ಅಹ್ಮದಾಬಾದ್: ಚಿರತೆಗೆ ಬಲಿಯಾಗಬೇಕಿದ್ದ ಪುತ್ರನ ಉಳಿಸಲು 60 ವರ್ಷದ ತಂದೆ ಕಾಡುಮೃಗದೊಂದಿಗೆ ಹೋರಾಟ ಮಾಡಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಚಿರತೆಯೊಂದಿಗೆ ಹೋರಾಡಿದ ತಂದೆಯೊಬ್ಬನ ಅದಮ್ಯ ಧೈರ್ಯಶಾಲಿ ಕಥೆ ಈ ಪ್ರದೇಶದಾದ್ಯಂತ ಸುದ್ದಿಯಾಗಿದೆ. ತನ್ನ 27 ವರ್ಷದ ಮಗ ಶಾರ್ದೂಲ್‌ನ ಜೀವ ಉಳಿಸಲು 60 ವರ್ಷದ ರೈತ ಬಾಬುಭಾಯಿ ನರನ್‌ಭಾಯಿ ವಾಜಾ, ಜೀವದ ಹಂಗು ತೊರೆದು ಚಿರತೆಯೊಂದಿಗೆ ಹೋರಾಡಿ ಜಯಿಸಿದ್ದಾನೆ.
ಜನವರಿ 28ರಂದು ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಬುಧವಾರ ರಾತ್ರಿ ಉನಾ ತಹಸಿಲ್‌ನ ಗ್ಯಾಂಗ್ರಾ ಗ್ರಾಮದ ಬಳಿಯ ವಾಡಿ ಪ್ರದೇಶದಲ್ಲಿರುವ ಅವರ ತೋಟದ ಮನೆಯ ಹೊರಗೆ ಚಿರತೆ ಪ್ರವೇಶಿಸಿತ್ತು. ರಾತ್ರಿ 10 ಗಂಟೆ ಸುಮಾರಿಗೆ, ಬಾಬುಭಾಯಿ ವರಾಂಡಾದಲ್ಲಿ ಕುಳಿತಿದ್ದಾಗ, ಕತ್ತಲೆಯ ಲಾಭ ಪಡೆದು, ಚಿರತೆಯೊಂದು ಇದ್ದಕ್ಕಿದ್ದಂತೆ ಅವರ ಮೇಲೆ ದಾಳಿ ಮಾಡಿತು. ಬಾಬುಭಾಯಿ ಅವರ ಕುತ್ತಿಗೆ ಮತ್ತು ತೋಳಿನ ಮೇಲೆ ಚಿರತೆ ದಾಳಿ ಮಾಡಿತು.
ಈ ವೇಳೆ ತಂದೆಯ ಕಿರುಚಾಟ ಕೇಳಿ, ಅವರ ಮಗ ಶಾರ್ದೂಲ್ ಕೋಣೆಯಿಂದ ಹೊರಗೆ ಓಡಿ ಬಂದ. ಈ ವೇಳೆ ಚಿರತೆಯನ್ನು ಬಿಡಿಸಲು ಮುಂದಾದ. ಆದರೆ ಚಿರತೆ ತಂದೆಯನ್ನು ಬಿಟ್ಟು ಮಗನ ಮೇಲೆ ಹಾರಿ ತನ್ನ ದವಡೆಯಲ್ಲಿ ಅವನ ಹಿಡಿಯಿತು. ತನ್ನ ಮಗ ಅಪಾಯದಲ್ಲಿರುವುದನ್ನು ನೋಡಿದ ಬಾಬುಭಾಯಿ ಮನೆ ಆವರಣದಲ್ಲಿದ್ದ ಈಟಿ ಮತ್ತು ಕುಡಗೋಲು ಎತ್ತಿಕೊಂಡು ಚಿರತೆಯ ಮೇಲೆ ಉಗ್ರ ದಾಳಿ ನಡೆಸಿದರು.
ಬಹಳ ಹೊತ್ತು ನಡೆದ ಈ ಭೀಕರ ಹೋರಾಟದಲ್ಲಿ ಚಿರತೆ ಪದೇ ಪದೇ ಪ್ರತಿದಾಳಿ ನಡೆಸಿತು. ಆದರೆ ತಂದೆ ಬಾಬುಭಾಯಿ ಯಾವುದೇ ಕಾರಣಕ್ಕೂ ಬಿಟ್ಟುಕೊಡಲಿಲ್ಲ. ಕೊನೆಗೂ ಕುಡಗೋಲು ಮತ್ತು ಈಟಿಯಿಂದ ಚಿರತೆಯನ್ನು ಕೊಂದು ಹಾಕಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಂದೆ ಬಾಬುಭಾಯಿ, 'ನಾನು ವರಾಂಡಾದಲ್ಲಿದ್ದಾಗ ಚಿರತೆ ಬಂದು ನನ್ನ ಗಂಟಲನ್ನು ಹಿಡಿದಿತ್ತು. ಈ ವೇಳೆ ನಾನು ಜೋರಾಗಿ ನನ್ನ ಮಗನನ್ನು ಕರೆದೆ. ಅವನು ಬಂದಾಗ ಚಿರತೆ ಅವನ ಮೇಲೆ ದಾಳಿ ಮಾಡಿತು. ನಾನು ಅವನನ್ನು ಉಳಿಸಲು ಪ್ರಯತ್ನಿಸಿದೆ. ಕೊನೆಗೆ, ನಾನು ಕುಡಗೋಲು ಮತ್ತು ಕೋಲಿನಿಂದ ಹೊಡೆದೆ. ತೀವ್ರವಾಗಿ ಗಾಯಗೊಂಡ ಚಿರತೆ ಸತ್ತಿತ್ತು. ನಂತರ, ನಾನು ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆ ಎಂದು ಹೇಳಿದರು.
ಕಾದಾಟದಲ್ಲಿ ತಂದೆ ಮತ್ತು ಮಗ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಇಬ್ಬರಿಗೂ ಮೊದಲು ಉನಾದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರೂ ಪ್ರಸ್ತುತ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಬಾಬುಭಾಯಿ 50 ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿದೆ. ಆದರೆ ಪುತ್ರ ಶಾರ್ದೂಲ್ ಕೂಡ ತೀವ್ರವಾಗಿ ಗಾಯಗೊಂಡರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡವು ತಕ್ಷಣ ಸ್ಥಳಕ್ಕೆ ಆಗಮಿಸಿತು. ಅವರು ದಾಳಿಯಲ್ಲಿ ಬಳಸಲಾದ ಆಯುಧಗಳನ್ನು ವಶಪಡಿಸಿಕೊಂಡರು ಮತ್ತು ಚಿರತೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಚಿರತೆ ಸಂರಕ್ಷಿತ ವನ್ಯಜೀವಿಯಾಗಿರುವುದರಿಂದ, ಅರಣ್ಯ ಇಲಾಖೆಯು ಬಾಬುಭಾಯ್ ಮತ್ತು ಶಾರ್ದೂಲ್ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.