ನ್ಯೂಯಾರ್ಕ್: ಜೈಲಿನಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತ ಉಮರ್ ಖಾಲಿದ್ ಕೇಸ್ ಸಂಬಂಧ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ನ್ಯಾಯಯುತವಾಗಿ ತನಿಖೆ ನಡೆಸಬೇಕು ಎಂದು ಯುಎಸ್ ಕಾಂಗ್ರೆಸ್ ನ ಎಂಟು ಸದಸ್ಯರು ಭಾರತವನ್ನು ಒತ್ತಾಯಿಸಿದ್ದಾರೆ. ಇದೀಗ ನ್ಯೂಯಾರ್ಕ್ ನಗರದ ಹೊಸ ಮೇಯರ್ ಜೋಹ್ರಾನ್ ಮಮ್ದಾನಿ ಕೂಡಾ ಖಾಲಿದ್ ಗೆ ಬೆಂಬಲ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ UAPA ಆರೋಪದಡಿ ತಿಹಾರ್ ಜೈಲಿನಲ್ಲಿರುವ ಉಮರ್ ಖಾಲಿದ್ ಗೆ ಜೋಹ್ರನ್ ಮಮ್ದಾನಿ ಬರೆದಿರುವ ಪತ್ರವನ್ನು ಆತನ ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಪೋಷಕರನ್ನು ಭೇಟಿ ಮಾಡಿದ್ದು ಸಂತಸ ತಂದಿತು. ನಾವೆಲ್ಲರೂ ನಿಮ್ಮದೇ ಯೋಚನೆಯಲ್ಲಿದ್ದೇವೆ’ ಎಂದು ಜೋಹ್ರಾನ್ ಮಮ್ದಾನಿ ಆ ಪತ್ರದಲ್ಲಿ ಬರೆದಿದ್ದಾರೆ.
ಪತ್ರವು ಖಾಲಿದ್ ಅವರ ಪೋಷಕರೊಂದಿಗೆ ಮಮ್ದಾನಿ ಅವರ ಭೇಟಿಯನ್ನು ನೆನಪಿಸಿಕೊಂಡಿದೆ ಮತ್ತು ಜೈಲಿನಲ್ಲಿರುವ ಕಾರ್ಯಕರ್ತನಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದೆ. ‘ಪ್ರಿಯ ಉಮರ್, ಜೀವನದ ಕಹಿ ಹಾಗೂ ಅದು ಸ್ವನಾಶಕ್ಕೆ ಆಸ್ಪದ ಕೊಡದೇ ತಡೆಯುವುದು ಎಷ್ಟು ಮುಖ್ಯ ಎಂದು ನೀವು ಹೇಳಿದ ಮಾತುಗಳನ್ನು ಆಗಾಗ ನೆನಪಿಸಿಕೊಳ್ಳುತ್ತಿರುತ್ತೇನೆ. ನಿಮ್ಮ ಪೋಷಕರನ್ನು ಭೇಟಿ ಮಾಡಿದ್ದು ಸಂತಸ ತಂದಿತು. ನಾವೆಲ್ಲರೂ ನಿಮ್ಮದೇ ಯೋಚನೆಯಲ್ಲಿದ್ದೇವೆ’ ಎಂದು ಜೋಹ್ರಾನ್ ಮಮ್ದಾನಿ ಆ ಪತ್ರದಲ್ಲಿ ಬರೆದಿದ್ದಾರೆ.
ಈ ಮಧ್ಯೆ ಅಮೆರಿಕದ ಎಂಟು ಜನಪ್ರತಿನಿಧಿಗಳು ಖಾಲಿದ್ ಅವರ ಪೋಷಕರನ್ನು ಡಿಸೆಂಬರ್ ನಲ್ಲಿ ಭೇಟಿಯಾಗಿದ್ದು, ಆತನ ಧೀರ್ಘಾವಧಿಯ ಬಂಧನದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಅವರಿಗೆ ಬರೆದಿದ್ದಾರೆ.
2020 ರ ದೆಹಲಿ ಹಿಂಸಾಚಾರದ ಹಿಂದೆ ಪಿತೂರಿ ಇದೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಡಜನ್ ಆರೋಪಿಗಳಲ್ಲಿ ಖಾಲಿದ್ ಒಬ್ಬರಾಗಿದ್ದಾರೆ. ಸುಮಾರು ಆರು ವರ್ಷಗಳ ಹಿಂದೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ಜಾಮೀನು ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಇತ್ತೀಚೆಗೆ ಸಹೋದರಿಯ ಮದುವೆಗೆ ಹಾಜರಾಗಲು ಡಿಸೆಂಬರ್ 16-29 ರವರೆಗೆ ಖಾಲಿದ್‌ಗೆ ದೆಹಲಿ ನ್ಯಾಯಾಲಯ ತಾತ್ಕಾಲಿಕ ಜಾಮೀನು ನೀಡಿತ್ತು. ತದನಂತರ ಮತ್ತೆ ತಿಹಾರ್ ಜೈಲಿಗೆ ಹಿಂತಿರುಗಿದ್ದರು.