ಡೆಹ್ರಾಡೂನ್: ಈ ವಾರ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಗಡಿಯಲ್ಲಿರುವ ಕಾಡುಗಳಲ್ಲಿ ಹೃದಯ ಮಿಡಿಯುವ ಅಪರೂಪದ ಘಟನೆಯನ್ನು ಸೆರೆಹಿಡಿಯಲಾಗಿದೆ.
ಆನೆಯೊಂದು ಉದ್ದೇಶಪೂರ್ವಕವಾಗಿ ವಾಹನಗಳ ಸಂಚಾರವನ್ನು ತಡೆದು, ತನ್ನ ಹಿಂಡಿನ ಗಾಯಗೊಂಡ ಮತ್ತೊಂದು ಆನೆ ಜನನಿಬಿಡ ರಸ್ತೆ ದಾಟಲು ಸಹಾಯ ಮಾಡಿರುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.
ಖ್ಯಾತ ವನ್ಯಜೀವಿ ಛಾಯಾಗ್ರಾಹಕ ದೀಪ್ ರಾಜ್ವರ್ ಅವರು ರಾಮನಗರ-ಭಂಡಾರ್ಪಾನಿ ಮಾರ್ಗದಲ್ಲಿ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ, ದೊಡ್ಡ ಆನೆಯೊಂದು ರಸ್ತೆಯ ಮಧ್ಯದಲ್ಲಿ ನಿಂತು ಜೋರಾಗಿ ಸದ್ದು ಮಾಡುತ್ತದೆ. ಇದರಿಂದಾಗಿ ಎರಡೂ ಬದಿಗಳಲ್ಲಿ ವಾಹನಗಳು ನಿಲ್ಲುತ್ತವೆ. ಸ್ವಲ್ಪ ಸಮಯದ ನಂತರ, ಗಾಯಗೊಂಡಿದ್ದ ಮತ್ತೊಂದು ಆನೆ ಕಾಡಿನಿಂದ ಹೊರಬಂದು, ಕುಂಟುತ್ತಾ, ನಿಧಾನವಾಗಿ ರಸ್ತೆ ದಾಟುತ್ತದೆ.
ಗಾಯಗೊಂಡ ಆನೆ ಸುರಕ್ಷಿತವಾಗಿ ಇನ್ನೊಂದು ಬದಿಯನ್ನು ತಲುಪಿದ ನಂತರ, ರಸ್ತೆ ತಡೆದಿದ್ದ ದೊಡ್ಡ ಆನೆ ದೂರ ಸರಿದು, ಕಾಡಿನೊಳಗೆ ಹೋಗುತ್ತದೆ. ನಂತರ ವಾಹನ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
ಆ ಕ್ಷಣವನ್ನು ವಿವರಿಸಿದ ರಾಜ್ವರ್, “ಆನೆಯು ಅಷ್ಟು ಜೋರಾಗಿ ಕೂಗುತ್ತಾ ಸಂಚಾರವನ್ನು ನಿಲ್ಲಿಸುತ್ತಿರುವುದು ಏಕೆ ಎಂದು ನಮಗೆ ಅರ್ಥವಾಗಲಿಲ್ಲ. ಸಾಮಾನ್ಯವಾಗಿ, ತುತ್ತೂರಿ ಅಪಾಯ ಅಥವಾ ಆಕ್ರಮಣಶೀಲತೆಯನ್ನು ಸೂಚಿಸುತ್ತದೆ. ಆದರೆ ಈ ತುತ್ತೂರಿ ವಿಭಿನ್ನವಾಗಿತ್ತು - ಇದು ಸ್ಪಷ್ಟ ಎಚ್ಚರಿಕೆಯಂತೆ ಇತ್ತು: 'ವಾಹನ ನಿಲ್ಲಿಸಿ, ಮುಂದುವರಿಯಬೇಡಿ'” ಎಂದು ಹೇಳವಂತಿತ್ತು ಎಂದು ಹೇಳಿದ್ದಾರೆ.
“ವನ್ಯಜೀವಿಗಳಿಗೂ ಸಹ ಮನುಷ್ಯರಂತೆಯೇ ಭಾವನೆಗಳಿವೆ ಎಂದು ಈ ವಿಡಿಯೋ ನಮಗೆ ಕಲಿಸುತ್ತದೆ. ಅವು ತಮ್ಮ ಸಹವರ್ತಿಗಳ ಬಗ್ಗೆ ಆಳವಾದ ಸಹಾನುಭೂತಿಯನ್ನು ಹೊಂದಿವೆ. ಈ ಮೌಲ್ಯಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಿರುವ ನಾವು ಮಾನವರು ಇದರಿಂದ ಕಲಿಯಬೇಕಾದದ್ದು ಸಾಕಷ್ಟು ಇದೆ” ಎಂದಿದ್ದಾರೆ.