ಝಾನ್ಸಿ: ಟೋಲ್ ಪ್ಲಾಜಾದಲ್ಲಿ ಟೋಲ್ ಕಟ್ಟಲು ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಟ್ರಕ್ ಢಿಕ್ಕಿಯಾಗಿದ್ದು, ಅಲ್ಲಿನ ಟೋಲ್ ಸಿಬ್ಬಂದಿಯನ್ನು ಬರೊಬ್ಬರಿ 50 ಮೀಟರ್ ಎಳೆದೊಯ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಝಾನ್ಸಿಯ ಕಾನ್ಪುರ ಹೆದ್ದಾರಿಯಲ್ಲಿರುವ ಸೆಮ್ರಿ ಟೋಲ್ ಪ್ಲಾಜಾದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಟ್ರಕ್ ಚಾಲಕ ಟೋಲ್ ಸಿಬ್ಬಂದಿಯನ್ನು ಬರೊಬ್ಬರಿ 50 ಮೀಟರ್ ಎಳೆದೊಯ್ದ ಘಟನೆ ನಡೆದಿದೆ.
ಈ ದುರ್ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುವನ್ನು ಹೆದ್ದಾರಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಮಾತ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾನ್ಪುರ ಹೆದ್ದಾರಿಯಲ್ಲಿರುವ ಸೆಮ್ರಿ ಟೋಲ್ ಪ್ಲಾಜಾದಲ್ಲಿ ನಿಂತಿದ್ದ 2 ಕಾರುಗಳಿಗೆ ಹಿಂದಿನಿಂದ ಬಂದ ಟ್ರಕ್ ಢಿಕ್ಕಿಯಾಗಿದೆ.
ಟೋಲ್ ನಲ್ಲಿ ಫಾಸ್ಟ್‌ಟ್ಯಾಗ್ ಸ್ಕ್ಯಾನರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಎರಡು ಕಾರುಗಳು ಟೋಲ್ ಬೂತ್‌ನಲ್ಲಿ ನಿಂತಿದ್ದವು. ಆಗ ಟೋಲ್ ಬೂತ್ ಉದ್ಯೋಗಿಯೊಬ್ಬರು ಒಂದು ವಾಹನದ ಟ್ಯಾಗ್ ಅನ್ನು ತಮ್ಮ ಕೈಯಿಂದಲೇ ಸ್ಕ್ಯಾನ್ ಮಾಡಲು ಮುಂದಾಗಿದ್ದರು.
ಇದೇ ಸಂದರ್ಭದಲ್ಲಿ ಹಿಂದಿನಿಂದ ಅತಿ ವೇಗದಲ್ಲಿ ಬಂದ ಟ್ರಕ್ ಮುಂದೆ ನಿಂತಿದ್ದ ಎರಡೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಆಗ ಟೋಲ್ ಸಿಬ್ಬಂದಿ ಗಾಳಿಯಲ್ಲಿ ಹಾರಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಆದರೂ ಟ್ರಕ್ ಚಲಿಸುತ್ತಲೇ ಮುಂದೆ ಸಾಗಿದೆ. ಇದರಿಂದಾಗಿ ಕಾರು ಮತ್ತು ಸಿಬ್ಬಂದಿಯನ್ನು ಟ್ರಕ್ ಸುಮಾರು 50 ಮೀಟರ್‌ಗಳಿಗೂ ಹೆಚ್ಚು ದೂರ ಎಳೆದುಕೊಂಡು ಹೋಗಿ ನಿಂತಿದೆ.
ಈ ಹಠಾತ್ ಅಪಘಾತ ಕರ್ತವ್ಯದಲ್ಲಿದ್ದ ಇತರ ಟೋಲ್ ಸಿಬ್ಬಂದಿಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಗಾಯಾಳುಗಳನ್ನು ತಕ್ಷಣ ಮಾತ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದರೆ.
ಗಾಯಾಳು ಟೋಲ್ ಸಿಬ್ಬಂದಿ ತನ್ನನ್ನು ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಉರೈ ನಿವಾಸಿ 56 ವರ್ಷದ ರಮಾಕಾಂತ್ ರಿಚಾರಿಯಾ ಎಂದು ಗುರುತಿಸಿಕೊಂಡಿದ್ದಾರೆ.