ನವದೆಹಲಿ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಿವಾಸದಲ್ಲಿ ನಿನ್ನೆ ಆಯೋಜಿಸಿದ್ದ ಔತಣ ಕೂಟ ಸಮಾರಂಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗಾಮೋಸ ಧರಿಸಿಲ್ಲ. ಅದನ್ನು ಧರಿಸುವಂತೆ ಪದೇ ಪದೇ ಕೇಳಿದರೂ ಅವರು ಧರಿಸಲಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಈ ಆರೋಪವನ್ನು ಕಾಂಗ್ರೆಸ್ ನಾಯಕರು ಅಲ್ಲಗಳೆದಿದ್ದಾರೆ. ರಾಹುಲ್ ಗಾಂಧಿ ಅದನ್ನು ಧರಿಸಿದ್ದರು. ಆದರೆ ಊಟ ಬಡಿಸುವ ಸ್ಥಳದಲ್ಲಿ ಅದನ್ನು ತೆಗೆದಿರಬಹುದು ಎಂದಿದ್ದಾರೆ. ರಾಹುಲ್ ಗಾಂಧಿ ಈಶಾನ್ಯವನ್ನು ನಿರ್ಲಕ್ಷಿಸಿದ್ದಾರೆ ಎಂಬ ಬಿಜೆಪಿ ಆರೋಪ ನಕಲಿ ನಾಟಕ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಏನಿದು ಗಮೋಸಾ?ಅಂದಹಾಗೆ, ಗಮೋಸಾ,ಅಸ್ಸಾಂನ ಸಾಂಪ್ರದಾಯಿಕ ಬಿಳಿ ಬಟ್ಟೆಯಾಗಿದ್ದು, ಡಿಸೆಂಬರ್ 2022 ರಲ್ಲಿ ಭೌಗೋಳಿಕ ಸೂಚಕ (GI)ಟ್ಯಾಗ್ ಅನ್ನು ಸರ್ಕಾರ ನೀಡಿತು.
ರಾಷ್ಟ್ರಪತಿ ನಿವಾಸದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಯುರೋಪಿಯನ್ ಯೂನಿಯನ್ ನಾಯಕರು ಮತ್ತು ವಿದೇಶಿ ರಾಯಭಾರಿಗಳವರೆಗೆ ಎಲ್ಲಾ ಅತಿಥಿಗಳು ಗಮೋಸಾವನ್ನು ಸ್ವೀಕರಿಸಿ ಅದನ್ನು ಧರಿಸಿದರು. ಆದರೆ ರಾಷ್ಟ್ರಪತಿ ಎರಡು ಬಾರಿ ಕೇಳಿದರೂ ಅದನ್ನು ಧರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಸ್ಸಾಂ ಕಂಡರೆ ಆಗಲ್ಲ. ಈ ಕುಟುಂಬ ಈಶಾನ್ಯ ಭಾರತವನ್ನು ಕಡೆಗಣಿಸಿ, ಅಭಿವೃದ್ಧಿಯಿಂದ ದೂರ ಇಟ್ಟಿತ್ತು. ಈಗ ಅವರು ಈಶಾನ್ಯ ಸಂಸ್ಕೃತಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, ಇಡೀ ವಿವಾದವನ್ನು "ಬಿಜೆಪಿಯ ನಕಲಿ ನಾಟಕ" ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ ಅವರು ಮಣಿಪುರದಿಂದ ತಮ್ಮ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸುವ ಮಟ್ಟಿಗೆ ಈಶಾನ್ಯವನ್ನು ಪ್ರೀತಿಸುತ್ತಾರೆ. ರಾಷ್ಟ್ರಪತಿ ಭವನದಿಂದ ಇಂತಹ ಆಧಾರರಹಿತ ಸುದ್ದಿಗಳನ್ನು ಹರಡುತ್ತಿರುವುದು ದುರದೃಷ್ಟಕರ. ಅವರು ರಾಷ್ಟ್ರಪತಿ ಭವನವನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಟ್ಯಾಗೋರ್ ಹೇಳಿದ್ದಾರೆ.