ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್ ಅವರ 'ಆಕ್ಷೇಪಾರ್ಹ' ಹೇಳಿಕೆ ಖಂಡಿಸಿ ಜಿಎಸ್‌ಟಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಸಿಂಗ್ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಜಾತಿ ಮತ್ತು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಇತ್ತೀಚಿನ ಪ್ರಯತ್ನಗಳಿಂದ ತಮಗೆ ತೀವ್ರ ನೋವಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಸರ್ಕಾರ, ಸಂವಿಧಾನ ಮತ್ತು ದೇಶದ ಚುನಾಯಿತ ನಾಯಕತ್ವವನ್ನು ಬೆಂಬಲಿಸಿ ತಾವು ರಾಜೀನಾಮೆ ನೀಡುತ್ತಿರುವುದಾಗಿ ಸಿಂಗ್ ಹೇಳಿದ್ದಾರೆ.
"ಕಳೆದ ಕೆಲವು ದಿನಗಳಿಂದ, ಪ್ರಯಾಗರಾಜ್ ಪವಿತ್ರ ಭೂಮಿಯಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ರಾಷ್ಟ್ರವನ್ನು ವಿಭಜಿಸುವ ಹೇಯ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ನನಗೆ ತೀವ್ರ ನೋವಾಗಿದೆ" ಎಂದು ಸಿಂಗ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಭಾರತದ ಸಂವಿಧಾನವನ್ನು ಬೆಂಬಲಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸಿಂಗ್ ಹೇಳಿದ್ದಾರೆ.
"ಗೌರವಾನ್ವಿತ ಪ್ರಧಾನಿ, ಗೌರವಾನ್ವಿತ ಮುಖ್ಯಮಂತ್ರಿ ಮತ್ತು ಗೌರವಾನ್ವಿತ ಗೃಹ ಸಚಿವರನ್ನು ಬೆಂಬಲಿಸಿ ಮತ್ತು ಭಾರತದ ಸಂವಿಧಾನವನ್ನು ಬೆಂಬಲಿಸಿ ನಾನು ರಾಜೀನಾಮೆ ನೀಡಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿಗೆ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್ ಸ್ವಾಮಿ, ಪ್ರಯಾಗ್ ರಾಜ್ ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡದಂತೆ ತಮ್ಮನ್ನು ಮತ್ತು ತಮ್ಮ ಬೆಂಬಲಿಗರನ್ನು ತಡೆಯಲಾಗಿತ್ತು ಎಂದು ಆರೋಪಿಸಿದ್ದರು. ಅಲ್ಲದೆ ಯೋಗಿ ಆದಿತ್ಯನಾಥ್ ಈಗ ಒಬ್ಬ ರಾಜಕಾರಣಿ, ಅವರು ಧರ್ಮದ ವಿಷಯಗಳನ್ನು ನಮ್ಮಂತಹ ಸಂತರಿಗೆ ಬಿಡಬೇಕು ಎಂದಿದ್ದರು.