ಮುಂಬೈ: ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ತನ್ನ ಸೋದರಳಿಯ ಹಾಗೂ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿನ ಕುರಿತು ಹಿರಿಯ ರಾಜಕಾರಣಿ ಮತ್ತು NCP (SP) ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸಂಪೂರ್ಣವಾಗಿ ಅಪಘಾತವಾಗಿದ್ದು, ಘಟನೆಯ ಹಿಂದೆ ಯಾವುದೇ ಪಿತೂರಿ ಇಲ್ಲ ಎಂದು ಹೇಳಿದ್ದಾರೆ.
66 ವರ್ಷದ ಅಜಿತ್ ಪವಾರ್ ಮತ್ತಿತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನ ಇಂದು ಮುಂಜಾನೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ ಅಪಘಾತಕ್ಕೀಡಾಗಿತ್ತು. ತನ್ನ ಸೋದರಳಿಯನ ದುರಂತ ಮತ್ತು ಹಠಾತ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್, ಆತನ ಸಾವಿನಿಂದ ಆಗಿರುವ ನಷ್ಟವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ. ಘಟನೆಯಲ್ಲಿ ಯಾವುದೇ ಪಿತೂರಿ ನಡೆದಿಲ್ಲ ಎಂದಿದ್ದಾರೆ.
NDTVಯೊಂದಿಗೆ ಮಾತನಾಡಿದ ಶರದ್ ಪವಾರ್, "ಯಾವುದೇ ಪಿತೂರಿ ನಡೆದಿಲ್ಲ. ಇದು ಸಂಪೂರ್ಣವಾಗಿ ಅಪಘಾತವಾಗಿದೆ. ಅಜಿತ್ ಪವಾರ್ ಅವರ ನಿಧನದಿಂದ ಮಹಾರಾಷ್ಟ್ರಕ್ಕೆ ದೊಡ್ಡ ನಷ್ಟ ಆಗಿದೆ. ಒಬ್ಬ ಸಮರ್ಥ ನಾಯಕ ಇಂದು ನಮ್ಮನ್ನು ಅಗಲಿದ್ದಾರೆ. ಮಹಾರಾಷ್ಟ್ರ ಇಂದು ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡಿದೆ. ಈ ನಷ್ಟವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೆಲವು ಘಟನೆಗಳು ರಾಜಕೀಯವನ್ನು ಮೀರಿರುತ್ತವೆ. ಅಜಿತ್ ಪವಾರ್ ನಿಧನದ ನೋವ ಮಹಾರಾಷ್ಟ್ರಕ್ಕೆ ಶಾಶ್ವತವಾಗಿ ಇರಲಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡಬೇಡಿ, ಇದನ್ನು ಎಲ್ಲರಿಗೂ ಹೇಳಲು ಬಯಸುತ್ತೇನೆ ಎಂದಿದ್ದಾರೆ.
"ಎಲ್ಲವೂ ನಮ್ಮ ಕೈಯಲ್ಲಿಲ್ಲ. ನಾನು ಅಸಹಾಯಕನಾಗಿದ್ದೇನೆ. ಅಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೆಲವು ಘಟನೆಗಳ ಹಿಂದೆ ಯಾವುದೇ ರಾಜಕೀಯ ಇರಲ್ಲ. ನಾನು ಈ ಬಗ್ಗೆ ನನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಇದರಲ್ಲಿ ಯಾವುದೇ ಪಿತೂರಿ ಇಲ್ಲ. ಇದು ಸಂಪೂರ್ಣವಾಗಿ ಅಪಘಾತ, ಮಹಾರಾಷ್ಟ್ರ ಮತ್ತು ನಾವೆಲ್ಲರೂ ಇದರ ನೋವನ್ನು ಶಾಶ್ವತವಾಗಿ ಭರಿಸಬೇಕಾಗುತ್ತದೆ. ದಯವಿಟ್ಟು ಇದರಲ್ಲಿ ರಾಜಕೀಯವನ್ನು ತರಬೇಡಿ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಶರದ್ ಪವಾರ್ ಅವರ ಪುತ್ರಿ ಮತ್ತು ಎನ್‌ಸಿಪಿ (ಎಸ್‌ಪಿ) ಯ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ, ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರೊಂದಿಗೆ ಬಾರಾಮತಿಗೆ ಆಗಮಿಸುತ್ತಿದ್ದಂತೆ ಗೋಳಾಡುವುದು ಕಂಡುಬಂದಿತು.
ಅಜಿತ್ ಪವಾರ್ ಸಾವಿನ ಕುರಿತು ಸುಪ್ರೀಂ ಕೋರ್ಟ್-ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ ಬೆನ್ನಲ್ಲೇ ಶರದ್ ಪವಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
2023 ರಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಸೇರಲು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ ಹೊರನಡೆದಿದ್ದ ಅಜಿತ್ ಪವಾರ್, ಮತ್ತೆ ತಮ್ಮ ಚಿಕ್ಕಪ್ಪನೊಂದಿಗೆ ಸೇರಲು ಯೋಜಿಸುತ್ತಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಮಮತಾ ಬ್ಯಾನರ್ಜಿ ಒತ್ತಾಯವನ್ನು ಬೆಂಬಲಿಸಿದ್ದಾರೆ. ವಿಮಾನ ಅಪಘಾತದ ಕುರಿತು ನಿಜವಾದ ಕಾರಣ ತಿಳಿಯಲು ಪಾರದರ್ಶಕ ತನಿಖೆ ನಡೆಯಬೇಕಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.