ಮುಂಬೈ: ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಅವರು "ಕೋಮುವಾದಿ" ಎಂದು ಕರೆದಿದ್ದಾರೆ.
ಇದೀಗ ಎ ಆರ್ ರೆಹಮಾನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರನ್ನು ಬೆಂಬಲಿಸಿದ್ದಾರೆ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಮಂಗಳವಾರ ಹೇಳಿದ್ದಾರೆ.
ಎಆರ್ ರೆಹಮಾನ್ ಅವರು ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಬಾಲಿವುಡ್ ನಲ್ಲಿ ಕಳೆದ ಎಂಟು ವರ್ಷಗಳಲ್ಲಿ ತಮಗೆ ಅವಕಾಶಗಳು ಕಡಿಮೆಯಾಗಿವೆ. ಇದಕ್ಕೆ ಕೋಮುವಾದದ ವಿಷಯವೂ ಕಾರಣವಾಗಿರಬಹುದು ಎಂದು ಹೇಳಿದ್ದರು.
ರೆಹಮಾನ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಚಲನಚಿತ್ರೋದ್ಯಮದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಮ್ತಿಯಾಜ್ ಅಲಿ ಅವರು, ಬಾಲಿವುಡ್‌ನಲ್ಲಿ ಯಾವುದೇ ರೀತಿಯ "ಕೋಮು ಪಕ್ಷಪಾತ"ವನ್ನು ತಾನು ಎಂದಿಗೂ ನೋಡಿಲ್ಲ. "ಇಲ್ಲ, ಚಲನಚಿತ್ರೋದ್ಯಮದಲ್ಲಿ ಕೋಮು ಪಕ್ಷಪಾತವಿದೆ ಎಂದು ನಾನು ಭಾವಿಸುವುದಿಲ್ಲ. ನಾನು ಇಲ್ಲಿ ಬಹಳ ಸಮಯದಿಂದ ಇದ್ದೇನೆ, ಮತ್ತು ನಾನು ಅದನ್ನು ಎಂದಿಗೂ ನೋಡಿಲ್ಲ. ಎ.ಆರ್. ರೆಹಮಾನ್ ಚಲನಚಿತ್ರೋದ್ಯಮದಲ್ಲಿ ನಾನು ಭೇಟಿಯಾದ ಅತ್ಯಂತ ಪ್ರಕಾಶಮಾನವಾದ ವ್ಯಕ್ತಿಗಳಲ್ಲಿ ಒಬ್ಬರು" ಎಂದು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
"ಬಹುಶಃ ರೆಹಮಾನ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅವರ ಹಾಗೇ ಹೇಳಿದ್ದಾರೆ ಎಂದು ನಾನು ನಿಜವಾಗಿಯೂ ನಂಬುವುದಿಲ್ಲ. ವಾಸ್ತವವಾಗಿ, ಅವರು ಗ್ರಹಿಸಲ್ಪಟ್ಟದ್ದನ್ನು ನಿಖರವಾಗಿ ಹೇಳಲಿಲ್ಲ ಎಂದು ನನಗೆ ಅನಿಸುತ್ತದೆ. ಅಲ್ಲದೆ, ಯಾವುದೇ ಕೋಮು ಪಕ್ಷಪಾತ ಅಥವಾ ದ್ವೇಷ ಇದ್ದ ಒಂದೇ ಒಂದು ಘಟನೆ ನನಗೆ ನೆನಪಿಲ್ಲ" ಎಂದು ಅವರು ಹೇಳಿದ್ದಾರೆ.