ನವದೆಹಲಿ: ಮೆಟ್ರೋ ರೈಲುಗಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಂದುವರೆದಿದ್ದು, ಅಮೆರಿಕ ಮೂಲದ ಮಹಿಳೆಗೆ ಅಪ್ರಾಪ್ತನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ.
ರಾಷ್ಟ್ರರಾಜಧಾನಿ ದೆಹಲಿ ಮೆಟ್ರೋ ರೈಲಿನಲ್ಲಿ ಈ ಘಟನೆ ನಡೆದಿದ್ದು, ನ್ಯೂಜೆರ್ಸಿಯ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭಾರತ ಮೂಲದ ಪ್ರಾಧ್ಯಾಪಕ ಗೌರವ್ ಸಬ್ನಿಸ್ ತಮ್ಮ ಎಕ್ಸ್ ಖಾತೆಯಲ್ಲಿ ಸಂತ್ರಸ್ಥ ಅಮೆರಿಕ ಮಹಿಳೆ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ, ಭಾರತದಲ್ಲಿ ಸ್ನೇಹಿತನ ಮದುವೆಗೆ ಪ್ರಯಾಣ ಸಲಹೆಗಳನ್ನು ಪಡೆಯಲು ಮಾಜಿ ವಿದ್ಯಾರ್ಥಿಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದರು. ಭಾರತ ಪ್ರವಾಸದ ಸಮಯದಲ್ಲಿ ಆಕೆಗೆ ನಾನು ಎಚ್ಚರಿಸಿದ್ದೆ. ನಾನು ಅವಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದೆ.
ಸಂಭಾವ್ಯ ಅಪಾಯಗಳ ಕುರಿತು ಹೇಳಿದ್ದೆ. ಆದರೆ ದುರದೃಷ್ಟವಶಾತ್, ದೆಹಲಿ ಮೆಟ್ರೋದಲ್ಲಿ ಆಕೆ ಲೈಂಗಿಕ ಕಿರುಕುಳ ಎದುರಿಸಿದ್ದಾಳೆ ಎಂದು ಸಬ್ನಿಸ್ ಬರೆದುಕೊಂಡಿದ್ದಾರೆ.
ಮೆಟ್ರೋದಲ್ಲಿ ಪಯಣಿಸುತ್ತಿದ್ದ ಆಕೆಗೆ ಅಪ್ರಾಪ್ತ ಬಾಲಕನೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆಯ ಎದೆಗೆ ಕೈಹಾಕಿ ಕಿರುಕುಳ ನೀಡಿದ್ದಾನೆ. ಆಕೆ ಈಗ ಇನ್ನು ಮುಂದೆ ತಾನು ಭಾರತಕ್ಕೆ ಬರುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.
ಆಗಿದ್ದೇನು?
ರೈಲಿನಲ್ಲಿ ಆತ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಇದ್ದನು. ರೈಲಿನಲ್ಲಿ ನನ್ನ ಪಕ್ಕದಲ್ಲೇ ಕುಳಿತಿದ್ದ ಆತ ನೋಡ ನೋಡುತ್ತಲೇ ಆತ ನನ್ನ ಭುಜದ ಮೇಲೆ ಕೈಹಾಕಿದ. ಈ ವೇಳೆ ನನಗೆ ಆಘಾತವಾಯಿತು. ಬಳಿಕ ಆತ ನೇರವಾಗಿ ನನ್ನ ಸ್ತನಗಳನ್ನು ಹಿಡಿದು ನನ್ನ ಪೃಷ್ಠವನ್ನು ಹೊಡೆದು ತಮಾಷೆ ಮಾಡಿದಂತೆ ನಕ್ಕನು. ಈ ವೇಳೆ ನಾನು ಕೋಪಗೊಂಡು ಆತನನ್ನು ಗಟ್ಟಿಯಾಗಿ ತಳ್ಳಿದೆ.
ಆತ ಕೆಳಗೆ ಬಿದ್ದ. ಈ ವೇಳೆ ಆತನ ತಾಯಿ ಜೋರಾಗಿ ಮಾತನಾಡಲು ಪ್ರಾರಂಭಿಸಿದರು ಎಂದು ಅಮೆರಿಕ ಮೂಲದ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಗೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿದ್ದು, ಪೊಲೀಸ್ ದೂರು ನೀಡಬಹುದಿತ್ತು ಎಂದು ಕೆಲ ನೆಟ್ಟಿಗರು ಸಲಹೆ ನೀಡಿದ್ದಾರೆ.