ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಇಸ್ರೇಲ್ ವಿರುದ್ಧ ಪ್ಯಾಲೆಸ್ತೀನ್ ಪರವಾಗಿ ಸ್ಟಿಕ್ಕರ್‌ಗಳನ್ನು ಅಂಟಿಸಿದ ಬ್ರಿಟಿಷ್ ದಂಪತಿಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿದೆ. ಗುಪ್ತಚರ ಇಲಾಖೆ (CID/IB) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾ ಪೊಲೀಸರಗೆ ಮಾಹಿತಿ ನೀಡಿದೆ. ನಂತರ ಇಬ್ಬರು ಬ್ರಿಟಿಷ್ ಪ್ರಜೆಗಳನ್ನು ವಿಚಾರಣೆಗೆ ಒಳಪಡಿಸಲಾಯಿತು.
ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ ಲೂಯಿಸ್ ಗೇಬ್ರಿಯಲ್ ಡಿ ಹಾಗೂ ಅವರ ಗರ್ಲ್ ಫ್ರೆಂಡ್ ಅನುಶಿ ಎಮ್ಮಾ ಕ್ರಿಸ್ಟಿನ್ ಪುಷ್ಕರ್‌ನಲ್ಲಿ ತಂಗಿದ್ದರು. ಜನವರಿ 21ರಂದು ಇವರು ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿತ್ತು. ಬಳಿಕ ಸಿಸಿಟಿವಿ ದೃಶ್ಯಾವಳಿ ಮತ್ತು ಸ್ಥಳೀಯ ಮಾಹಿತಿ ಆಧಾರದ ಮೇಲೆ ಶಂಕಿತರನ್ನು ಗುರುತಿಸಿದೆ.
ವಿಷಯ ಗಂಭೀರವಾಗಿದೆ ಎಂದು ಗುಪ್ತಚರ ಇಲಾಖೆ ಪರಿಗಣಿಸಿದ ಬಳಿಕ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಸಿಐಡಿ) ರಾಜೇಶ್ ಮೀನಾ ನೇತೃತ್ವದ ತಂಡವು ವಿಚಾರಣೆಗೆ ಒಳಪಡಿಸಿತು. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ಷರತ್ತು ಉಲ್ಲಂಘಿಸಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ನಂತರ ಜಿಲ್ಲಾ ಪೊಲೀಸರ ನೆರವಿನೊಂದಿಗೆ ಸ್ಟಿಕ್ಕರ್‌ಗಳನ್ನು ತೆಗೆದುಹಾಕಲಾಯಿತು. ವಲಸೆ ಮತ್ತು ವಿದೇಶಿಯರ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗಿದ್ದು, ಇಬ್ಬರೂ ವಿದೇಶಿ ಪ್ರಜೆಗಳ ವೀಸಾಗಳನ್ನು ರದ್ದುಪಡಿಸಿ, ದೇಶ ತೊರೆಯುವಂತೆ ನೋಟಿಸ್ ನೀಡಲಾಗಿದೆ.
ಪ್ರವಾಸಿ ವೀಸಾದಲ್ಲಿ ದೇಶದಲ್ಲಿದ್ದಾಗ ಯಾವುದೇ ರೀತಿಯ ರಾಜಕೀಯ, ಪ್ರತಿಭಟನೆ ಅಥವಾ ಸೈದ್ಧಾಂತಿಕ ಚಟುವಟಿಕೆಗಳಿಗೆ ಅನುಮತಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.