ಚೆನ್ನೈ: ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸರ್ಕಾರವು ತಮಿಳುನಾಡಿನಲ್ಲಿ "ಭ್ರಷ್ಟಾಚಾರ, ಮಾಫಿಯಾ ಮತ್ತು ಅಪರಾಧ"ಕ್ಕೆ ಉತ್ತೇಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ.
ಚೆನ್ನೈ ಬಳಿಯ ಮಧುರಾಂತಕಂನಲ್ಲಿ ನಡೆದ ಎನ್‌ಡಿಎ ಮೊದಲ ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಡಿಎಂಕೆ ಸರ್ಕಾರಕ್ಕೆ ಪ್ರಜಾಪ್ರಭುತ್ವ ಅಥವಾ ಹೊಣೆಗಾರಿಕೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಆರೋಪಿಸಿದರು ಮತ್ತು ಅದು ಕೇವಲ "ಒಂದು ಕುಟುಂಬಕ್ಕಾಗಿ" ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
"ತಮಿಳುನಾಡು ಈಗ ಪ್ರಜಾಪ್ರಭುತ್ವ ಮತ್ತು ಹೊಣೆಗಾರಿಕೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಸರ್ಕಾರವನ್ನು ಹೊಂದಿದೆ. ಡಿಎಂಕೆ ಸರ್ಕಾರವು ಒಂದು ಕುಟುಂಬಕ್ಕೆ ಮಾತ್ರ ಸೇವೆ ಸಲ್ಲಿಸುತ್ತಿದೆ. ಪಕ್ಷದೊಳಗೆ ಯಾರಾದರೂ ಉದಯಿಸಬೇಕಾದರೆ, ಅವರಿಗೆ ಕೇವಲ ಮೂರು ಅಥವಾ ನಾಲ್ಕು ಮಾರ್ಗಗಳಿವೆ: ವಂಶಪಾರಂಪರ್ಯ, ಭ್ರಷ್ಟಾಚಾರ, ಮಹಿಳೆಯರನ್ನು ನಿಂದಿಸುವುದು ಅಥವಾ ನಮ್ಮ ಸಂಸ್ಕೃತಿಯನ್ನು ದುರುಪಯೋಗಪಡಿಸಿಕೊಳ್ಳುವುದು" ಎಂದು ಪ್ರಧಾನಿ ಆರೋಪಿಸಿದರು.
ತಮಿಳುನಾಡಿನಲ್ಲಿರುವ ಪ್ರತಿಯೊಂದು ಮಗುವಿಗೂ ಭ್ರಷ್ಟಾಚಾರ ಎಷ್ಟು ನಡೆಯುತ್ತಿದೆ ಮತ್ತು ಅದು ಯಾರ ಜೇಬಿಗೆ ತಲುಪುತ್ತದೆ ಎಂದು ತಿಳಿದಿದೆ ಎಂದರು.
"ಡಿಎಂಕೆ ಪಕ್ಷದ ಜನರು ಮಾದಕ ದ್ರವ್ಯ ಮಾಫಿಯಾದೊಂದಿಗೆ ಕೈಜೋಡಿಸಿದ್ದಾರೆ ಎಂಬ ಆರೋಪಗಳಿವೆ. ಎನ್‌ಡಿಎ ಪರವಾಗಿ ನೀವು ನೀಡುವ ಪ್ರತಿಯೊಂದು ಮತವೂ ತಮಿಳುನಾಡನ್ನು ಡ್ರಗ್ಸ್ ಮುಕ್ತಗೊಳಿಸಲು ನೀಡುವ ಮತವಾಗಿರುತ್ತದೆ" ಎಂದು ಅವರು ಹೇಳಿದರು.
ತಮಿಳುನಾಡಿನ ಜನ ಡಿಎಂಕೆ ಸರ್ಕಾರವನ್ನು ಬೇರು ಸಹಿತ ಕಿತ್ತೊಗೆಯಲು ನಿರ್ಧರಿಸಿದ್ದಾರೆ ಮತ್ತು 2026 ರ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ತಿರುವನಂತಪುರಂನಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸಿದರು. ಅವರನ್ನು ರಾಜ್ಯಪಾಲ ಆರ್ ಎನ್ ರವಿ, ರಾಜ್ಯ ಸಚಿವ ಟಿ ಎಂ ಅನ್ಬರಸನ್, ಮುಖ್ಯ ಕಾರ್ಯದರ್ಶಿ ಎನ್ ಮುರುಗಾನಂದಂ ಮತ್ತು ಇತರ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ರ್ಯಾಲಿಯಲ್ಲಿ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ, ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ ಟಿ ವಿ ದಿನಕರನ್ ಮತ್ತು ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಅವರು ಭಾಗವಹಿಸಿದ್ದರು.