ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉದಂಪುರ ಜಿಲ್ಲೆಯ ರಾಮನಗರ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನಾಪಡೆ, ಗುಹೆಯಲ್ಲಿ ಅಡಗಿ ಕುಳಿತಿದ್ದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದಿದೆ.
ಮೂಲಗಳ ಪ್ರಕಾರ, ಭದ್ರತಾ ಪಡೆಗಳು ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿದ್ದು, ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ಹತ್ಯೆಯಾದ ಉಗ್ರರಲ್ಲಿ ಒಬ್ಬನು ಜೈಶ್ ಸಂಘಟನೆಯ ಉನ್ನತ ಮಟ್ಟದ ಕಮಾಂಡರ್ ಆಗಿದ್ದ ಎಂದು ತಿಳಿದುಬಂದಿದೆ. ಉಗ್ರರ ಹತ್ಯೆಯನ್ನು ಸೇನೆಯು ದೃಢಪಡಿಸಿದೆ.
ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಮ್ಮು–ಕಾಶ್ಮೀರ ಪೊಲೀಸರ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಸಿಐಎಫ್ ಡೆಲ್ಟಾ ಪಡೆ, ವೈಟ್ ನೈಟ್ ಕಾರ್ಪ್ಸ್, ಜಮ್ಮು–ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಜೋಫರ್ ಅರಣ್ಯ (ಬಸಂತಗಢ) ಪ್ರದೇಶದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆ ವೇಳೆ ಉಗ್ರರು ಅಡಗಿ ಕುಳಿತಿರುವುದು ಖಚಿತವಾಗಿತ್ತು.
ನಂತರ ಉಗ್ರರು ತಪ್ಪಿಸಿಕೊಳ್ಳದಂತೆ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಯಿತು. ಸಮನ್ವಯಿತ ಮತ್ತು ನಿಯಂತ್ರಿತ ಕಾರ್ಯಾಚರಣೆಯಿಂದಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದೆ. ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವವನ್ನು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ರುಬಾನಿ ಅಲಿಯಾಸ್ ಅಬು ಮುವಾವಿಯಾ ಎಂದು ಗುರ್ತಿಸಲಾಗಿದೆ.
ಮೂಲಗಳ ಪ್ರಕಾರ, ಸೋಮವಾರ ಸೇನಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಈ ವೇಳೆ ಉಗ್ರರೊಂದಿಗೆಗುಂಡಿನ ಚಕಮಕಿ ನಡೆದಿದ್ದು, ಬಳಿಕ ಉಗ್ರರು ತಪ್ಪಿಸಿಕೊಳ್ಳಲು ದಟ್ಟ ಅರಣ್ಯದೊಳಗೆ ನುಸುಳಿದ್ದಾರೆ. ಉಗ್ರರ ಚಲನವಲನ ಪತ್ತೆಹಚ್ಚಲು ಡ್ರೋಣ್, ಯುಎವಿ ಮತ್ತು ಇತರ ಉಪಕರಣಗಳನ್ನು ಬಳಕೆ ಮಾಡಲಾಗಿತ್ತು. ಡ್ರೋಣ್ ದೃಶ್ಯಗಳಲ್ಲಿ ಉಗ್ರರು ಅರಣ್ಯದೊಳಗಿನ ಗುಹೆಯಲ್ಲಿ ಅಡಗಿರುವುದು ಪತ್ತೆಯಾಗಿತ್ತು.
ಉಗ್ರರು ಗುಹೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಬಳಿಕ ಉಗ್ರರು ಮರಳಿ ಗುಹೆಯೊಳಗೆ ಹೋಗಿದ್ದಾರೆ. ನಂತರ ಸ್ಥಳವನ್ನು ಸುತ್ತುವರೆದ ಸೇನಾಪಡೆ ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಎಲೈಟ್ ಪ್ಯಾರಾ ಕಮಾಂಡೋಗಳೂ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.
ಈ ನಡುವೆ, ಕಿಶ್ತವಾರ ಜಿಲ್ಲೆಯ ಚಾತ್ರೂ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿರುವ ಇನ್ನೂ ಮೂವರು ಉಗ್ರರ ಹೆಡೆಮುರಿ ಕಟ್ಟಲು ಭದ್ರತಾ ಪಡೆಗಳು ಭಾರೀ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಈ ಹಿನ್ನೆಲೆ, ಆ ಪ್ರದೇಶದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಜನವರಿ 18ರಂದು ನಡೆದ ಎನ್‌ಕೌಂಟರ್ ವೇಳೆ ಉಗ್ರರು ನಡೆಸಿದ್ದ ಗುಂಡಿನ ದಾಳಿಯಲ್ಲಿ ಓರ್ವ ಪ್ಯಾರಾ ಕಮಾಂಡೋ ಹುತಾತ್ಮನಾಗಿ, ಎಂಟು ಮಂದಿ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದರು.
ಆ ಬಳಿಕ ಚಾತ್ರೂ, ಸಿಂಗ್‌ಪುರಾ ಮತ್ತು ಚಿಂಗುಮ್ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಉಗ್ರರು ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದು, ಜಂಗಲ್ ವಾರ್ಫೇರ್ (jungle warfare) ತರಬೇತಿ ಪಡೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಶಂಕೆಗಳು ದಟ್ಟವಾಗಿರುವ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಕಥುವಾ, ಪೂಂಚ್, ರಾಜೌರಿ, ಉಧಂಪುರ, ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳ ದಟ್ಟ ಅರಣ್ಯ ಪ್ರದೇಶಗಳಲ್ಲಿ ಅಡಗಿರುವ ಉಗ್ರರನ್ನು ಪತ್ತೆಹಚ್ಚಲು ಆಪರೇಷನ್ ಕಿಯಾ ಆರಂಭಿಸಿದ್ದಾರೆ.