ನವದೆಹಲಿ: ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ತಂದಿದ್ದ ಮನ್ರೇಗಾ ಯೋಜನೆ(MGNREGA) ಬದಲಿಗೆ ಇಂದಿನ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಗ್ರಾಮೀಣ ಉದ್ಯೋಗ ಕಾನೂನನ್ನು ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ನರೇಗಾ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಎಂಜಿಎನ್‌ಆರ್‌ಇಜಿಎ ರದ್ದುಗೊಳಿಸುವಲ್ಲಿ ಮೋದಿ ಸರ್ಕಾರದ ಉದ್ದೇಶಗಳು 'ಮೂರು ಕರಾಳ ಕೃಷಿ ಕಾನೂನುಗಳನ್ನು' ತರುವಲ್ಲಿ ಇದ್ದಂತೆಯೇ ಇವೆ ಎಂದು ಆರೋಪಿಸಿದರು. ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಲು ಕಾರ್ಮಿಕರು ಒಗ್ಗಟ್ಟಿನಿಂದ ನಿಲ್ಲಬೇಕೆಂದು ಇಬ್ಬರೂ ನಾಯಕರು ಅಭಿಯಾನ ಉದ್ದೇಶಿಸಿ ಮಾತನಾಡುತ್ತಾ ಒತ್ತಾಯಿಸಿದರು.
ರಾಜಧಾನಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಎಂಜಿಎನ್‌ಆರ್‌ಇಜಿಎ ಕಾರ್ಮಿಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕರು, ಎಂಜಿಎನ್‌ಆರ್‌ಇಜಿಎ ಪರಿಕಲ್ಪನೆಯು ಬಡವರಿಗೆ ಹಕ್ಕುಗಳನ್ನು ನೀಡುವುದಾಗಿತ್ತು, ಆದರೆ ಬಿಜೆಪಿಯ ನೀತಿಗಳು ದೇಶದ ಸಂಪತ್ತು ಮತ್ತು ಆಸ್ತಿಯನ್ನು ಆಯ್ದ ಕೆಲವರ ಕೈಯಲ್ಲಿ ಕೇಂದ್ರೀಕರಿಸುವ ಗುರಿಯನ್ನು ಹೊಂದಿವೆ ಎಂದು ಪ್ರತಿಪಾದಿಸಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವುದೇ ಬಿಜೆಪಿಯ ಉದ್ದೇಶ ಎಂದರು.
ಸಂವಿಧಾನ ಮತ್ತು ಭಾರತದ ಕಲ್ಪನೆಯನ್ನು ನಂಬುವ ಬಡ ಜನರಿಗೆ ನರೇಗಾ ಚಳವಳಿ ಒಂದು ದೊಡ್ಡ ಅವಕಾಶವಾಗಿದೆ, ಜನರು ಒಟ್ಟಾಗಿ ಒಗ್ಗಟ್ಟಿನಿಂದ ನಿಂತರೆ ಮೋದಿ ಇದರಿಂದ ಹಿಂದೆ ಸರಿಯುತ್ತಾರೆ ಮತ್ತು ಹಿಂದಿನ ನರೇಗಾ ಯೋಜನೆ ಮರುಸ್ಥಾಪನೆಯಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಬಡವರಿಗೆ ಘನತೆ, ಗೌರವದಿಂದ ಜೀವನ ನಡೆಸಲು ಕೆಲಸ ಒದಗಿಸುವುದು ನರೇಗಾ ಯೋಜನೆ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ತರಲಾಗಿತ್ತು. MGNREGA ಜನರ ಧ್ವನಿಯನ್ನು ಹೊಂದಿತ್ತು, ಅವರ ಹಕ್ಕುಗಳನ್ನು ಹೊಂದಿತ್ತು, ಬಡವರಿಗೆ ಕೆಲಸ ಮಾಡುವ ಹಕ್ಕನ್ನು ನೀಡಲಾಯಿತು, ಈ ಪರಿಕಲ್ಪನೆಯನ್ನು ಮೋದಿ-ಬಿಜೆಪಿ ಈಗ ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
2020 ರಲ್ಲಿ ಮೋದಿ ಸರ್ಕಾರ ತಂದು ಮರುವರ್ಷ ರದ್ದುಗೊಳಿಸಿದ ಕೃಷಿ ಕಾನೂನುಗಳನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ಕೆಲವು ವರ್ಷಗಳ ಹಿಂದೆ ಬಿಜೆಪಿ ರೈತರ ಮೇಲೆ ದಾಳಿ ಮಾಡಿದೆ.ಅವುಗಳನ್ನು ತಡೆಯಲು ಒಂದೇ ಒಂದು ಮಾರ್ಗವಿದೆ, ಕಾರ್ಮಿಕರಿಗೆ ರೈತರು ದಾರಿ ತೋರಿಸಿದ್ದಾರೆ. ನಾವು ಒಟ್ಟಾಗಿ ನಿಂತರೆ, ನೀವು ಯೋಜನೆಯ ಹೆಸರನ್ನು ನಿರ್ಧರಿಸಬಹುದು. ಆದರೆ ಎಲ್ಲರೂ ಒಗ್ಗಟ್ಟು ತೋರಿಸಬೇಕು ಎಂದರು.