ಕರೀಂನಗರ: ಪಾಪಿ ಪತಿಯೋರ್ವ ತನ್ನ ಪತ್ನಿ ಮೂಲಕವೇ ಬರೊಬ್ಬರಿ 150ಕ್ಕೂ ಹೆಚ್ಚು ಯುವಕರ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಬ್ಲಾಕ್ ಮೇಲ್ ಮಾಡಿ ಬರೊಬ್ಬರಿ 3 ಕೋಟಿ ರೂಗೂ ಅಧಿಕ ಹಣ ಸುಲಿಗೆ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಹೌದು.. ಅಚ್ಚರಿಯಾದರೂ ಇದು ಸತ್ಯ.. ಸಾಮಾನ್ಯವಾಗಿ ತನ್ನ ಪತ್ನಿಯನ್ನು ಪರಪುರುಷ ಕೆಟ್ಟದಾಗಿ ನೋಡಿದರೇ ಪತಿ ಸಹಿಸುವುದಿಲ್ಲ. ಇಂತಹ ಸಾಕಷ್ಟು ಜಗಳು ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿರುವುದನ್ನೂ ನಾವು ನೋಡಿದ್ದೇವೆ.
ಅದರೆ ಇಲ್ಲೋರ್ವ ಪಾಪಿ ಪತಿ ತನ್ನ ಸುಂದರ ಪತ್ನಿಯನ್ನೇ ಹನಿಟ್ರ್ಯಾಪ್ ಗೆ ಬಳಸಿ ಆಕೆಯೊಂದಿಗೆ ಹಲವು ಯುವಕರ ಮಲಗಿಸಿ ಅವರನ್ನು ಬೆದರಿಸಿ ಕೋಟ್ಯಂತರ ರೂ ಸಂಗ್ರಹಿಸಿದ್ದಾರೆ.
ಆಂಧ್ರಪ್ರದೇಶದ ಮಂಚೇರಿಯಲ್ ಜಿಲ್ಲೆಯಲ್ಲಿ ಈ sextortion ಘಟನೆ ನಡೆದಿದ್ದು, ಇಲ್ಲಿನ ಕರೀಂನಗರ ನಿವಾಸಿಗಳಾದ ಈ ದಂಪತಿ ಯುವಕರು ಮತ್ತು ಪುರುಷರನ್ನು ಪುಸಲಾಯಿಸಿ ಅವರನ್ನು ಹನಿಟ್ರ್ಪಾಪ್ ಗೆ ಬಳಸಿಕೊಂಡಿದ್ದಾರೆ. ಬಳಿಕ ಅವರ ಅಶ್ಲೀಲ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಅದನ್ನು ತೋರಿಸಿ ಅವರನ್ನು ಬ್ಲಾಕ್ ಮೇಲ್ ಮಾಡಿ ಕೋಟ್ಯಂತರ ಹಣ ಸಂಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಬಳಕೆ
ಮಂಚೇರಿಯಲ್ ಜಿಲ್ಲೆಯ ಈ ದಂಪತಿಗಳು ಕೆಲವು ಸಮಯದಿಂದ ಕರೀಂನಗರ ಗ್ರಾಮೀಣ ವ್ಯಾಪ್ತಿಯ ಅರೆಪಲ್ಲಿ ಶ್ರೀ ಸಾಯಿ ನಿವಾಸ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಪತಿ ಮಾರ್ಬಲ್ ಮತ್ತು ಒಳಾಂಗಣ ವ್ಯವಹಾರ ನಡೆಸುತ್ತಿದ್ದರೆ, ಪತ್ನಿ ಸಾಮಾಜಿಕ ಮಾಧ್ಯಮದ ಮೂಲಕ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. Karimnagar Pilla 143 (instagram) LallyDimplequeen ಎಂಬ ಖಾತೆಗಳನ್ನು ಹೊಂದಿದ್ದರು. ಆದಾಗ್ಯೂ, ವ್ಯವಹಾರದಲ್ಲಿ ಉಂಟಾದ ನಷ್ಟಗಳು, ಹೆಚ್ಚಿದ ಸಾಲಗಳು ಮತ್ತು ಇಎಂಐಗಳಿಂದಾಗಿ ಆರ್ಥಿಕ ಹೊರೆ ನಿಭಾಯಿಸಲಾಗದೇ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಹನಿಟ್ರ್ಯಾಪ್ ಗೆ ಮುಂದಾಗಿದ್ದಾರೆ.
ಹೀಗಾಗಿ ಪತ್ನಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಆಕರ್ಷಕ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಯುವಕರು ಮತ್ತು ಉದ್ಯಮಿಗಳನ್ನು ಆಕರ್ಷಿಸುತ್ತಿದ್ದಳು. ತನ್ನನ್ನು ಸಂಪರ್ಕಿಸುವವರೊಂದಿಗೆ ಒಪ್ಪಂದ ಮಾತನಾಡಿಕೊಂಡು ಅವರನ್ನು ತನ್ನ ನಿವಾಸಕ್ಕೆ ಆಹ್ವಾನಿಸುತ್ತಿದ್ದಳು. ಅವರು ಏಕಾಂತದಲ್ಲಿರುವಾಗ ಆಕೆಯ ಪತಿ ತನ್ನ ಮೊಬೈಲ್ ಫೋನ್‌ನಲ್ಲಿ ರಹಸ್ಯವಾಗಿ ನಗ್ನ ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದ.
ವಿಡಿಯೋ ತೋರಿಸಿ ಬ್ಲಾಕ್ ಮೇಲ್, ಪತಿಯೇ ಸೂತ್ರಧಾರ
ಇನ್ನು ಈ ಘಟನೆಯಲ್ಲಿ ಆಕೆಯ ಪತಿಯ ಪ್ರಮುಖ ಸೂತ್ರಧಾರನಾಗಿದ್ದು, ಆತನೇ ತನ್ನ ಪತ್ನಿ ಮೂಲಕ ಪರಪುರುಷರನ್ನು ಆಪಾರ್ಟ್ ಮೆಂಟ್ ಗೆ ಕರೆದು ತನ್ನ ಪತ್ನಿಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತಿದ್ದ. ಬಳಿಕ ಅದರ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ಹೀಗೇ ಈ ಜೋಡಿ ಸಂತ್ರಸ್ಥರಿಂದ ಸುಮಾರು ಕೋಟ್ಯಂತರ ಹಣ ಸುಲಿಗೆ ಮಾಡಿದೆ.
ಸುಲಿಗೆ ಹಣದಿಂದ ವಿಲಾಸಿ ಜೀವನ
ದಂಪತಿಗಳು ಈ ವೀಡಿಯೊಗಳನ್ನು ತೋರಿಸಿ ಬಲಿಪಶುಗಳನ್ನು ಹೆದರಿಸಿ ಅಪಾರ ಪ್ರಮಾಣದ ಹಣವನ್ನು ಸುಲಿಗೆ ಮಾಡುತ್ತಿದ್ದರು. ಈ ಅಕ್ರಮ ಆದಾಯದಿಂದ ಅವರು ಅಪಾರ್ಟ್‌ಮೆಂಟ್‌ನ ಇಎಂಐ ಪಾವತಿಸಿದ್ದಲ್ಲದೆ, ಟಾಟಾ ಕಾರನ್ನು ಸಹ ಖರೀದಿಸಿದ್ದರು. ಅವರು ತಮ್ಮ ಮನೆಯಲ್ಲಿ ದುಬಾರಿ ಸೋಫಾ ಸೆಟ್‌ಗಳು ಮತ್ತು ಎಸಿಗಳನ್ನು ಅಳವಡಿಸುವ ಮೂಲಕ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಇಲ್ಲಿಯವರೆಗೆ ಅವರು ಸುಮಾರು 150ಕ್ಕೂ ಹೆಚ್ಚು ಜನರನ್ನು ಬಲೆಗೆ ಬೀಳಿಸಿದ್ದಾರೆ ಎಂದು ವರದಿಯಾಗಿದೆ.
ಹನಿ ಟ್ರ್ಯಾಪ್ ಸಂತ್ರಸ್ಥನಿಂದಲೇ ಪ್ರಕರಣ ಬೆಳಕಿಗೆ
ಕರೀಂನಗರದ ವ್ಯಕ್ತಿಯೊಬ್ಬ ಕಳೆದ ಒಂದು ವರ್ಷದಿಂದ ಅವರ ಬಳಿಗೆ ಹೋಗುತ್ತಿದ್ದ. ಈಗಾಗಲೇ ಅವನಿಂದ ಈ ಜೋಡಿ ಸುಮಾರು 14 ಲಕ್ಷ ರೂ.ಗಳನ್ನು ಸಂಗ್ರಹಿಸಿತ್ತು. ಅಲ್ಲದೆ ಹೆಚ್ಚುವರಿಯಾಗಿ 5 ಲಕ್ಷ ರೂ.ಗಳನ್ನು ನೀಡದಿದ್ದರೆ ವೀಡಿಯೊಗಳು ವೈರಲ್ ಮಾಡುವುದಾಗಿ ಮತ್ತು ಆತನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಇದರಿಂದ ತಲ್ಲಣಿಸಿದ ಆತ ತನ್ನ ಜೀವಕ್ಕೆ ಹೆದರಿ ಕರೀಂನಗರ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಪ್ರಕರಣದ ವಿಚಾರಣೆಗೆ ಪೊಲೀಸರು ಮುಂದಾದಾಗ ಇಡೀ ಪ್ರಕರಣ ಬ್ರಹ್ಮಾಂಡ ರಹಸ್ಯ ಬಯಲಾಗಿದೆ.
ದಂಪತಿಗಳು ಕಳೆದ ಮೂರು ವರ್ಷಗಳಿಂದ ನೂರಕ್ಕೂ ಹೆಚ್ಚು ಉದ್ಯಮಿಗಳು, ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಅಕ್ರಮವಾಗಿ ಸಂಪಾದಿಸಿದ ಹಣದಿಂದ ಅವರು 65 ಲಕ್ಷ ರೂ. ಮೌಲ್ಯದ ಪ್ಲಾಟ್, ದುಬಾರಿ ಕಾರು ಮತ್ತು ಪೀಠೋಪಕರಣಗಳನ್ನು ಖರೀದಿಸಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಗ್ರಾಮೀಣ ಸಿಐ ನಿರಂಜನ್ ರೆಡ್ಡಿ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿತು. ಅಪರಾಧಕ್ಕೆ ಬಳಸಲಾದ ಮೊಬೈಲ್ ಫೋನ್‌ಗಳು, ಕಾರು ಮತ್ತು ಹಣವನ್ನು ಅವರಿಂದ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಲು ಸಾರ್ವಜನಿಕರಿಗೆ ಪೊಲೀಸರು ಸಲಹೆ ನೀಡುತ್ತಿದ್ದಾರೆ.