ನವದೆಹಲಿ: ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಭಾರತದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು ಇದರ ಬೆನ್ನಲ್ಲೇ ಶೀಘ್ರದಲ್ಲೇ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಕೂಡ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಈ ಹಿಂದೆ ಕೆನಡಾ ಮತ್ತು ಭಾರತ ನಡುವಿನ ಸಂಬಂಧ ವಿವಿಧ ಕಾರಣಗಳಿಂದಾಗಿ ಹಳ್ಳ ಹಿಡಿದಿತ್ತು. ಈ ಹಿಂದಿನ ಪ್ರಧಾನಿ ಜಸ್ಟಿನ್ ಟ್ರುಡೋ ಅಧಿಕಾರಾವಧಿಯಲ್ಲಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ವಿವಿಧ ಕಾರಣಗಳಿಂದಾಗಿ ಹಳಸಿತ್ತು.
ಪ್ರಮುಖವಾಗಿ ಖಲಿಸ್ತಾನಿ ಉಗ್ರರ ಮತ್ತು ಖಲಿಸ್ತಾನಿ ಹೋರಾಟದ ಬೆನ್ನಿಗೆ ನಿಂತ ಆರೋಪ ಜಸ್ಚಿನ್ ಟ್ರುಡೋ ಮೇಲಿತ್ತು. ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಮಾತ್ರವಲ್ಲದೇ ಖಲಿಸ್ತಾನಿ ಉಗ್ರನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಜಸ್ಟಿನ್ ಟ್ರುಡೋ ಸರ್ಕಾರದ ಆರೋಪ ಭಾರತವನ್ನು ಮತ್ತಷ್ಟು ಕೆರಳಿಸಿತ್ತು.
ಇದೀಗ ಭಾರತ ಮತ್ತು ಕೆನಡಾ ನಡುವಿನ ಸಂಬಂಧವನ್ನು ಮತ್ತೆ ಟ್ರ್ಯಾಕ್ ಗೆ ತರಲು ಕೆನಡಾ ಸರ್ಕಾರ ಪ್ರಯತ್ನಿಸುತ್ತಿದ್ದು ಇದರ ಮೊದಲ ಹಂತವಾಗಿ ಇದೇ ಮಾರ್ಚ್ ನಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮಾರ್ಚ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಬಹುದು ಮತ್ತು ಎರಡೂ ಕಡೆಯವರು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ತಮ್ಮ ಮಾತುಕತೆಗಳನ್ನು ಔಪಚಾರಿಕವಾಗಿ ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.
ಭಾರತ ಮತ್ತು ಕೆನಡಾ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಲು ಅಂದರೆ ಹಾಲಿ ಇರುವ ವ್ಯಾಪಾರವನ್ನು $50 ಶತಕೋಟಿಗೆ ಏರಿಸಲು ನಿರ್ಧರಿಸಿವೆ.
2.8 ಬಿಲಿಯನ್ Uranium ಡೀಲ್ ಗೆ ಸಹಿ!
ಕಾರ್ನಿ ಅವರ ಭೇಟಿಯ ಸಮಯದಲ್ಲಿ ಉಭಯ ದೇಶಗಳು ಕೃತಕ ಬುದ್ಧಿಮತ್ತೆ, ನಿರ್ಣಾಯಕ ಖನಿಜಗಳು, ಇಂಧನ ಮತ್ತು 10 ವರ್ಷಗಳ 2.8 ಬಿಲಿಯನ್ ಡಾಲರ್ ಯುರೇನಿಯಂ ಪೂರೈಕೆ ಒಪ್ಪಂದಕ್ಕೂ ಸಹಿ ಹಾಕಬಹುದು. ಇದು ಭಾರತದ ಪರಮಾಣು ಯೋಜನೆಗೆ ಶಕ್ತಿ ತುಂಬಲಿದೆ ಎಂದು ಹೇಳಲಾಗಿದೆ.
ಇದಲ್ಲದೆ ಭಾರತವು ಕೆನಡಾದ ಪಿಂಚಣಿ ನಿಧಿಗಳಿಂದ ಹೆಚ್ಚಿನ ಹೂಡಿಕೆಗಳನ್ನು ಅನ್ವೇಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಮ್ಮ ಕೆನಡಾದ ಸಹವರ್ತಿ ಅನಿತಾ ಆನಂದ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಲ್ಲಿ ಇಬ್ಬರೂ 'ಭಾರತ-ಕೆನಡಾ' 'ದ್ವಿಪಕ್ಷೀಯ ಸಹಕಾರವನ್ನು ಆಳಗೊಳಿಸುವುದು ಮತ್ತು ಉನ್ನತ ಮಟ್ಟದ ವಿನಿಮಯವನ್ನು ಮುಂದುವರೆಸುವ' ಬಗ್ಗೆ ಚರ್ಚಿಸಿದರು.
ಕೆನಡಾಕ್ಕೆ ಭಾರತದ ಹೈಕಮಿಷನರ್ ದಿನೇಶ್ ಪಟ್ನಾಯಕ್ ಅವರು ಭಾನುವಾರ ನೀಡಿದ ರಾಯಿಟರ್ಸ್ ಸಂದರ್ಶನದಲ್ಲಿ ಕೆನಡಾದ ಪ್ರಧಾನಿ ಮಾರ್ಚ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಬಹುದು. ಮಾರ್ಚ್ ಮೊದಲ ವಾರ ನಾವು ನೋಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಶೀಘ್ರದಲ್ಲೇ ಕೆನಡಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಮತ್ತು ಮಾತುಕತೆಗಳು ಪ್ರಾರಂಭವಾದ ನಂತರ ಒಂದು ವರ್ಷದೊಳಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಹುದು ಎಂದು ಭಾರತೀಯ ರಾಜತಾಂತ್ರಿಕರು ತಿಳಿಸಿದ್ದಾರೆ.
ಎರಡೂ ಕಡೆಯವರು ಪ್ರಸ್ತುತ ಮಾತುಕತೆಗಳ ನಿಯಮಗಳನ್ನು ಅಂತಿಮಗೊಳಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.