ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆದಂಪುರ ವಿಮಾನ ನಿಲ್ದಾಣವನ್ನು ಶ್ರೀ ಗುರು ರವಿದಾಸ್ ಜಿ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಿದ್ದಾರೆ. ಬಳಿಕ ಲುಧಿಯಾನದ ಹಲ್ವಾರ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಮತ್ತು ಜಲಂಧರ್ ಜಿಲ್ಲೆಯ ಡೇರಾ ಸಚ್ಖಂಡ್ ಬಲ್ಲನ್‌ಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ನಾಳೆ ಮಧ್ಯಾಹ್ನ 3.45 ರ ಸುಮಾರಿಗೆ ಪ್ರಧಾನಿ ಮೋದಿ ಅವರು ಆದಂಪುರ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಅವರು ವಿಮಾನ ನಿಲ್ದಾಣದ ಹೊಸ ಹೆಸರನ್ನು ಅನಾವರಣಗೊಳಿಸಲಿದ್ದಾರೆ.
"ಸಂತ ಗುರು ರವಿದಾಸ್ ಜಿ ಅವರ 649ನೇ ಜನ್ಮ ದಿನಾಚರಣೆಯ ಶುಭ ಸಂದರ್ಭದಲ್ಲಿ, ಆದಂಪುರ ವಿಮಾನ ನಿಲ್ದಾಣದ ಮರುನಾಮಕರಣವು ಸಂತ ಮತ್ತು ಸಾಮಾಜಿಕ ಸುಧಾರಕ ಗುರು ರವಿದಾಸ್ ಜಿ ಅವರನ್ನು ಗೌರವಿಸುತ್ತದೆ. ಅವರ ಸಮಾನತೆ, ಕರುಣೆ ಮತ್ತು ಮಾನವ ಘನತೆಯ ಬೋಧನೆಗಳು ಭಾರತದ ಸಾಮಾಜಿಕ ನೀತಿಯನ್ನು ನಿರಂತರವಾಗಿ ಪ್ರೇರೇಪಿಸುತ್ತಿವೆ" ಎಂದು ಪ್ರಕಟಣಯಲ್ಲಿ ತಿಳಿಸಲಾಗಿದೆ.
"ಪಂಜಾಬ್‌ನಲ್ಲಿ ವೈಮಾನಿಕ ಮೂಲಸೌಕರ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಜೊತೆಗೆ, ಹಲ್ವಾರ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು ಲುಧಿಯಾನ ಮತ್ತು ಅದರ ಸುತ್ತಮುತ್ತಲಿನ ಕೈಗಾರಿಕಾ ಮತ್ತು ಕೃಷಿ ಪ್ರದೇಶಕ್ಕೆ ಸೇವೆ ಸಲ್ಲಿಸುತ್ತದೆ’’ ಎಂದು ಪ್ರಕಟಣೆ ತಿಳಿಸಿದೆ.