ನಿವೃತ್ತ ಲೆ. ಜ. ಕೆ.ಎಂ. ಸೇಠ್ ಗೆ ಸೆಲ್ಯೂಟ್ ಹೊಡೆದು ಕಾಲಿಗೆ ನಮಸ್ಕರಿಸಿದ ಜ.ಧೀರಜ್ ಸೇಠ್ 
ದೇಶ

ತಂದೆಯಂತೆ ಮಗ: ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿ ತಂದೆ ನಿವೃತ್ತ ಲೆ. ಜ. ಕೆ.ಎಂ. ಸೇಠ್ ಗೆ ಸೆಲ್ಯೂಟ್ ಹೊಡೆದು ಕಾಲಿಗೆ ನಮಸ್ಕರಿಸಿದ ಜ.ಧೀರಜ್ ಸೇಠ್-Video

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಜನರಲ್ ಸೇಠ್, 1997ರಲ್ಲಿ ಜನರಲ್ ಶಂಕರ್ ರಾಯ್ ಚೌಧರಿ ನಿವೃತ್ತಿಯಾದ ಬಳಿಕ ಸೇನಾ ಮುಖ್ಯಸ್ಥರಾದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿದ್ದಾರೆ.

ಸೇನಾ ಮುಖ್ಯಸ್ಥರಾಗಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಜನರಲ್ ಧೀರಜ್ ಸೇಠ್ ಅವರು ತಮ್ಮ ತಂದೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಎಂ. ಸೇಠ್ ಅವರಿಗೆ ಸೆಲ್ಯೂಟ್ ಸಲ್ಲಿಸಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದೇ ವೇಳೆ ಅವರ ಕಿರಿಯ ಸಹೋದರ ರಿಯರ್ ಅಡ್ಮಿರಲ್ ರವ್ನಿಶ್ ಸೇಠ್ ಕೂಡ ಹೊಸ ಸೇನಾ ಮುಖ್ಯಸ್ಥರಿಗೆ ಸೆಲ್ಯೂಟ್ ಸಲ್ಲಿಸಿದರು.

ಭಾರತೀಯ ಸೇನೆಯ 31ನೇ ಸೇನಾ ಮುಖ್ಯಸ್ಥರಾಗಿ ಆರ್ಮರ್ಡ್ ಕಾರ್ಪ್ಸ್‌ನ ಹಿರಿಯ ಅಧಿಕಾರಿ ಜನರಲ್ ಧೀರಜ್ ಸೇಠ್ ಅವರು ನಿನ್ನೆ ಮಂಗಳವಾರ ಅಧಿಕಾರ ಸ್ವೀಕರಿಸಿದರು. 62 ವರ್ಷ ವಯೋಮಿತಿಯನ್ನು ತಲುಪಿ ನಿವೃತ್ತರಾದ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಅವರು ಅಧಿಕಾರ ವಹಿಸಿಕೊಂಡರು.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಜನರಲ್ ಸೇಠ್, 1997ರಲ್ಲಿ ಜನರಲ್ ಶಂಕರ್ ರಾಯ್ ಚೌಧರಿ ನಿವೃತ್ತಿಯಾದ ಬಳಿಕ ಸೇನಾ ಮುಖ್ಯಸ್ಥರಾದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿದ್ದಾರೆ.

ಸೇನಾ ಹಿನ್ನೆಲೆಯ ಕುಟುಂಬ

ಜನರಲ್ ಸೇಠ್ ಅವರು ಸೇನಾ ಪರಂಪರೆಯ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆ ಲೆಫ್ಟಿನೆಂಟ್ ಜನರಲ್ ಕೆ.ಎಂ. ಸೇಠ್ ಅವರು 1997ರಲ್ಲಿ ಭಾರತೀಯ ಸೇನೆಯ ಅಡ್ಜುಟೆಂಟ್ ಜನರಲ್ ಹುದ್ದೆಯಿಂದ ನಿವೃತ್ತರಾಗಿದ್ದರು. ಆಗ ಹೊಸ ಸೇನಾ ಮುಖ್ಯಸ್ಥ ಧೀರಜ್ ಸೇಠ್ ಅವರು ಕ್ಯಾಪ್ಟನ್ ಆಗಿದ್ದರು. ಅವರ ಸಹೋದರ ರಿಯರ್ ಅಡ್ಮಿರಲ್ ರವಿನಿಶ್ ಸೇಠ್ ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ ಫ್ಲಾಗ್ ಅಧಿಕಾರಿ ಆಗಿದ್ದಾರೆ.

ಸೇನಾ ವಲಯದಲ್ಲಿ ಸರಳ, ಸ್ಪಷ್ಟ ಮತ್ತು ಕಾರ್ಯಾಚರಣೆ-ಕೇಂದ್ರಿತ ಕಮಾಂಡರ್ ಎಂಬ ಹೆಸರನ್ನು ಗಳಿಸಿರುವ ಜನರಲ್ ಸೇಠ್, ತಮ್ಮ ತಂದೆ ನೇತೃತ್ವ ವಹಿಸಿದ್ದ 21 ಸ್ಟ್ರೈಕ್ ಕಾರ್ಪ್ಸ್ಗೂ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜಾಗತಿಕ ಹಾಗೂ ಪ್ರಾದೇಶಿಕ ಯುದ್ಧತಂತ್ರಗಳ ಬೆಳವಣಿಗೆಗಳನ್ನು ವಿಶ್ಲೇಷಿಸುವುದು ಮತ್ತು ಸೇನೆಯ ಆಧುನೀಕರಣಕ್ಕೆ ಒತ್ತು ನೀಡುವ ಅಧಿಕಾರಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.

ಸವಾಲಿನ ಸಂದರ್ಭದಲ್ಲಿ ಅಧಿಕಾರ ಸ್ವೀಕಾರ

ಜನರಲ್ ಸೇಠ್ ಅವರು ಭಾರತೀಯ ಸೇನೆಗೆ ಅತ್ಯಂತ ಮಹತ್ವದ ಹಂತದಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ, ವಿಶೇಷವಾಗಿ ಆಪರೇಷನ್ ಸಿಂದೂರ್ ಬಳಿಕ ಸೇನೆಯು ಡ್ರೋನ್‌ಗಳು, ಲಾಯಿಟರಿಂಗ್ ಮ್ಯೂನಿಷನ್‌ಗಳ ಖರೀದಿಯನ್ನು ವೇಗಗೊಳಿಸಿದ್ದು, ಕೆಲವು ಘಟಕಗಳ ಪುನರ್‌ರಚನೆಯನ್ನೂ ಕೈಗೊಂಡಿದೆ. ಆದರೆ ಸೇನೆಯ ಪ್ರಮುಖ ಆಧುನೀಕರಣ ಯೋಜನೆಗಳ ಹಲವು ಇನ್ನೂ ಬಾಕಿ ಉಳಿದಿವೆ.

ಶಸ್ತ್ರಸಜ್ಜಿತ ವಾಹನಗಳು, ಫಿರಂಗಿ ವ್ಯವಸ್ಥೆಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಟ್ಯಾಕ್ಟಿಕಲ್ ಮೊಬಿಲಿಟಿ ವಾಹನಗಳು ಸೇರಿದಂತೆ ಹಲವು ಪ್ರಮುಖ ಸಾಧನಗಳ ನವೀಕರಣ ಇನ್ನೂ ಪೂರ್ಣಗೊಂಡಿಲ್ಲ. ತುರ್ತು ಖರೀದಿಗಳು ಕೆಲ ಕಾರ್ಯಾಚರಣಾ ಕೊರತೆಗಳನ್ನು ತಾತ್ಕಾಲಿಕವಾಗಿ ನೀಗಿಸಿದರೂ, ದೀರ್ಘಾವಧಿಯ ಸಾಮರ್ಥ್ಯ ವೃದ್ಧಿಗೆ ಅವು ಪರ್ಯಾಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಹೊಸ ಸ್ನೈಪರ್ ರೈಫಲ್‌ಗಳ ಪರೀಕ್ಷೆಗಳು ಇನ್ನೂ ಅಂತಿಮ ಹಂತ ತಲುಪಿಲ್ಲ. ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು ಹಾಗೂ ಹೊಸ ಫಿರಂಗಿ ವ್ಯವಸ್ಥೆಗಳ ಖರೀದಿ ನಿರ್ಧಾರಗಳೂ ಇನ್ನೂ ಬಾಕಿ ಇವೆ.

ಆಧುನೀಕರಣಕ್ಕೆ ಒತ್ತು

ಆಪರೇಷನ್ ಸಿಂದೂರ್ ವೇಳೆ ನಿಖರ ದಾಳಿಗಳಿಗೆ ಬೆಂಬಲ ನೀಡಲು ಭಾರತೀಯ ಸೇನೆಯು ಈಶಾನ್ಯ ಭಾಗದಿಂದ ವಿಶೇಷ ಫಿರಂಗಿ ಘಟಕಗಳನ್ನು ಕಾಶ್ಮೀರ ವಲಯಕ್ಕೆ ಸ್ಥಳಾಂತರಿಸಬೇಕಾಯಿತು. ಅಲ್ಲದೆ ಬಳಸಿದ ಫಿರಂಗಿ ಮದ್ದುಗುಂಡುಗಳನ್ನು ತುಂಬಿಸಿಕೊಳ್ಳಲು ಅಮೆರಿಕದಿಂದ ತುರ್ತು ಖರೀದಿಯನ್ನೂ ಮಾಡಿತ್ತು.

ಜನರಲ್ ಸೇಠ್ ಅವರು ದೀರ್ಘಾವಧಿಯ ಯೋಜನೆ ಹಾಗೂ ಸಾಮರ್ಥ್ಯ ಅಭಿವೃದ್ಧಿಯಲ್ಲಿ ವ್ಯಾಪಕ ಅನುಭವ ಹೊಂದಿದ್ದು, ಸೇನೆಯ ಹಲವು ಪ್ರಮುಖ ಆಧುನೀಕರಣ ಯೋಜನೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆ ಇದೆ.

ಅವರು ದಕ್ಷಿಣ ಪಶ್ಚಿಮ ಕಮಾಂಡ್ ಮತ್ತು ದಕ್ಷಿಣ ಕಮಾಂಡ್ಗಳಿಗೆ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಎರಡು ಪ್ರಮುಖ ಕಾರ್ಯಾಚರಣಾ ವಲಯಗಳ ಅನುಭವ ಹೊಂದಿರುವ ಕೆಲವೇ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.

ಸೇನಾ ಮುಖ್ಯಾಲಯದಲ್ಲಿ ಅವರು ಕಲೊನಲ್ (ಸಾಮರ್ಥ್ಯ ಅಭಿವೃದ್ಧಿ - ಮೆಕನೈಸ್ಡ್ ಪಡೆಗಳು), ಬ್ರಿಗೇಡಿಯರ್ (ಪರ್ಸ್ಪೆಕ್ಟಿವ್ ಪ್ಲಾನ್ಸ್ ಮತ್ತು ಅಕ್ವಿಸಿಷನ್) ಹಾಗೂ ಹೆಚ್ಚುವರಿ ಮಹಾನಿರ್ದೇಶಕ (ಸಾಮರ್ಥ್ಯ ಅಭಿವೃದ್ಧಿ) ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ಭಾರತೀಯ ಸೇನೆಯ ದೀರ್ಘಾವಧಿಯ ಆಧುನೀಕರಣ ಯೋಜನೆ ಹಾಗೂ ಸಾಮರ್ಥ್ಯ ಅಭಿವೃದ್ಧಿ ರೂಪುರೇಷೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತೀಯ ಸೇನೆಯ ಹೇಳಿಕೆಯ ಪ್ರಕಾರ, ಜನರಲ್ ಸೇಠ್ ಅವರ ಕೊಡುಗೆಗಳು ಸೇನೆಯ ಆಧುನೀಕರಣ, ಸಾಮರ್ಥ್ಯ ಅಭಿವೃದ್ಧಿ ಹಾಗೂ ಭವಿಷ್ಯದ ಪಡೆಗಳ ಪುನರ್‌ರಚನೆಗೆ ಮಹತ್ವದ ದಿಕ್ಕು ನೀಡಿವೆ. ಕಾರ್ಯಾಚರಣೆಯ ಅಗತ್ಯಗಳನ್ನು ಹೊಸ ತಂತ್ರಜ್ಞಾನಗಳೊಂದಿಗೆ ಹೊಂದಾಣಿಕೆ ಮಾಡುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಮೂಲಗಳ ಪ್ರಕಾರ, ಸೇನೆಯ ದೀರ್ಘಾವಧಿಯ ಸಾಮರ್ಥ್ಯ ಅಭಿವೃದ್ಧಿ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಿ, ಡ್ರೋನ್‌ಗಳು, ಕೃತಕ ಬುದ್ಧಿಮತ್ತೆ (AI), ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು ಹಾಗೂ ಕೌಂಟರ್-ಯುಎಎಸ್ ತಂತ್ರಜ್ಞಾನಗಳನ್ನು ಸೇನೆಯ ಅವಿಭಾಜ್ಯ ಅಂಗವನ್ನಾಗಿ ರೂಪಿಸುವುದು ಜನರಲ್ ಧೀರಜ್ ಸೇಠ್ ಅವರ ಮುಂದಿರುವ ಪ್ರಮುಖ ಸವಾಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಮಾನಯಾನ ಸಂಸ್ಥೆಗಳಿಗೆ ಬಿಗ್ ರಿಲೀಫ್; ATF ದರ ಲೀಟರ್‌ಗೆ 5 ರೂ. ಇಳಿಕೆ, ವಿಮಾನ ಪ್ರಯಾಣ ದರವೂ ಕಡಿಮೆಯಾಗುತ್ತಾ..?

ಜನ್ಮಸಿದ್ಧ ಪೌರತ್ವ ರದ್ದತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಟ್ರಂಪ್‌ಗೆ ಭಾರೀ ಶಾಕ್, 'ದೇಶಕ್ಕೆ ಮಾರಕ' ಎಂದ ಅಮೆರಿಕ ಅಧ್ಯಕ್ಷ..!

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದ ಹೊಸ ದರ ಜಾರಿ, ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು..?

ಜನ್ಮಸಿದ್ಧ ಪೌರತ್ವ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಚೀನಾಗೆ ಅಭಿನಂದನೆ ತಿಳಿಸಿದ ಟ್ರಂಪ್, ಕಾರಣ..?

ಮಂಗಳೂರಿನಲ್ಲಿ ಭಾರೀ ಮಳೆಗೆ ಭೂಕುಸಿತ: ಮನೆಯ ಮೇಲೆ ಮಣ್ಣು ಕುಸಿದು ಮೂವರ ದುರ್ಮರಣ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ..!