ನವದೆಹಲಿ: ಪಕ್ಷದ ಹೈಕಮಾಂಡ್ ಮತ್ತು ತಮ್ಮ ನಡುವಿನ ಭಿನ್ನಾಭಿಪ್ರಾಯಗಳ ನಡುವೆಯೇ, ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ಇತ್ತಿಚೀಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದ ತಿರುವನಂತಪುರಂ ಸಂಸದ ಇಂದು ಬೆಳಗ್ಗೆ ಸಂಸತ್ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್, "ನಾನು ನಮ್ಮ ಇಬ್ಬರು ಪಕ್ಷದ ನಾಯಕರಾದ ಎಲ್ಒಪಿ ಮತ್ತು ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದೇನೆ. ನಾವು ತುಂಬಾ ಒಳ್ಳೆಯ, ರಚನಾತ್ಮಕ, ಸಕಾರಾತ್ಮಕ ಚರ್ಚೆ ನಡೆಸಿದ್ದೇವೆ. ಎಲ್ಲವೂ ಚೆನ್ನಾಗಿದೆ, ಮತ್ತು ನಾವು ಒಮ್ಮತದಿಂದ ಒಟ್ಟಿಗೆ ಸಾಗುತ್ತಿದ್ದೇವೆ ಎಂದರು.
ಇನ್ನೇನು ಹೇಳಲಿ? ನಾನು ಯಾವಾಗಲೂ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ಶಶಿ ತರೂರ್ ತಿಳಿಸಿದರು.
ಕೇರಳ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚಿಸಲಾಗಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ತರೂರ್, "ಇಲ್ಲ, ಅದರ ಬಗ್ಗೆ ಎಂದಿಗೂ ಚರ್ಚಿಸಲಾಗಿಲ್ಲ. ಈ ಸಮಯದಲ್ಲಿ ನಾನು ಯಾವುದೇ ಅಭ್ಯರ್ಥಿಯಾಗಲು ಆಸಕ್ತಿ ಇಲ್ಲ. ನಾನು ಈಗಾಗಲೇ ಸಂಸದನಾಗಿದ್ದೇನೆ ಮತ್ತು ತಿರುವನಂತಪುರದ ನನ್ನ ಮತದಾರರ ವಿಶ್ವಾಸ ನನಗಿದೆ. ಸಂಸತ್ತಿನಲ್ಲಿ ಅವರ ಹಿತಾಸಕ್ತಿಗಳನ್ನು ನಾನು ನೋಡಿಕೊಳ್ಳಬೇಕು, ಅದು ನನ್ನ ಕೆಲಸ" ಎಂದರು.
ಶಶಿ ತರೂರ್ ಅವರು ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ತರೂರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಉಹಾಪೋಹಗಳ ನಡುವೆ ಇಂದು ಖರ್ಗೆ, ರಾಹುಲ್ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.