4 ಜನ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ಸುಮಾರು 18-20 ಸುತ್ತು ಗುಂಡಿನ ದಾಳಿ:
ಹಂತಕರು ಅಂಕಿತ್ ಅವರ ಮೇಲೆ ಪಾಯಿಂಟ್ ಬ್ಲಾಂಕ್ ಶ್ರೇಣಿಯಲ್ಲಿ ಸುಮಾರು 18 ರಿಂದ 20 ಸುತ್ತುಗಳಷ್ಟು ಭೀಕರವಾಗಿ ಗುಂಡು ಹಾರಿಸಿದ್ದಾರೆ. ಅದರಂತೆ, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಏತನ್ಮಧ್ಯೆ, ಪ್ರಾಥಮಿಕ ವರದಿಗಳ ಪ್ರಕಾರ, ದೆಹಲಿಯ ಕುಖ್ಯಾತ ಗೋಗಿ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಹೇಳಲಾಗಿದೆ. ಅಂಕಿತ್ ತಮ್ಮ ವಿರೋಧಿ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದರು ಮತ್ತು ಅವರ ವಿರುದ್ಧ ಹಾಡೊಂದನ್ನು ಮಾಡಿದ್ದರು ಎಂಬ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂದು ಗ್ಯಾಂಗ್ ಸದಸ್ಯರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ವಿಪರ್ಯಾಸವೆಂದರೆ, ಹತ್ಯೆಯಾಗುವ ಕೇವಲ 2 ಗಂಟೆಗಳ ಮುನ್ನ ಅಂಕಿತ್ ಬಲ್ಯಾನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ತಾವೇ ಹಾಡಿದ್ದ "ಭರಿ ಕೋರ್ಟ್ ಮೇ ಗೋಲಿ ಮಾರೇಂಗೆ ಮೇರಿ ಜಾನ್" (ತುಂಬಿದ ಕೋರ್ಟ್‌ನಲ್ಲೇ ಗುಂಡಿಕ್ಕಿ ಕೊಲ್ಲುತ್ತೇವೆ) ಎಂಬ ಗನ್ ಕಲ್ಚರ್ ಆಧಾರಿತ ಹಾಡನ್ನು ಬಳಸಿದ್ದರು.
ಮತ್ತೊಂದೆಡೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಶೂನ್ಯವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ರಾಜಕೀಯ ದ್ವೇಷದ ಆಯಾಮದಲ್ಲೂ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಇದರ ನಡುವೆ, ಕೊಲೆಯಿಂದ ಆಕ್ರೋಶಗೊಂಡ ಅಂಕಿತ್ ಕುಟುಂಬಸ್ಥರು ಮತ್ತು ಬೆಂಬಲಿಗರು ಹಂತಕರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ದೆಹಲಿ-ಮುಜಾಫರ್ ನಗರ ರಸ್ತೆಯನ್ನು ತಡೆದು ತೀವ್ರ ಪ್ರತಿಭಟನೆ ನಡೆಸಿದ್ದಾರೆ.