ಲಖನೌ: ನೆರೆಯ ರಾಷ್ಟ್ರ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಡುವೆ ಅಲ್ಲಿಂದ ಕೊಚ್ಚಿಕೊಂಡು ಬರುತ್ತಿರುವ ಮೃತದೇಹಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಮತ್ತೆ ಮೂರು ಮೃತದೇಹಗಳು ನದಿಯಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗಿದೆ.
ನೇಪಾಳದಿಂದ ಕೊಚ್ಚಿಕೊಂಡು ಬಂದಿರಬಹುದೆಂದು ಶಂಕಿಸಲಾಗಿರುವ ಮೂರು ಮೃತದೇಹಗಳು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಗಂಡಕ್ ನದಿಯಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ಖಡ್ಡಾ ಪ್ರದೇಶದ ಮದನ್‌ಪುರ-ಸುಕ್ರೌಲಿ ಬಳಿ ಗಂಡಕ್ ನದಿಯ ಬ್ಯಾರೇಜ್‌ನ 3ನೇ ಪಿಯರ್ ಸಮೀಪ ಮೃತದೇಹಗಳು ತೇಲುತ್ತಿರುವುದು ಕಂಡುಬಂದಿತ್ತು. ಮಾಹಿತಿ ದೊರೆತ ತಕ್ಷಣ ಪೊಲೀಸರು ಹಾಗೂ ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಮೃತರ ಗುರುತು ಪತ್ತೆಹಚ್ಚಲು ಕ್ರಮ ಕೈಗೊಂಡರು.
ಖಡ್ಡಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಂದೀಪ್ ಸಿಂಗ್ ಅವರ ಪ್ರಕಾರ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF)ಯ ಮೇಲ್ವಿಚಾರಣಾ ತಂಡಗಳು ನದಿಯಲ್ಲಿ ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿವೆ. ಬಳಿಕ ಅವುಗಳನ್ನು ನದಿಯಿಂದ ಹೊರತೆಗೆಯಲಾಗಿದೆ.
ಮೃತದೇಹಗಳ ಪತ್ತೆ ಕುರಿತು ನೇಪಾಳದ ಗಡಿ ಜಿಲ್ಲೆಗಳ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದ್ದು, ಗುರುತು ಪತ್ತೆಹಚ್ಚಲು ಅವರ ಸಹಕಾರ ಪಡೆಯಲಾಗುತ್ತಿದೆ. ಆದರೆ, ಮೃತದೇಹಗಳನ್ನು ತಕ್ಷಣ ಗುರುತಿಸಲು ಸಾಧ್ಯವಾಗಿಲ್ಲ.
ಮಹಾರಾಜ್‌ಗಂಜ್‌ನಲ್ಲೂ 4 ಶವ ಪತ್ತೆ
ಕುಶಿನಗರದಲ್ಲಿ ಮೂರು ಮೃತದೇಹಗಳು ಪತ್ತೆಯಾಗಿರುವ ಘಟನೆಗೆ ಒಂದು ದಿನ ಮುನ್ನ, ನೆರೆಯ ಮಹಾರಾಜ್‌ಗಂಜ್ ಜಿಲ್ಲೆಯ ನದಿಯೊಂದರಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿದ್ದ ಈ ಮೃತದೇಹಗಳ ಗುರುತು ಕೂಡ ಇನ್ನೂ ಪತ್ತೆಯಾಗಿಲ್ಲ. ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತದ ಬಳಿಕ ನಾಪತ್ತೆಯಾಗಿರುವವರ ಪೈಕಿ ಇವರು ಇರಬಹುದೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳು ನೇಪಾಳ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದಾರೆ.
ಆಗಸ್ಟ್ 26ರಂದು ಆರಂಭವಾಗಿದ್ದ ಪ್ರವಾಹ
ನೇಪಾಳದ ರಸುವಾ ಪ್ರದೇಶದಲ್ಲಿ ಭೋಟೆಕೋಶಿ ನದಿಯ ನೀರಿನ ಮಟ್ಟ ಏಕಾಏಕಿ ಹೆಚ್ಚಾದ ಬಳಿಕ ಆಗಸ್ಟ್ 26ರಂದು ಭೀಕರ ಹಠಾತ್ ಪ್ರವಾಹ ಆರಂಭವಾಗಿತ್ತು. ಪ್ರವಾಹದ ನೀರು ಬಳಿಕ ತ್ರಿಶೂಲಿ ಮತ್ತು ಗಂಡಕ್ ನದಿ ವ್ಯವಸ್ಥೆಗಳಿಗೆ ಹರಿದುಬಂದು, ಕೆಳಭಾಗದ ಹಲವು ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಕುಶಿನಗರ ಜಿಲ್ಲಾಡಳಿತವು ಗಂಡಕ್ ನದಿ ಹಾಗೂ ಅದರ ದಡದ ಪ್ರದೇಶಗಳಲ್ಲಿ ನಿಗಾ ಹೆಚ್ಚಿಸಿದೆ. SDRF, ಪೊಲೀಸರು ಮತ್ತು ಇತರ ತಂಡಗಳು ಅಪಾಯ ಸಾಧ್ಯತೆ ಇರುವ ಪ್ರದೇಶಗಳ ಮೇಲೆ ನಿರಂತರ ಕಣ್ಣಿಟ್ಟಿವೆ.
ಈ ಹಿಂದೆ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಸದ್ಯ ನದಿಯ ಹರಿವು ಇಳಿಕೆಯಾಗಿರುವುದರಿಂದ ತಕ್ಷಣದ ಪ್ರವಾಹದ ಅಪಾಯ ಕಡಿಮೆಯಾಗಿದೆ. ಆದರೂ, ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿರಂತರವಾಗಿ ನಿಗಾ ಇರಿಸಿದ್ದಾರೆ.
ನದಿಯಲ್ಲಿ ವಾಹನ, ಗ್ಯಾಸ್ ಸಿಲಿಂಡರ್‌ಗಳೂ ಪತ್ತೆ
ಮೃತದೇಹಗಳಷ್ಟೇ ಅಲ್ಲದೆ, ಹಲವು ವಾಹನಗಳು, ಗೃಹೋಪಯೋಗಿ ವಸ್ತುಗಳು, ಗ್ಯಾಸ್ ಸಿಲಿಂಡರ್‌ಗಳು, ಡ್ರಮ್‌ಗಳು, ಪೀಠೋಪಕರಣಗಳು, ಮರದ ದಿಮ್ಮಿಗಳು ಸೇರಿದಂತೆ ವಿವಿಧ ಅವಶೇಷಗಳು ಗಂಡಕ್ ನದಿಯಲ್ಲಿ ತೇಲುತ್ತಿರುವುದು ಹಾಗೂ ನದಿ ದಡದಲ್ಲಿ ಕೊಚ್ಚಿಕೊಂಡು ಬಂದು ಬೀಳುತ್ತಿರುವುದು ಕಂಡುಬಂದಿದೆ.
ನದಿಯಿಂದ ಕೊಚ್ಚಿಕೊಂಡು ಬರುತ್ತಿರುವ ವಸ್ತುಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ನದಿ ದಡದಲ್ಲಿ ಜಮಾಯಿಸುತ್ತಿದ್ದಾರೆ. ಆದರೆ, ನದಿಗೆ ಇಳಿದು ತೇಲಿ ಬಂದ ವಸ್ತುಗಳನ್ನು ಸಂಗ್ರಹಿಸದಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ. ನದಿಯಲ್ಲಿ ಯಾವುದೇ ವಸ್ತುಗಳು ತೇಲುತ್ತಿರುವುದು ಕಂಡುಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.