ನವದೆಹಲಿ: ಇಂದು ಬುಧವಾರ ಬೆಳಗ್ಗೆ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಅಜಿತ್ ಪವಾರ್ ಅವರ ವಿಮಾನ ದುರಂತದಲ್ಲಿ ಅಂತ್ಯ ಈ ಹಿಂದೆ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ರಾಜಕೀಯ ಮುಖಂಡರು ಮತ್ತು ಪ್ರಮುಖ ವ್ಯಕ್ತಿಗಳನ್ನು ನೆನಪಿಸಿದೆ.
ಎನ್‌ಸಿಪಿ ನಾಯಕ ಅಜಿತ್ ಪವಾರ್ (66ವ) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಪುಣೆಯ ಬಾರಾಮತಿ ಪ್ರದೇಶದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಪತನಗೊಂಡಿದೆ. ಈ ಹಿಂದೆ ದೇಶದಲ್ಲಿ ವಾಯು ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ಉನ್ನತ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳ ಪಟ್ಟಿ ಇಲ್ಲಿದೆ:
* ಹೋಮಿ ಬಾಬಾ (1966) ಭಾರತದ ಪ್ರವರ್ತಕ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಭಾಭಾ ಜನವರಿ 24, 1966 ರಂದು ಏರ್ ಇಂಡಿಯಾ ಫ್ಲೈಟ್ 101 ರಲ್ಲಿ ಸಂಭವಿಸಿದ ದುರಂತ ಅಪಘಾತದಲ್ಲಿ ನಿಧನರಾದರು. ಜಿನೀವಾ ವಾಯು ಸಂಚಾರ ನಿಯಂತ್ರಣದೊಂದಿಗೆ ತಪ್ಪು ಸಂವಹನದಿಂದಾಗಿ ವಿಮಾನವು ಸ್ವಿಸ್ ಆಲ್ಪ್ಸ್‌ನ ಮಾಂಟ್ ಬ್ಲಾಂಕ್‌ಗೆ ಅಪ್ಪಳಿಸಿ ದುರಂತಕ್ಕೀಡಾಗಿತ್ತು.
* ಸಂಜಯ್ ಗಾಂಧಿ (1980) ಕಾಂಗ್ರೆಸ್ ನಾಯಕ ಮತ್ತು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ ಜೂನ್ 23, 1980 ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ದೆಹಲಿ ಫ್ಲೈಯಿಂಗ್ ಕ್ಲಬ್ ವಿಮಾನದಲ್ಲಿ ವೈಮಾನಿಕ ಸಾಹಸ ಮಾಡಲು ಪ್ರಯತ್ನಿಸುತ್ತಿದ್ದಾಗ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡಿತು.
* ಮಾಧವರಾವ್ ಸಿಂಧಿಯಾ (2001)ಮಾಜಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಸೆಪ್ಟೆಂಬರ್ 30, 2001 ರಂದು ಕಾನ್ಪುರದಲ್ಲಿ ರಾಜಕೀಯ ರ್ಯಾಲಿಯೊಂದರ ಮಾರ್ಗದಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು. ಉತ್ತರ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ 10 ಆಸನಗಳ ಖಾಸಗಿ ವಿಮಾನ ಅಪಘಾತಕ್ಕೀಡಾಯಿತು.
* ಜಿಎಂಸಿ ಬಾಲಯೋಗಿ (2002) ಲೋಕಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಜಿಎಂಸಿ ಬಾಲಯೋಗಿ ಅವರನ್ನು ಕರೆದೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಮಾರ್ಚ್ 3, 2002 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೈಕಲೂರು ಬಳಿಯ ಕೊಳಕ್ಕೆ ಅಪ್ಪಳಿಸಿತು.
* ಸಿಪ್ರಿಯನ್ ಸಂಗ್ಮಾ (2004) ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರಿಯನ್ ಸಂಗ್ಮಾ ಮತ್ತು ಇತರ ಒಂಬತ್ತು ಮಂದಿ, ಪವನ್ ಹನ್ಸ್ ಹೆಲಿಕಾಪ್ಟರ್‌ನಲ್ಲಿ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಹೋಗುತ್ತಿದ್ದಾಗ, ಸೆಪ್ಟೆಂಬರ್ 22, 2004 ರಂದು ರಾಜ್ಯ ರಾಜಧಾನಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಬಾರಾಪಾನಿ ಸರೋವರದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಮೃತಪಟ್ಟರು.
* ಕೆ ಎಸ್ ಸೌಮ್ಯ (2004) ನಟಿ ಸೌಂದರ್ಯ ಬಿಜೆಪಿ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಏಪ್ರಿಲ್ 17, 2004 ರಂದು ಬೆಂಗಳೂರು ಹೊರವಲಯ ಯಲಹಂಕ ಬಳಿ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ತನ್ನ ಸಹೋದರ ಅರುಣ್ ಜೊತೆ ಬೆಂಗಳೂರಿನಿಂದ ಕರೀಂನಗರಕ್ಕೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತು.
* ಓ ಪಿ ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005) ಕೈಗಾರಿಕೋದ್ಯಮಿ ಮತ್ತು ಹರಿಯಾಣ ಸಚಿವರಾಗಿದ್ದ ಓಂ ಪ್ರಕಾಶ್ ಜಿಂದಾಲ್ 2005 ರಲ್ಲಿ ಕೃಷಿ ಸಚಿವ ಸುರೇಂದರ್ ಸಿಂಗ್ ಅವರೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಅವರ ಹೆಲಿಕಾಪ್ಟರ್ ದೆಹಲಿಯಿಂದ ಚಂಡೀಗಢಕ್ಕೆ ಹೋಗುವ ಮಾರ್ಗದಲ್ಲಿ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಅಪಘಾತಕ್ಕೀಡಾಯಿತು.
* ವೈ ಎಸ್ ರೆಡ್ಡಿ (2009) ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ (2009), ವೈಎಸ್ಆರ್ ಎಂದೇ ಜನಪ್ರಿಯರಾಗಿದ್ದರು. ಸೆಪ್ಟೆಂಬರ್ 2, 2009 ರಂದು ಅವರ ಬೆಲ್ 430 ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ದಟ್ಟವಾದ ನಲ್ಲಮಲ ಕಾಡಿನಲ್ಲಿ ಅಪಘಾತಕ್ಕೀಡಾಗಿ ಪತನಗೊಂಡಿತು.
* ದೋರ್ಜಿ ಖಂಡು (2011) ಅರುಣಾಚಲ ಪ್ರದೇಶ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರ ನಾಲ್ವರು ಏಪ್ರಿಲ್ 30, 2011 ರಂದು ತವಾಂಗ್‌ನಿಂದ ಇಟಾನಗರಕ್ಕೆ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ರಾಜ್ಯದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟರು.
* ಸಿಡಿಎಸ್ ಜನರಲ್ ಬಿಪಿನ್ ರಾವತ್ (2021) ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್ 8, 2021 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಈ ಘಟನೆ ತಮಿಳುನಾಡಿನ ಕೂನೂರ್ ಬಳಿ ತಮ್ಮ ಪತ್ನಿ ಮತ್ತು ಇತರ 11 ಜನರೊಂದಿಗೆ ಸುಲೂರಿನಿಂದ ವೆಲ್ಲಿಂಗ್ಟನ್‌ಗೆ ಹೋಗುತ್ತಿದ್ದಾಗ ಸಂಭವಿಸಿದೆ.
* ವಿಜಯ್ ರೂಪಾನಿ (2025) ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು. ಬೋಯಿಂಗ್ 787-8 ಡ್ರೀಮ್‌ಲೈನರ್ (AI171) ನಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಮತ್ತು ವಿಮಾನ ಡಿಕ್ಕಿ ಹೊಡೆದ ಹಾಸ್ಟೆಲ್ ಕಟ್ಟಡದಲ್ಲಿ ಇದ್ದ MBBS ವಿದ್ಯಾರ್ಥಿಗಳು ಸೇರಿದಂತೆ 20 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.