ನವದೆಹಲಿ: BCC ಯ ಭಾರತದ ವ್ಯಾಖ್ಯಾನಕಾರಕ ಧ್ವನಿಯಾಗಿದ್ದ ಹಿರಿಯ ಪತ್ರಕರ್ತ ಸರ್ ವಿಲಿಯಂ ಮಾರ್ಕ್ ಟುಲ್ಲಿ ನಿಧನರಾಗಿದ್ದಾರೆ. ಭಾರತೀಯ ಪತ್ರಿಕೋದ್ಯಮದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ವಿಶ್ವಾಸಾರ್ಹ ಪತ್ರಕರ್ತರಲ್ಲಿ ಒಬ್ಬರಾದ ಸರ್ ವಿಲಿಯಂ ಮಾರ್ಕ್ ಟುಲ್ಲಿ ಅವರು ಭಾನುವಾರ ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಒಂದು ವಾರದ ಹಿಂದಷ್ಟೇ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1935 ರಲ್ಲಿ ಕೋಲ್ಕತ್ತಾದ ಟಾಲಿಗಂಜ್ ನಲ್ಲಿ ಶ್ರೀಮಂತ ಬ್ರಿಟಿಷ್ ಕುಟುಂಬದಲ್ಲಿ ಜನಿಸಿದ್ದ ಟುಲ್ಲಿ ವಸಾಹತುಶಾಹಿ ಸಾಮಾಜಿಕ ಸಂಹಿತೆಗಳು ಭಾರತೀಯರೊಂದಿಗೆ ನಿಕಟ ಸಂವಹನವನ್ನು ನಿರುತ್ಸಾಹಗೊಳಿಸುತ್ತಿದ್ದ ಕಾಲಘಟ್ಟದಲ್ಲಿ ಭಾರತದಲ್ಲೇ ತಮ್ಮ ಬಾಲ್ಯವನ್ನು ಕಳೆದರು. ವಿಪರ್ಯಾಸವೆಂದರೆ, ಬಾಲ್ಯದಲ್ಲಿ ಅವರಿಗೆ ನಿರಾಕರಿಸಲ್ಪಟ್ಟ ಆ ನಿಕಟ ಸಂಪರ್ಕವೇ ಮುಂದಿನ ದಿನಗಳಲ್ಲಿ ಅವರ ಜೀವನದ ಪ್ರಮುಖ ಅನ್ವೇಷಣೆಯಾಗಿ ಪರಿಣಮಿಸಿತು.
ಮುಂದಿನ ಆರು ದಶಕಗಳಲ್ಲಿ ಅವರು ಭಾರತದ ಬೀದಿಗಳಲ್ಲಿ ನಡೆದು, ಜನರ ಮಾತುಗಳನ್ನು ಆಲಿಸಿ, ದೇಶದ ವೈವಿಧ್ಯಗಳನ್ನು ಸಹಾನುಭೂತಿ ಮತ್ತು ಸಂಯಮದಿಂದ ದಾಖಲಿಸಿದರು. ಡಾರ್ಜಿಲಿಂಗ್ ನ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ನಂತರ ಮಾರ್ಲ್ ಬರೋ ಕಾಲೇಜು ಹಾಗೂ ಕೇಂಬ್ರಿಡ್ಜ್ ನಲ್ಲಿ ಉನ್ನತ ಶಿಕ್ಷಣ ಪಡೆದರು. ಆ ಅವಧಿಯಲ್ಲಿ ಭಾರತದಿಂದ ದೂರವಿದ್ದ ನೋವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರು.
ಕೇಂಬ್ರಿಡ್ಜ್ ನಂತರ ಲಿಂಕನ್ ಥಿಯಾಲಜಿಕಲ್ ಕಾಲೇಜಿಗೆ ಸೇರಿದರು. ಆದರೆ, ಸೆಮಿನರಿಯ ಶಿಸ್ತುಬದ್ಧ ಜೀವನ ಅವರಿಗೆ ಸ್ವಭಾವಕ್ಕೆ ಹೊಂದಿಕೆಯಾಗಲಿಲ್ಲ. 1964ರಲ್ಲಿ ಬಿಬಿಸಿ ಅವರನ್ನು ಭಾರತದ ವರದಿಗಾರನಾಗಿ ನವದೆಹಲಿಗೆ ನಿಯೋಜಿಸಿತು. ಮುಂದಿನ 30 ವರ್ಷಗಳ ಅವಧಿಯಲ್ಲಿ ಬಿಬಿಸಿಯೊಂದಿಗಿನ ಅವರ ಸಂಬಂಧ ದೇಶದ ಅತ್ಯಂತ ಗುರುತಿಸಲ್ಪಟ್ಟ ಹಾಗೂ ಗೌರವಿಸಲ್ಪಟ್ಟ ವಿದೇಶಿ ಪತ್ರಕರ್ತರನ್ನಾಗಿ ರೂಪಿಸಿತು.
1969ರಲ್ಲಿ ಫ್ಯಾಂಟಮ್ ಇಂಡಿಯಾ ಸಾಕ್ಷ್ಯಚಿತ್ರದ ಪ್ರಸಾರಕ್ಕೆ ಸಂಬಂಧಿಸಿದಂತೆ ಭಾರತ ಬಿಬಿಸಿಗೆ ನಿಷೇಧ ಹೇರಿದ ಬಳಿಕ ಅವರು ಲಂಡನ್ ಗೆ ಹಿಂತಿರುಗಬೇಕಾಯಿತು. ಆದರೆ 1971ರಲ್ಲಿ ಅವರು ಮತ್ತೆ ಭಾರತಕ್ಕೆ ಮರಳಿದರು. 1972ರ ವೇಳೆಗೆ ನವದೆಹಲಿಯಲ್ಲಿನ ಬಿಬಿಸಿಯ ಬ್ಯೂರೋ ಮುಖ್ಯಸ್ಥರಾಗಿ ನೇಮಕಗೊಂಡ ಅವರು ದಕ್ಷಿಣ ಏಷ್ಯಾದ ವರದಿ ಮೇಲ್ವಿಚಾರಣೆ ಮಾಡಿದರು.
1971ರ ಬಾಂಗ್ಲಾದೇಶ ಯುದ್ಧ, ತುರ್ತು ಪರಿಸ್ಥಿತಿ, ಜುಲ್ಫಿಕರ್ ಅಲಿ ಭುಟ್ಟೋ ಅವರ ಮರಣದಂಡನೆ, ಆಪರೇಷನ್ ಬ್ಲೂ ಸ್ಟಾರ್, ಇಂದಿರಾಗಾಂಧಿಯವರ ಹತ್ಯೆ, 1984ರ ಸಿಖ್ ವಿರೋಧಿ ಹಿಂಸಾಚಾರ, ರಾಜೀವ್ ಗಾಂಧಿಯವರ ಹತ್ಯೆ, 1992ರ ಬಾಬರಿ ಮಸೀದಿ ಧ್ವಂಸ, ಆರ್ಥಿಕ ಉದಾರೀಕರಣ ಸೇರಿದಂತೆ ಅನೇಕ ಚುನಾವಣೆಗಳು ಮತ್ತು ಸಾಮಾಜಿಕ ಬದಲಾವಣೆಗಳು ಅವರ ವರದಿಗಳ ವ್ಯಾಪ್ತಿಯಲ್ಲಿ ಬಂದಿದ್ದವು.
ಉಪಖಂಡದಾದ್ಯಂತ ತಲೆಮಾರುಗಳ ಶ್ರೋತೃಗಳು ಬಿಬಿಸಿ ವರ್ಲ್ಡ್ ಸರ್ವೀಸ್ ನ ಫ್ರಮ್ ಅವರ್ ಓನ್ ಕರೆಸ್ಪಾಂಡೆಂಟ್ ಕಾರ್ಯಕ್ರಮದಲ್ಲಿನ ಅವರ ಧ್ವನಿಯನ್ನು ಅಪಾರ ನಂಬಿಕೆಯಿಂದ ಕೇಳುತ್ತಿದ್ದರು. 1994ರಲ್ಲಿ ಬಿಬಿಸಿಯನ್ನು ತೊರೆದ ಬಳಿಕ ಟುಲ್ಲಿ 2019ರವರೆಗೆ ಬಿಬಿಸಿ ರೇಡಿಯೊ 4ರಲ್ಲಿ 'ಸಮ್ ಥಿಂಗ್ ಅಂಡರ್ ಸ್ಟುಡ್' ಎಂಬ ಆಧ್ಯಾತ್ಮಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಅವರು ಯಾವುದೇ ವಾಹಿನಿಗೆ ಸೇರದೆ ನವೆದಹಲಿಯಲ್ಲಿ ಸ್ವತಂತ್ರ ಬರಹಗಾರ ಹಾಗೂ ನಿರೂಪಕರಾಗಿ ಕಾರ್ಯನಿರ್ವಹಿಸಿದರು.
ಟುಲ್ಲಿ ಅವರು ಒಟ್ಟು 10 ಪುಸ್ತಕಗಳನ್ನು ಬರೆದಿದ್ದು, ಅವರ ಸೇವೆ ಗುರುತಿಸಿ 1992ರಲ್ಲಿ ಪದ್ಮಶ್ರೀ, 2002ರಲ್ಲಿ ಯುಕೆಯ ಹೊಸ ವರ್ಷದ ಗೌರವಗಳಲ್ಲಿ ಒಂದಾದ ನೈಟ್ ಪದವಿ ಹಾಗೂ 2005ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಬ್ರಿಟನ್ ಹಾಗೂ ಭಾರತ ಎರಡೂ ದೇಶಗಳಲ್ಲಿ ಅಧಿಕೃತ ಗೌರವ ಪಡೆದ ಅಪರೂಪದ ವ್ಯಕ್ತಿಗಳಲ್ಲಿ ಅವರು ಒಬ್ಬರಾಗಿದ್ದಾರೆ.