ಮುಂಬಯಿ: ಬಾರಾಮತಿಯಲ್ಲಿ 'ಅಜಿತ್ ದಾದಾ ಅಮರ್ ರಹೇ' ಎಂದು ಘೋಷಣೆ ಕೂಗುತ್ತಿದ್ದ ಬೆಂಬಲಿಗರ ಸಮುದ್ರದ ನಡುವೆ, ಒಡೆದು ಛಿದ್ರವಾಗಿದ್ದ ಕುಟುಂಬವೊಂದು ಒಟ್ಟಿಗೆ ಸೇರಿರುವ ದೃಶ್ಯವನ್ನು ಮಹಾರಾಷ್ಟ್ರ ಜನತೆ ಕಣ್ತುಂಬಿಕೊಳ್ಳುತ್ತಿದ್ದರು.
ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ವೇದಿಕೆಯಲ್ಲಿ ತನ್ನ ಅತ್ತಿಗೆಗೆ ಬೆಂಬಲವಾಗಿ ಸುಪ್ರಿಯಾ ಸುಳೆ ನಿಂತಿದ್ದರು. ಸುನೇತ್ರಾ ಪವಾರ್ ತನ್ನ ಭಾವನೆಗಳನ್ನು ನಿಯಂತ್ರಿಸಲು ಹೆಣಗಾಡುತ್ತಿರುವಾಗ ಸುಪ್ರಿಯಾ ಸುಳೆ ಅವರ ಆಧಾರಸ್ತಂಭವಾಗಿ ಜೊತೆಗಿದ್ದರು. ರಾಜಕೀಯ ವೈಷಮ್ಯ ಏನೇ ಇದ್ದರು ಕುಟುಂಬವೇ ಮೊದಲು ಎಂಬ ಪ್ರಬಲ ಸಂದೇಶವ ರವಾನಿಸಿದರು.
ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ಅಜಿತ್ ಪವಾರ್ ಕುಟುಂಬಕ್ಕೆ ಸುಪ್ರಿಯಾ ಸುಳೆ ಬೆಂಬಲವಾಗಿ ನಿಂತರು. ದಾದಾ ಅವರ ಅಂತ್ಯಕ್ರಿಯೆಯ ಎಲ್ಲಾ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದರು. ಸುನೇತ್ರಾ ಪವಾರ್ ಮತ್ತು ಅವರ ಪುತ್ರರಾದ ಜಯ್ ಮತ್ತು ಪಾರ್ಥ್ ಪವಾರ್ ಅವರೊಂದಿಗೆ ಅಜಿತ್ ಪವಾರ್ ಅವರ ದೇಹವನ್ನು ಗುರುತಿಸಲು ಆಸ್ಪತ್ರೆಗೆ ಹೋದಾಗ ಸುನೇತ್ರಾ ಸಂಪೂರ್ಣವಾಗಿ ಕುಸಿದಿದ್ದರು. ದುಃಖದಿಂದ ಜರ್ಜರಿತರಾಗಿದ್ದವರಿಗೆ ಸುಪ್ರಿಯಾ ತಮ್ಮ ಹೆಗಲು ಕೊಟ್ಟು ನಿಂತರು.
ಈ ಚಿತ್ರವು ಪವಾರ್ ಕುಟುಂಬದಲ್ಲಿನ ರಾಜಕೀಯ ಬಿರುಕುಗಳನ್ನು ಅಳಿಸಿ ಹಾಕಿತು. ಒಬ್ಬ ಮಹಿಳೆ ತನ್ನ ಸೋದರಸಂಬಂಧಿಯ ಅಕಾಲಿಕ ಮರಣ ದುಖವನ್ನು ಹೇಗೆ ನಿರ್ವಹಿಸಬಹುದು ಎಂದು ಸುಪ್ರಿಯಾ ತೋರಿಸಿಕೊಟ್ಟರು. ಪ್ರತಿ ಹಂತದಲ್ಲಿ ಅತ್ತಿಗೆ ಸುನೇತ್ರಾ ಬೆನ್ನಿಗೆ ನಿಂತರು. ಶಿಸ್ತು ಬದ್ದ ಅಂತ್ಯಕ್ರಿಯೆಗೆ ಅವರು ಅನುವು ಮಾಡಿಕೊಟ್ಟರು'ದಾದಾ' (ಅಜಿತ್ ಪವಾರ್) ತಮ್ಮ ವೃತ್ತಿಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದ ಶಿಸ್ತನ್ನು ಕಾಯ್ದುಕೊಳ್ಳುವಂತೆ ಅವರು ಬೃಹತ್ ಸಭೆಗೆ ತಿಳಿಸಿದರು.
ತನ್ನ ಸಹೋದರನ ಪುತ್ರನನ್ನು ಕಳೆದುಕೊಂಡ ಶರದ್ ಪವಾರ್ ಭಾವುಕರಾಗಿದ್ದರು. ಅಜಿತ್ ಪವಾರ್ ಅವರ ಸಾವಿನ ಬಗ್ಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಪಿತೂರಿಯ ಹೇಳಿಕೆಗಳನ್ನು ತಿರಸ್ಕರಿಸಿದ ಅವರು, ಈ ವಿಷಯದಲ್ಲಿ ಯಾವುದೇ ರಾಜಕೀಯವನ್ನು ತರಬಾರದು ಎಂದು ಒತ್ತಾಯಿಸಿದರು. ಅವರ ಸಂದೇಶವೂ ಸಹ ಸ್ಪಷ್ಟವಾಗಿತ್ತು, ಯಾವುದೇ ರಾಜಕೀಯ ಬಿರುಕು ಕುಟುಂಬಕ್ಕಿಂತ ಶ್ರೇಷ್ಠವಲ್ಲ ಎಂಬುದಾಗಿತ್ತು.
ಒಂದು ವರ್ಷದ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅತ್ತಿಗೆ ನಾದಿನಿ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದರು. ಆದರೆ ಅದೆಲ್ಲವನ್ನು ಮರೆತು ಅಂತಿಮ ವಿಧಿವಿಧಾನಗಳು ನಡೆಯುವಾಗ ಸುನೇತ್ರಾ ಪವಾರ್ ಗೆ ಪ್ರತಿ ಹೆಜ್ಜೆಯಲ್ಲೂ ಸುಪ್ರಿಯಾ ಸುಳೆ ಮಾರ್ಗದರ್ಶನ ನೀಡುತ್ತಾ ಕೈ ಹಿಡಿದು ಹೆಜ್ಜೆ ಹಾಕಿದರು.