ಹೈದರಾಬಾದ್: ತಿರುಪತಿಯ ಪ್ರಸಿದ್ಧ ಲಡ್ಡು ಪ್ರಸಾದವನ್ನು ಗೋಮಾಂಸದ ಕೊಬ್ಬಿನಿಂದ ತಯಾರಿಸಿಲ್ಲ ಎಂದು ಪ್ರಕರಣ ತನಿಖೆ ನಡೆಸಿದ ಕೇಂದ್ರ ತನಿಖಾ ಸಂಸ್ಥೆ ಶುಕ್ರವಾರ ಅಧಿಕೃತವಾಗಿ ದೃಢಪಡಿಸಿದೆ.
ತಿರುಮಲ ವೆಂಕಟೇಶ್ವರ ದೇವಸ್ಥಾನದ ಪವಿತ್ರ ಪ್ರಸಾದದ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದ ನಂತರ ಪ್ರಕರಣದ ತನಿಖೆ ನಡೆಸಿದೆ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ(ಎಸ್‌ಐಟಿ), ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದೆ.
ಎಸ್ಐಟಿ 12 ರಾಜ್ಯಗಳಲ್ಲಿ 15 ತಿಂಗಳ ಕಾಲ ನಡೆಸಿದ ತನಿಖೆಯ ನಂತರ ಶುಕ್ರವಾರ ನೆಲ್ಲೂರು ಎಸಿಬಿ ನ್ಯಾಯಾಲಯದಲ್ಲಿ ತನ್ನ ಅಂತಿಮ ಚಾರ್ಜ್ ಶೀಟ್ ಸಲ್ಲಿಸಿದೆ. 2019 ಮತ್ತು 2024 ರ ನಡುವೆ ದೇವಾಲಯಕ್ಕೆ ಸರಬರಾಜು ಮಾಡಲಾದ ತುಪ್ಪದಲ್ಲಿ ಯಾವುದೇ ಪ್ರಾಣಿಗಳ ಕೊಬ್ಬು ಇಲ್ಲ ಎಂದು ಸಿಬಿಐ ತಿಳಿಸಿದೆ.
ಸೆಪ್ಟೆಂಬರ್ 2024 ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಭಕ್ತರಿಗೆ ನೀಡುವ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಮಾಡಿದ ಕಳಪೆ ಗುಣಮಟ್ಟದ ತುಪ್ಪವನ್ನು ಬಳಸಲಾಗಿದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಆಂಧ್ರ ಸಿಎಂ ಮತ್ತು ಡಿಸಿಎಂ ಹೇಳಿಕೆಗಳು ದೇಶಾದ್ಯಂತ ವ್ಯಾಪಕ ಆಘಾತ ಮತ್ತು ಚರ್ಚೆಗೆ ಕಾರಣವಾಗಿದ್ದವು.
ತಿರುಮಲ ತಿರುಪತಿ ದೇವಸ್ಥಾನಕ್ಕೆ ಪೂರೈಕೆ ಮಾಡಲಾದ ತುಪ್ಪವು ನಿಜವಾದ ಡೈರಿ ತುಪ್ಪವಲ್ಲ, ಬದಲಾಗಿ ಪಾಮ್ ಎಣ್ಣೆ, ಪಾಮ್ ಕರ್ನಲ್ ಎಣ್ಣೆ ಮತ್ತು ಇತರ ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಿದ ಕೃತಕ ತುಪ್ಪ ಎಂದು ಸಿಬಿಐನ ವಿವರವಾದ ಚಾರ್ಜ್‌ಶೀಟ್ ಬಹಿರಂಗಪಡಿಸಿದೆ.
ನೆಲ್ಲೂರು ಎಸಿಬಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ಚಾರ್ಜ್‌ಶೀಟ್‌ನಲ್ಲಿ ಒಟ್ಟು 36 ಮಂದಿ ಪ್ರಮುಖ ಆರೋಪಿಗಳನ್ನು ಹೆಸರು ನಮೂದಿಸಲಾಗಿದೆ. ಇವರಲ್ಲಿ ಡೈರಿ ಮಾಲೀಕರು, ಮಾಜಿ ಟಿಟಿಡಿ ಅಧಿಕಾರಿಗಳು ಸೇರಿದ್ದಾರೆ.
2019 ರಿಂದ 2024 ರವರೆಗೆ ಟಿಟಿಡಿಗೆ ಅಂದಾಜು 250 ಕೋಟಿ ರೂ. ಮೌಲ್ಯದಷ್ಟು ಸರಬರಾಜು ಮಾಡಲಾದ ಸುಮಾರು 68 ಲಕ್ಷ ಕೆಜಿ ನಕಲಿ ತುಪ್ಪ ಶುದ್ಧ ಹಾಲಿನ ತುಪ್ಪದ ಬದಲಿಗೆ ಪಾಮ್ ಆಯಿಲ್, ಕರ್ನಲ್ ಆಯಿಲ್, ರಾಸಾಯನಿಕ ಮಿಶ್ರಣಗಳು, ಪ್ರಾಣಿ ಕೊಬ್ಬು ಮತ್ತು ಇತರ ಕಡಿಮೆ ದರದ ಮಿಶ್ರಣಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಲಾಗಿತ್ತು. ಇದು ಶುದ್ಧ ತುಪ್ಪದಂತೆ ಕಾಣುವಂತೆ ಮಾಡಲಾಗಿತ್ತು ಎಂದು ಸಿಬಿಐ ಉಲ್ಲೇಖಿಸಿದೆ.
ಚಾರ್ಜ್‌ಶೀಟ್‌ನಲ್ಲಿ 36 ಆರೋಪಿಗಳ ಹೆಸರಿದೆ. ಆರಂಭದಲ್ಲಿ 24 ಮಂದಿ ಹೆಸರನ್ನು ಉಲ್ಲೇಖಿಸಲಾಗಿತ್ತು, ಬಳಿಕ ಮತ್ತೆ 12 ಮಂದಿ ಹೆಸರನ್ನು ಸೇರಿಸಲಾಗಿದೆ. ಸದ್ಯ ಎಲ್ಲರನ್ನೂ ಬಂಧಿಸಲಾಗಿದ್ದು, ಇನ್ನೂ ಮೂವರು ಜಾಮೀನು ಇಲ್ಲದೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಟಿಟಿಡಿ ಅಧ್ಯಕ್ಷರ ಮಾಜಿ ಸಹಾಯಕ ಚಿನ್ನ ಅಪ್ಪಣ್ಣ ಮತ್ತು ಅಜಯ್ ಕುಮಾರ್ ಸುಗಂಧ್ ಇನ್ನೂ ಜೈಲಿನಲ್ಲಿದ್ದಾರೆ. ಬಂಧಿತ ಹಲವಾರು ಡೈರಿ ಮಾಲೀಕರು ಷರತ್ತುಬದ್ಧ ಜಾಮೀನು ಪಡೆದಿದ್ದು, ವಿಚಾರಣೆಗಳಿಗೆ ಹಾಜರಾಗಲೇಬೇಕಾಗಿದೆ.