ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ನಡೆಸಿದ ದಾಳಿಯ ಸಂದರ್ಭದಲ್ಲಿ ದಾಖಲೆಗಳ ಕಳ್ಳತನ ಆರೋಪದ ಬಗ್ಗೆ ಕೋಲ್ಕತ್ತಾ ಪೊಲೀಸರು ಶನಿವಾರ ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ತನಿಖಾಧಿಕಾರಿಗಳು, ಇಡಿ ಕಾರ್ಯಾಚರಣೆಯ ಸಮಯದಲ್ಲಿ ಎರಡೂ ಸ್ಥಳಗಳಲ್ಲಿದ್ದ ಕೇಂದ್ರ ತನಿಖಾ ಸಂಸ್ಥೆಯ ಸಿಬ್ಬಂದಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.
ಇಂದು ಬೆಳಗ್ಗೆ, ಶೇಕ್ಸ್‌ಪಿಯರ್ ಸರಾನಿ ಪೊಲೀಸ್ ಠಾಣೆಯ ಅಧಿಕಾರಿಗಳು, ಪತೀಕ್ ಜೈನ್ ಅವರ ನಿವಾಸಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಡಿವಿಆರ್ ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ಮನೆಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ. ಅಧಿಕಾರಿಗಳ ಗುರುತಿಸುವಿಕೆ ಪೂರ್ಣಗೊಂಡ ನಂತರ, ಆರೋಪಿಗಳಿಗೆ ನೋಟಿಸ್ ನೀಡಲಾಗುವುದು" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ದೂರುಗಳ ಆಧಾರದ ಮೇಲೆ ಪೊಲೀಸರು ಅಪರಿಚಿತ ಇಡಿ ಅಧಿಕಾರಿಗಳ ವಿರುದ್ಧ ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಷೇಕ್ಸ್‌ಪಿಯರ್ ಸರಾನಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಇಡಿ ಅಧಿಕಾರಿಗಳು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳ ವಿರುದ್ಧ ಮತ್ತು ಬಿಧಾನ್‌ನಗರ ಪೊಲೀಸ್ ಠಾಣೆಯಲ್ಲಿ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ಪಿಎಸ್‌ನಲ್ಲಿರುವ ಅಪರಿಚಿತ ಇಡಿ ಅಧಿಕಾರಿಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರು ದೂರುಗಳನ್ನು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಗುರುತಿಸಲಾಗದ ಇಡಿ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ, ಜೈನ್ ಅವರ ಅಪಾರ್ಟ್‌ಮೆಂಟ್ ಮತ್ತು ಸಾಲ್ಟ್ ಲೇಕ್ ಸೆಕ್ಟರ್ V ನಲ್ಲಿರುವ ಐ-ಪ್ಯಾಕ್ ಕಚೇರಿಗೆ ಪ್ರವೇಶಿಸಿ, ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಡೇಟಾವನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.
"ಇಡಿ ಅಧಿಕಾರಿಗಳು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿಲ್ಲ ಅಥವಾ ಶೋಧದ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ನ್ಯಾಯಾಲಯ ಹೊರಡಿಸಿದ ಸರ್ಚ್ ವಾರಂಟ್ ಸೇರಿದಂತೆ ವಿವರಗಳನ್ನು ಪೊಲೀಸರು ಕೋರಿದಾಗ, ಅವರನ್ನು ತಳ್ಳಿ ಒಳಗೆ ಬರದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಗೆ ಕೇವಿಯಟ್ ಸಲ್ಲಿಕೆ
ಏತನ್ಮಧ್ಯೆ, ಪಶ್ಚಿಮ ಬಂಗಾಳ ಸರ್ಕಾರವು ಇಡಿ ದಾಳಿಗಳಿಗೆ ಸಂಬಂಧಿಸಿದಂತೆ ತನ್ನ ವಿಚಾರಣೆ ನಡೆಸದೆ ಯಾವುದೇ ಆದೇಶವನ್ನು ಹೊರಡಿಸಬಾರದು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿರುವವರು ತಮ್ಮ ವಿಚಾರಣೆ ನಡೆಸದೆ ತಮ್ಮ ವಿರುದ್ಧ ಯಾವುದೇ ಪ್ರತಿಕೂಲ ಆದೇಶವನ್ನು ಹೊರಡಿಸದಂತೆ ನೋಡಿಕೊಳ್ಳಲು ಕೇವಿಯಟ್ ಸಲ್ಲಿಸಿದ್ದಾರೆ.
ಗುರುವಾರ ಬೆಳಗ್ಗೆಯಿಂದ ಪಶ್ಚಿಮ ಬಂಗಾಳದ ಆರು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ, ಇದರಲ್ಲಿ ಐ-ಪ್ಯಾಕ್ ಮುಖ್ಯಸ್ಥ ಮತ್ತು ಟಿಎಂಸಿ ಐಟಿ ಸೆಲ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಲೌಡನ್ ಸ್ಟ್ರೀಟ್‌ನಲ್ಲಿರುವ ನಿವಾಸ ಮತ್ತು ಕೋಲ್ಕತ್ತಾದ ಸೆಕ್ಟರ್ V ನಲ್ಲಿರುವ ಗೋದ್ರೇಜ್ ವಾಟರ್‌ಸೈಡ್ ಕಟ್ಟಡದಲ್ಲಿರುವ ಕಂಪನಿಯ ಕಚೇರಿ ಸೇರಿವೆ.