ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಐವರ ಸಾವನ್ನಪ್ಪಿದ್ದಾರೆ.
ಹೈದರಾಬಾದ್ ನ ನಾಂಪಲ್ಲಿ ಪ್ರದೇಶದ 4 ಅಂತಸ್ತಿನ ಪೀಠೋಪಕರಣ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ಕಟ್ಟಡದ ಎರಡು ನೆಲಮಾಳಿಗೆಗಳಲ್ಲಿ ಹೆಚ್ಚಿನ ಪ್ರಮಾಣದ ಪೀಠೋಪಕರಣಗಳಿವೆ, ಅಲ್ಲಿ ಬೆಂಕಿ ಕಾಣಿಸಿಕೊಂಡಿತು.
ನೆಲಮಾಳಿಗೆಯಿಂದ ಬರುವ ದಟ್ಟವಾದ ಹೊಗೆಯಿಂದಾಗಿ, ರಕ್ಷಣಾ ತಂಡವು ಇನ್ನೂ ಕಟ್ಟಡಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
‘ದುರ್ಘಟನೆಯಲ್ಲಿ ಇಬ್ಬರು ಮಕ್ಕಳು., ವೃದ್ಧ ಮಹಿಳೆ ಸೇರಿ ಐವರು ಮೃತಪಟ್ಟಿದ್ದು, ಕಟ್ಟಡದ ನೆಲಮಾಳಿಗೆಯಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅವರು ಉಸಿರುಗಟ್ಟಿ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಆದರೂ, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ. ಬೆಂಕಿ ಅವಘಡದ ಕಾರಣದ ಬಗ್ಗೆ ಕೇಳಿದಾಗ, ಅದು ತನಿಖಾ ಹಂತದಲ್ಲಿದೆ ಎಂದು ಅಧಿಕಾರಿ ಉತ್ತರಿಸಿದ್ದಾರೆ. ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತೆಲಂಗಾಣ ಅಗ್ನಿಶಾಮಕ, ವಿಪತ್ತು ಸ್ಪಂದನೆ, ತುರ್ತು ಮತ್ತು ನಾಗರಿಕ ರಕ್ಷಣಾ ಇಲಾಖೆಯ ಮಹಾನಿರ್ದೇಶಕ ವಿಕ್ರಮ್ ಸಿಂಗ್, ಕಟ್ಟಡದ ಎರಡೂ ನೆಲಮಾಳಿಗೆಗಳಲ್ಲಿ ಸಂಗ್ರಹಿಸಲಾದ ವಸ್ತುಗಳಲ್ಲಿ ಪೀಠೋಪಕರಣಗಳು, ಕಚ್ಚಾ ವಸ್ತುಗಳು, ರಾಸಾಯನಿಕಗಳು, ಪ್ಲಾಸ್ಟಿಕ್, ಹಾಸಿಗೆಗಳು, ಫೋಮ್ ಇದ್ದವು ಎಂದು ಹೇಳಿದ್ದಾರೆ.
200 ಜನರ ಜೊತೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜೆಎನ್ಟಿಯು ಎಂಜಿನಿಯರಿಂಗ್ ತಂಡವು ಶೀಘ್ರದಲ್ಲೇ ನಾಂಪಲ್ಲಿಗೆ ಬರಲಿದೆ. ಎಂಜಿನಿಯರಿಂಗ್ ತಂಡವು ಕಟ್ಟಡದ ಸಾಮರ್ಥ್ಯವನ್ನು ಪರಿಶೀಲಿಸುತ್ತದೆ ಮತ್ತು ಕಟ್ಟಡದ ಬಗ್ಗೆ ವರದಿ ಮಾಡುತ್ತದೆ.