ಬಿಹಾರದ ಸುಪೌಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗಿದ ಘಟನೆ ಬೆಳಕಿಗೆ ಬಂದಿದೆ. ಕಿಶನ್‌ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಅಬುವಾದ್‌ನ ಆದರ್ಶ ಉತ್ಕ್ರಮಿತ್ ಮಾಧ್ಯಮಿಕ ವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಮತ್ತು ಅದರ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾನನ್ನು ಬೆಂಬಲಿಸಿ ಶಿಕ್ಷಕನೋರ್ವ ಘೋಷಣೆಗಳನ್ನು ಕೂಗಿದ್ದಾನೆ.
ಶಾಲಾ ಆವರಣದಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯುತ್ತಿತ್ತು. ಶಿಕ್ಷಕ ಮನ್ಸೂರ್ ಆಲಂ 'ಜಿನ್ನಾ ಜಿಂದಾಬಾದ್' ಮತ್ತು ಇತರ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ ಭಯ ಮತ್ತು ಗೊಂದಲವನ್ನು ಸೃಷ್ಟಿಸಿತು. ಘಟನೆಯ ಬಗ್ಗೆ ತಿಳಿದ ಗ್ರಾಮಸ್ಥರು ಶಾಲೆಗೆ ಧಾವಿಸಿ ಪ್ರತಿಭಟನೆ ಆರಂಭಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ, ಶಾಲೆಯ ಮುಖ್ಯೋಪಾಧ್ಯಾಯ ಧನಂಜಯ್ ತಿವಾರಿ ಅವರು ಕಿಶನ್‌ಪುರ ಪೊಲೀಸ್ ಠಾಣೆಗೆ ಲಿಖಿತ ದೂರು ದಾಖಲಿಸಿದ್ದಾರೆ. ಈ ಕೃತ್ಯವು ಶಾಲೆಯ ಘನತೆಗೆ ಧಕ್ಕೆ ತಂದಿದೆ. ದೇಶದ ಸಾರ್ವಭೌಮತ್ವ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮುಖ್ಯೋಪಾಧ್ಯಾಯರು ತಕ್ಷಣ ಠಾಣೆ ಅಧಿಕಾರಿಗೆ ಮಾಹಿತಿ ನೀಡಿದರು. ಕಿಶನ್‌ಪುರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 24/26 ದಾಖಲಿಸಲಾಗಿದೆ. ಠಾಣೆ ಅಧಿಕಾರಿ ಜ್ಞಾನ್ ರಂಜನ್ ಅವರು ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಲಭ್ಯವಿರುವ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಮತ್ತು ವಿಷಯವನ್ನು ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶರತ್ ಆರ್‌ಎಸ್ ತಿಳಿಸಿದ್ದಾರೆ. ಏತನ್ಮಧ್ಯೆ, ಘಟನೆಯ ನಂತರ ಶಿಕ್ಷಣ ಇಲಾಖೆಯೂ ಸಕ್ರಿಯವಾಗಿದ್ದು, ಶಿಕ್ಷಕರ ವರ್ತನೆಯ ಬಗ್ಗೆ ಇಲಾಖಾ ವಿಚಾರಣೆಗೆ ಸಿದ್ಧತೆ ನಡೆಸುತ್ತಿದೆ. ಘಟನೆಯ ಬಗ್ಗೆ ಸ್ಥಳೀಯ ನಿವಾಸಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.