ಲಖನೌ: ಜನವರಿ 16 ರಂದು ದಟ್ಟ ಮಂಜಿನಿಂದಾಗಿ, ಟೆಕ್ಕಿಯೊಬ್ಬರು ಕಾರು ಸಮೇತ 70 ಅಡಿ ಆಳದ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿ ದುರಂತದ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸೋಮವಾರ ಪ್ರಕರಣದ ತನಿಖೆಗೆ ಮೂವರು ಸದಸ್ಯರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲು ಆದೇಶಿಸಿದ್ದಾರೆ. ಅಲ್ಲದೆ ಐದು ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.
ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಈ ಎಸ್‌ಐಟಿಯ ನೇತೃತ್ವ ವಹಿಸಲಿದ್ದು, ಮೀರತ್ ವಿಭಾಗೀಯ ಆಯುಕ್ತರು ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಎಸ್ಐಟಿ ಸದಸ್ಯರಾಗಿದ್ದಾರೆ.
ದುರಂತಕ್ಕೆ ಕಾರಣವಾದ ಎಲ್ಲಾ ಸಂದರ್ಭಗಳನ್ನು ಪರಿಶೀಲಿಸಲು ಮತ್ತು ನಿಗದಿತ ಸಮಯದೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಎಸ್ಐಟಿಗೆ ಆದೇಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ, ರಾಜ್ಯ ಸರ್ಕಾರವು ಉತ್ತರ ಪ್ರದೇಶ ಕೇಡರ್‌ನ 2005 ರ ಬ್ಯಾಚ್‌ನ ಐಎಎಸ್ ಅಧಿಕಾರಿ ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಲೋಕೇಶ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ.
ನೋಯ್ಡಾದ ಸೆಕ್ಟರ್ 150ರಲ್ಲಿ ಮಂಜು ಮುಸುಕಿದ ರಸ್ತೆಯಲ್ಲಿ 27 ವರ್ಷದ ಯುವರಾಜ್ ಮೆಹ್ತಾ ಅವರ ಕಾರು ಹೊಂಡಕ್ಕೆ ಬಿದ್ದಿದ್ದು,ಈ ಸತತ ಹಲವು ಗಂಟೆಗಳ ಹೋರಾಟದ ಹೊರತಾಗಿಯೂ ದುರಂತ ಸಾವನ್ನಪ್ಪಿದ್ದಾರೆ.
ಜನವರಿ 16 ರ ತಡರಾತ್ರಿ ಮೆಹ್ತಾ ಅವರು ಗುರುಗ್ರಾಮ್ ಕಚೇರಿಯಿಂದ ಸೆಕ್ಟರ್ 150 ರ ಟಾಟಾ ಯುರೇಕಾ ಪಾರ್ಕ್‌ನಲ್ಲಿರುವ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ದಟ್ಟವಾದ ಮಂಜು ಆವರಿಸಿದ್ದರಿಂದ ಗೋಚರತೆಯು ಶೂನ್ಯಕ್ಕೆ ಇಳಿದಿತ್ತು. ಅವರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ರಸ್ತೆಯಿಂದ ಆಳವಾದ, ನೀರು ತುಂಬಿದ ಹೊಂಡಾಗೆ ಬಿದ್ದಿದೆ.