ಅಜಿತ್ ಪವಾರ್ 
ದೇಶ

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಅತಂತ್ರದಲ್ಲಿ NCP ಭವಿಷ್ಯ?; ರಾಜಕೀಯ ವಿಶ್ಲೇಷಕರು ಹೇಳೋದೇನು?

ಇದೀಗ ಅಜಿತ್ ಪವಾರ್ ಜೊತೆಗಿದ್ದ 41 ಶಾಸಕರು ಶರದ್ ಪವಾರ್ ಕಡೆಗೆ ವಾಲದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೋಡಿಕೊಳ್ಳಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಮುಂಬೈ: ಬುಧವಾರ ಬೆಳಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ದುರಂತ ಮತ್ತು ಅಕಾಲಿಕ ಮರಣವು ರಾಜ್ಯದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ನಿರ್ವಾತವನ್ನು ಉಂಟುಮಾಡಿರುವುದರ ಜೊತೆಗೆ ಎನ್‌ಸಿಪಿಯ ಭವಿಷ್ಯದ ಮೇಲೆಯೂ ಕರಿನೆರಳು ಬೀರಿದೆ.

ಅಜಿತ್ ಪವಾರ್ ನಿಧನದ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನಾಯಕತ್ವದ ಬಿಕ್ಕಟ್ಟನ್ನು ಎದುರಿಸುವ ಸಾಧ್ಯತೆಯಿದೆ. ಏಕೆಂದರೆ, ಪಕ್ಷಕ್ಕೆ ಎರಡನೇ ನಾಯಕ ಇಲ್ಲ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.

'ಗಡಿಯಾರ'ದ ಚಿಹ್ನೆಯನ್ನು ಹೊಂದಿರುವ ಪಕ್ಷವು ತನ್ನ ನಿರ್ವಿವಾದ ನಾಯಕನನ್ನು ಕಳೆದುಕೊಂಡಿರುವುದರಿಂದ, ಪಕ್ಷದ ಉಳಿವು ಮತ್ತು ಏಪ್ರಿಲ್‌ನಲ್ಲಿ ರಾಜ್ಯಸಭಾ ಸದಸ್ಯತ್ವ ಕೊನೆಗೊಳ್ಳಲಿರುವ ಅದರ ಸಂಸ್ಥಾಪಕ ಶರದ್ ಪವಾರ್ ಅವರೊಂದಿಗೆ ಭವಿಷ್ಯದ ಸಮೀಕರಣದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಇತ್ತೀಚಿನ ತಿಂಗಳುಗಳಲ್ಲಿ ಬಣಗಳ ನಡುವಿನ ಸಂಬಂಧ ಸುಧಾರಿಸಿದ್ದು, ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಜೊತೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತೆ ಒಂದಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ಇದೀಗ ಅಜಿತ್ ಪವಾರ್ ಜೊತೆಗಿದ್ದ 41 ಶಾಸಕರು ಶರದ್ ಪವಾರ್ ಕಡೆಗೆ ವಾಲದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೋಡಿಕೊಳ್ಳಬೇಕಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಅವರು ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ ಮತ್ತು ಆಡಳಿತಾತ್ಮಕ ಅನುಭವವಿಲ್ಲದಿದ್ದರೂ, ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಎನ್‌ಸಿಪಿಯಲ್ಲಿ ಸುನಿಲ್ ತತ್ಕರೆ ಎಂಬ ಒಬ್ಬ ಲೋಕಸಭಾ ಸಂಸದ ಮತ್ತು ಪ್ರಫುಲ್ ಪಟೇಲ್ ಮತ್ತು ಸುನೇತ್ರಾ ಪವಾರ್ ಎಂಬ ಇಬ್ಬರು ರಾಜ್ಯಸಭಾ ಸದಸ್ಯರಿದ್ದಾರೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕ ಚುನಾವಣೆಗಳ ಸಂದರ್ಭದಲ್ಲಿ ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಸಾರ್ವಜನಿಕರ ಗಮನದಿಂದ ದೂರ ಉಳಿದಿದ್ದರಿಂದ, ಅವರ ಪುತ್ರಿ ಮತ್ತು ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. ಆದರೆ, ಅವರ ಸೋದರಸಂಬಂಧಿ ಅಜಿತ್ ಪವಾರ್‌ ರಾಜ್ಯಾದ್ಯಂತ ಪ್ರಚಾರ ಮಾಡಿದ್ದರು.

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ವಿಲೀನವಾಗುವ ಸಾಧ್ಯತೆಯ ಬಗ್ಗೆ ರಾಜ್ಯದ ರಾಜಕೀಯ ವಲಯದಲ್ಲಿ ವ್ಯಾಪಕ ಊಹಾಪೋಹಗಳು ಹಬ್ಬಿದ್ದವು. ಆದರೆ, ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರ ಅಕಾಲಿಕ ಮರಣವು ಇದೀಗ ಎನ್‌ಸಿಪಿ ಬಣದ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟುಮಾಡಿದೆ.

ಎನ್‌ಸಿಪಿ ರಾಜ್ಯಾಧ್ಯಕ್ಷ ಸುನೀಲ್ ತತ್ಕರೆ ಮತ್ತು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರಫುಲ್ ಪಟೇಲ್ ಅವರನ್ನು ಹೊರತುಪಡಿಸಿ, ಅಜಿತ್ ಪವಾರ್ ಅವರ ನಂತರ ಪಕ್ಷದ ಮುಂದಾಳತ್ವ ವಹಿಸಲು ಸಮರ್ಥ ಹಿರಿಯ ನಾಯಕ ಪಕ್ಷದಲ್ಲಿ ಇಲ್ಲ.

ಇತ್ತೀಚೆಗೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಮತ್ತೊಬ್ಬ ನಾಯಕ ಛಗನ್ ಭುಜಬಲ್ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪಟೇಲ್ ಮತ್ತು ತತ್ಕರೆ ಪ್ರಮುಖ ಸಾಂಸ್ಥಿಕ ವ್ಯಕ್ತಿಗಳಾಗಿದ್ದರೂ, ಅಜಿತ್ ಪವಾರ್ ಅವರಂತೆ ರಾಜ್ಯದಾದ್ಯಂತ ತಳಮಟ್ಟದ ಸಂಪರ್ಕ ಅವರಿಬ್ಬರಿಗೆ ಇಲ್ಲ.

2024ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿದ ಆಡಳಿತಾರೂಢ ಮಹಾಯುತಿಯಲ್ಲಿ, ಬಿಜೆಪಿ 132 ಶಾಸಕರನ್ನು ಹೊಂದಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 57 ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ 41 ಶಾಸಕರನ್ನು ಹೊಂದಿದೆ.

ಹಿರಿಯ ಪತ್ರಕರ್ತ ಪ್ರಕಾಶ್ ಅಕೋಲ್ಕರ್ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿ, ಫೆಬ್ರುವರಿ 5 ರಂದು ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಎನ್‌ಸಿಪಿಯ ಎರಡೂ ಬಣಗಳು 'ಗಡಿಯಾರ' ಚಿಹ್ನೆಯ ಮೇಲೆ ಒಟ್ಟಾಗಿ ಸ್ಪರ್ಧಿಸುತ್ತಿವೆ. ಇದು ಅನಧಿಕೃತ ವಿಲೀನವನ್ನು ಬಲವಾಗಿ ಸೂಚಿಸುತ್ತದೆ ಎಂದರು.

'ಯಾರು ಯಾರೊಂದಿಗೆ ವಿಲೀನಗೊಳ್ಳುತ್ತಾರೆ ಎಂಬುದು ಇನ್ನು ಮುಂದೆ ಪ್ರಶ್ನೆಯಲ್ಲ. ರಾಜ್ಯದಲ್ಲಿ ಕೇವಲ ಎರಡು ವಿರೋಧ ಪಕ್ಷಗಳು - ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) - ಉಳಿದಿರುವುದರಿಂದ ಕಾಂಗ್ರೆಸ್ ತನ್ನನ್ನು ತಾನು ಪುನರುಜ್ಜೀವನಗೊಳಿಸಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ' ಎಂದು ಅವರು ಹೇಳಿದರು.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಎನ್‌ಸಿಪಿ ತನ್ನ ಮಹಾಯುತಿ ಮಿತ್ರಪಕ್ಷಗಳಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ಸ್ಪರ್ಧಿಸಿ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ 167 ಸ್ಥಾನಗಳನ್ನು ಗೆದ್ದಿತು. ಆದಾಗ್ಯೂ, ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) ಜೊತೆ ಕೈಜೋಡಿಸಿದ್ದ ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್‌ಗಳಲ್ಲಿ ಬಿಜೆಪಿ ವಿರುದ್ಧ ಸೋತಿತು.

165 ಸದಸ್ಯ ಬಲದ ಪುಣೆ ಮಹಾನಗರ ಪಾಲಿಕೆಯಲ್ಲಿ, ಬಿಜೆಪಿ 119 ಸ್ಥಾನಗಳನ್ನು ಗೆದ್ದರೆ, ಎನ್‌ಸಿಪಿ ಕೇವಲ 27 ಸ್ಥಾನಗಳನ್ನು ಮತ್ತು ಎನ್‌ಸಿಪಿ (ಎಸ್‌ಪಿ) 3 ಸ್ಥಾನಗಳನ್ನು ಗೆದ್ದುಕೊಂಡಿತು. 102 ಸದಸ್ಯ ಬಲದ ಪಿಂಪ್ರಿ ಚಿಂಚ್‌ವಾಡ್ ನಗರಸಭೆಯಲ್ಲಿ, ಅಜಿತ್ ಪವಾರ್ ಅವರ ಪಕ್ಷ 37 ಸ್ಥಾನಗಳನ್ನು ಗಳಿಸಿತು ಮತ್ತು ಬಿಜೆಪಿ 84 ಸ್ಥಾನಗಳನ್ನು ಗಳಿಸಿತು. ಆದರೆ, ಶರದ್ ಪವಾರ್ ಅವರ ಬಣವು ಒಂದೂ ಸ್ಥಾನ ಗಳಿಸಿರಲಿಲ್ಲ.

ಕಳೆದ ತಿಂಗಳು, 246 ನಗರಸಭೆ 42 ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ, ಒಟ್ಟು 6,851 ಸ್ಥಾನಗಳ ಪೈಕಿ ಎನ್‌ಸಿಪಿ 966 ಮತ್ತು ಎನ್‌ಸಿಪಿ (ಎಸ್‌ಪಿ) 256 ಸ್ಥಾನಗಳನ್ನು ಗೆದ್ದುಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಡಾ ಹಗರಣ: ಸಿದ್ದರಾಮಯ್ಯ ಹಾಗೂ ಕುಟುಂಬಕ್ಕೆ ಬಿಗ್ ರಿಲೀಫ್; ಲೋಕಾಯುಕ್ತ ಸಲ್ಲಿಸಿದ್ದ 'ಬಿ' ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

Baramati plane crash: ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೂ ಮುನ್ನ ಆಗಿದ್ದೇನು? ಸ್ಫೋಟಕ ಮಾಹಿತಿ ಬಹಿರಂಗ!

ಮಹಾಂತೇಶ್​​ ಬೀಳಗಿ ಪುತ್ರಿಗೆ ಸರ್ಕಾರಿ ನೌಕರಿ: ನೇಮಕಾತಿ ಆದೇಶ ಪತ್ರ ಹಸ್ತಾಂತರಿಸಿದ ಸಿಎಂ; ಕೆಲಸ ಎಲ್ಲಿ ಗೊತ್ತಾ?

ಅಜಿತ್ ಪವಾರ್ ಸಾವು: ಇತರ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ; 'ಸುಪ್ರೀಂ' ಮೇಲ್ವಿಚಾರಣೆಯಲ್ಲಿ ವಿಮಾನ ಪತನ ತನಿಖೆಗೆ ಮಮತಾ ಆಗ್ರಹ

ಬೆಂಗಳೂರು: ಉದ್ಯಮಿ ಮನೆಯಲ್ಲಿದ್ದ 18 ಕೋಟಿ ರೂ. ಚಿನ್ನಾಭರಣ ಕದ್ದು ಮನೆಗೆಲಸದ ದಂಪತಿ ಪರಾರಿ!

SCROLL FOR NEXT