ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರನ್ನು ಹೊತ್ತೊಯ್ಯುತ್ತಿದ್ದ ಲಘು ವಿಮಾನವು ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಪತನವಾಗಿದ್ದು, ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಬುಧವಾರ ಹೇಳಿದ್ದಾರೆ.
"ಅಪಘಾತದ ತನಿಖೆ ನಡೆಸಲು ಡಿಜಿಸಿಎ(ನಾಗರಿಕ ವಿಮಾನಯಾನ ನಿರ್ದೇಶನಾಲಯ) ಮತ್ತು ಎಎಐಬಿ(ವಿಮಾನ ಅಪಘಾತ ತನಿಖಾ ಬ್ಯೂರೋ) ತಂಡಗಳು ಆಗಮಿಸಿವೆ.
ವಿಮಾನ ಲ್ಯಾಂಡಿಂಗ್ ಗೆ ಯತ್ನಿಸುವ ಸಮಯದಲ್ಲಿ ಗೋಚರತೆ ತೀವ್ರ ಕಳಪೆಯಾಗಿತ್ತು ಎಂದು ಪ್ರಾಥಮಿಕ ತನಿಖಾ ಮಾಹಿತಿ ಸೂಚಿಸುತ್ತಿದೆ ಎಂದು ನಾಯ್ಡು ವರದಿಗಾರರಿಗೆ ತಿಳಿಸಿದ್ದಾರೆ.
ಬಾರಾಮತಿಯಲ್ಲಿ ವಿಮಾನ ಅಪಘಾತದಲ್ಲಿ 66 ವರ್ಷದ ಅಜಿತ್ ಪವಾರ್, ಅವರ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ವಿಮಾನ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಫೆಬ್ರವರಿ 5 ರಂದು ರಾಜ್ಯದಲ್ಲಿ ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಯ ಪ್ರಚಾರದ ಭಾಗವಾಗಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ಅಜಿತ್ ಪವಾರ್ ಅವರು ಇಂದು ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದರು.
ಫ್ಲೈಟ್ ರಾಡಾರ್ ಪ್ರಕಾರ, ವಿಮಾನವು ಇಂದು ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತು ಮತ್ತು ವಿಮಾನ ಟೇಕಾಫ್ ಆದ ಕೇವಲ 35 ನಿಮಿಷಗಳಲ್ಲೇ ಅಂದರೆ ಬೆಳಗ್ಗೆ 8.45ಕ್ಕೆ ರಾಡಾರ್‌ನಿಂದ ಕಣ್ಮರೆಯಾಯಿತು.
ವಿಮಾನಯಾನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಪೈಲಟ್ ಗೆ ರನ್‌ವೇ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ವಿಮಾನವು ಆರಂಭದಲ್ಲಿ ಒಂದು ಸುತ್ತು ಹಾರಾಟ ನಡೆಸಿದೆ. ಪೈಲಟ್, ರನ್‌ವೇ ಅಸ್ವಷ್ಟವಾಗಿ ಕಾಣಿಸಿದ ನಂತರ ಲ್ಯಾಂಡಿಂಗ್ ಯತ್ನಿಸಿದ್ದಾರೆ. ಆದರೆ ಲ್ಯಾಂಡಿಂಗ್ ಕ್ಲಿಯರೆನ್ಸ್ ಅನ್ನು ಮರುಪಡೆಯಲು ವಿಫಲವಾದ ನಂತರ ವಿಮಾನವು ಎರಡನೇ ಲ್ಯಾಂಡಿಂಗ್ ಪ್ರಯತ್ನದಲ್ಲಿ ಅಪಘಾತಕ್ಕೀಡಾಗಿದೆ.
ಬಾರಾಮತಿ ವಿಮಾನ ನಿಲ್ದಾಣವು "ಅನಿಯಂತ್ರಿತ ವಾಯುನೆಲೆ"ಯಾಗಿದ್ದು, ಅಲ್ಲಿ ವಿಮಾನ ಸಂಚಾರ ಮಾಹಿತಿಯನ್ನು ಸ್ಥಳೀಯ ವೈಮಾನಿಕ ಶಾಲೆಗಳ ಪೈಲಟ್‌ಗಳು ಅಥವಾ ಬೋಧಕರು ನಿರ್ವಹಿಸುತ್ತಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ATC ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ, ಬಿಡುಗಡೆಯಾದ ಪ್ರಕಟಣೆಯ ಪ್ರಕಾರ, ವಿಮಾನ - ಲಿಯರ್‌ಜೆಟ್ 45 XR, VI-SSK ಎಂದು ನೋಂದಾಯಿಸಲ್ಪಟ್ಟಿದೆ ಮತ್ತು ದೆಹಲಿ ಮೂಲದ VSR ವೆಂಚರ್ಸ್ ಈ ವಿಮಾನವನ್ನು ನಿರ್ವಹಿಸುತ್ತದೆ - ಬುಧವಾರ ಬೆಳಗ್ಗೆ 8:18 ಕ್ಕೆ ಬಾರಾಮತಿ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಸಾಧಿಸಿದು, ಅದು ಬೆಳಿಗ್ಗೆ 8.10 ಕ್ಕೆ ಮುಂಬೈನಿಂದ ಹೊರಟ ಕೆಲವೇ ನಿಮಿಷಗಳ ನಂತರ ಬಾರಾಮತಿ ವಿಮಾನ ನಿಲ್ದಾಣದಿಂದ 30 ನಾಟಿಕಲ್ ಮೈಲುಗಳಷ್ಟು ದೂರದಲ್ಲಿತ್ತು. ಆಗ ಪುಣೆಯಿಂದ ವಿಮಾನವನ್ನು ಸ್ಥಳೀಯ ವಾಯು ಸಂಚಾರ ನಿಯಂತ್ರಕರಿಗೆ ಹಸ್ತಾಂತರಿಸಲಾಯಿತು ಮತ್ತು ಪೈಲಟ್‌ಗೆ ದೃಷ್ಟಿಗೋಚರತೆಯ ಕೊರತೆಯಿಂದಾಗಿ ಅವರ ವಿವೇಚನೆ ಬಳಸಿ ಲ್ಯಾಂಡಿಂಗ್ ಮಾಡಲು ಸೂಚಿಸಲಾಯಿತು.
ವಿಮಾನ ಸಿಬ್ಬಂದಿ ಗಾಳಿ ಮತ್ತು ಗೋಚರತೆಯ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ATC ಗಾಳಿ ಶಾಂತವಾಗಿದೆ ಮತ್ತು ಗೋಚರತೆ ಸುಮಾರು 3000 ಮೀಟರ್ ಇದೆ ಎಂದು ಪ್ರತಿಕ್ರಿಯಿಸಿದೆ.
ಮುಂದೆ, ವಿಮಾನವು ರನ್‌ವೇ 11ಕ್ಕೆ ಸಮೀಪಿಸುತ್ತಿರುವುದಾಗಿ ವರದಿ ಮಾಡಿದೆ. ಆದಾಗ್ಯೂ, ಪೈಲಟ್ ರನ್‌ವೇ ಕಾಣಿಸುತ್ತಿಲ್ಲ ಎಂದು ವರದಿ ಮಾಡಿದ ತಕ್ಷಣ, ಅವರು ಸುತ್ತಾಟವನ್ನು ಪ್ರಾರಂಭಿಸಿದರು.
ದಿಕ್ಕು ತಪ್ಪಿದ ವಿಮಾನ
ದಟ್ಟ ಮಂಜು ಆವರಿಸಿದ್ದರಿಂದ ಪೈಲಟ್‌ಗೆ ಮುಂದಿನ ಹಾದಿ ಸರಿಯಾಗಿ ಕಾಣುತ್ತಿರಲಿಲ್ಲ. ಈ ದೃಷ್ಟಿಗೋಚರತೆಯ ಕೊರತೆಯಿಂದಾಗಿ ವಿಮಾನವು ತನ್ನ ನಿಗದಿತ ಹಾದಿಯನ್ನು ಬಿಟ್ಟು ಪಕ್ಕಕ್ಕೆ ಸರಿದಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ರನ್‌ವೇ ತಲುಪಲು ಇನ್ನು ಕೆಲವೇ ನಿಮಿಷಗಳಿರುವಾಗ, ದಾರಿ ತಪ್ಪಿದ ವಿಮಾನವು ವೇಗವಾಗಿ ಹೋಗಿ ಗುಡ್ಡಗಾಡು ಪ್ರದೇಶದ ಕಲ್ಲಿನ ಏಣಿಗೆ ಬಲವಾಗಿ ಅಪ್ಪಳಿಸಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಲಿಯರ್ ಜೆಟ್ ವಿಮಾನವು ಕ್ಷಣಾರ್ಧದಲ್ಲಿ ಎರಡು ತುಂಡಾಗಿ ಬೆಂಕಿ ಹೊತ್ತಿಕೊಂಡಿದೆ. ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿದ್ದ ಕಾರಣ ವಿಮಾನವು ಕೆಳಮಟ್ಟದಲ್ಲಿ ಹಾರುತ್ತಿತ್ತು, ಇದು ಅನಾಹುತದ ತೀವ್ರತೆಯನ್ನು ಹೆಚ್ಚಿಸಿತು.