ಕೋಲ್ಕತ್ತಾ: ಛತ್ತೀಸ್‌ಗಢದ ರಾಯಪುರದಲ್ಲಿ ಬಂಗಾಳಿ ಮಾತನಾಡುವ ಎಂಟು ಮುಸ್ಲಿಂ ವಲಸೆ ಕಾರ್ಮಿಕರ ಗುಂಪಿನ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಕಾರ್ಮಿಕನೊಬ್ಬನಿಗೆ ಗಂಭೀರ ಗಾಯಗಳಾಗಿವೆ.
ರಾಯಪುರ ಜಿಲ್ಲೆಯ ಕಟೋವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೂರಜ್‌ಪುರದಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಪುರುಲಿಯದ ಚೆಪ್ರಿ ಗ್ರಾಮದವರಾದ ವಲಸೆ ಕಾರ್ಮಿಕರು ಸೂರಜ್‌ಪುರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಭಾನುವಾರ ವಲಸೆ ಕಾರ್ಮಿಕರು ಬೇಕರಿ ಮಾಲೀಕರೊಂದಿಗೆ ತಮ್ಮ ವೇತನದ ಬಗ್ಗೆ ವಾಗ್ವಾದ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಬಜರಂಗದಳದ ಕಾರ್ಯಕರ್ತರು ಲಾಠಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಇದರ ಪರಿಣಾಮವಾಗಿ, ವಲಸೆ ಕಾರ್ಮಿಕರಲ್ಲಿ ಒಬ್ಬನ ಬಲಗೈಗೆ ಮೂಳೆ ಮುರಿತವಾಗಿದೆ. ತದ ನಂತರ ಪೊಲೀಸರು ಸಂತ್ರಸ್ತರನ್ನು ಉದ್ರಿಕ್ತರಿಂದ ರಕ್ಷಿಸಿದ್ದಾರೆ.
"ಸೂರಜ್‌ಪುರದ ಕಟೋವಾಲಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಎಂಟು ಕಾರ್ಮಿಕರ ಬಗ್ಗೆ ವಿವರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಎಲ್ಲಾ ಎಂಟು ಕಾರ್ಮಿಕರ ದಾಖಲೆಗಳನ್ನು ಸಂಗ್ರಹಿಸಿ ಪೊಲೀಸರಿಗೆ ಸಲ್ಲಿಸಿದ್ದೇವೆ" ಎಂದು ಚೆಪ್ರಿಯ TCM ನಾಯಕ ಶೇಖ್ ಇಕ್ಬಾಲ್ ಹೇಳಿದ್ದಾರೆ.
ಈ ಮಧ್ಯೆ ಒಡಿಶಾದ ಸಂಬಲ್‌ಪುರದಲ್ಲಿ ಬಂಗಾಳಿ ಮಾತನಾಡುವ ಮತ್ತೊಬ್ಬ ಮುಸ್ಲಿಂ ವಲಸೆ ಕಾರ್ಮಿಕನ ಮೇಲೆ ಭಾನುವಾರ ದಾಳಿ ನಡೆಸಲಾಗಿದ್ದು, ಆತನ ಕೈ ಮೂಳೆ ಮುರಿತವಾಗಿದೆ.
ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ದಾಳಿಯ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದನ್ನು "ಕ್ರೂರ ದಬ್ಬಾಳಿಕೆ" ಎಂದು ಹೇಳಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಬಂಗಾಳಿ ವಲಸಿಗರು ಪಶ್ಚಿಮ ಬಂಗಾಳಕ್ಕೆ ಹಿಂತಿರುಗಿ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವಂತೆ ಒತ್ತಾಯಿಸಿದ್ದರು.