ಲಖನೌ: ವೆನೆಜುವೆಲಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಭಾರತೀಯ ನಾವಿಕ ರಾಕೇಶ್ ಚೌಹಾಣ್ ಅವರ ಮೃತದೇಹ ಭಾರತಕ್ಕೆ ಬಂದಿದ್ದು, ಮೆದುಳು, ಹೃದಯ ಸೇರಿದಂತೆ ದೇಹದ ಎಲ್ಲಾ ಅಂಗಾಗಳು ನಾಪತ್ತೆಯಾಗಿವೆ ಎಂದು ಅವರ ಪತ್ನಿ ರಂಜನಾ ಅವರು ಹೇಳಿದ್ದಾರೆ.
ANI ಜೊತೆ ಮಾತನಾಡಿದ ರಂಜನಾ, ನನ್ನ ಗಂಡನನ್ನು ಅಲ್ಲಿ ಕೊಲೆ ಮಾಡಲಾಗಿದೆ ಮತ್ತು ಅವರ ಅಂಗಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
"ನನ್ನ ಪತಿ ಹಡಗಿನಲ್ಲಿ ಕೆಲಸಕ್ಕೆ ಹೋಗಿದ್ದರು; ಅವರನ್ನು ಅಲ್ಲಿ ಕೊಲೆ ಮಾಡಲಾಗಿದೆ. ಅವರ ಅಂಗಗಳನ್ನು ತೆಗೆದುಹಾಕಲಾಗಿದೆ. ಅವರ ಸಾವಿನ ಬಗ್ಗೆ ನಾವು ಪದೇ ಪದೇ ವಿನಂತಿಸಿದರೂ ಇಂದಿಗೂ ಅವರು ನಮಗೆ ಸರಿಯಾದ ವರದಿ ನೀಡಿಲ್ಲ. ನನ್ನ ಗಂಡನ ವೈಯಕ್ತಿಕ ವಸ್ತುಗಳನ್ನು ಸಹ ಹಿಂತಿರುಗಿಸಲಿಲ್ಲ; ಅವರು ನಮ್ಮೊಂದಿಗೆ ಸರಿಯಾಗಿ ಮಾತನಾಡಲಿಲ್ಲ; ಕಂಪನಿಯ ಪ್ರತಿನಿಧಿಗಳು ಸಹ ನಮ್ಮ ಮನವಿಯನ್ನು ತಿರಸ್ಕರಿಸಿದರು" ಎಂದು ಹೇಳಿದ್ದಾರೆ.
"ನಾವು ಮೃತದೇಹ ಬರುವುದನ್ನು ನಿರೀಕ್ಷಿಸುತ್ತಿದ್ದೆವು. ಬಂದ ನಂತರ ಇಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನಡೆಸಿದಾಗ, ದೇಹದಲ್ಲಿ ಒಂದೇ ಒಂದು ಅಂಗಗಳು ಇಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ. ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯ ಮತ್ತು ಇತರ ಸಂಬಂಧಿತ ಅಧಿಕಾರಿಗಳಿಗೆ ನಾವು ದೂರುಗಳನ್ನು ಸಲ್ಲಿಸಿದ್ದೇವೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ... ನಾನು ಕೊನೆಯದಾಗಿ ಮೇ 6 ರಂದು ಅವರೊಂದಿಗೆ ಮಾತನಾಡಿದೆ... ಅವರು ಕರ್ತವ್ಯಕ್ಕೆ ಹೋದ ಎರಡು ಅಥವಾ ಮೂರು ಗಂಟೆಗಳ ನಂತರ ನನ್ನ ಮಾವನಿಗೆ ಅಪಘಾತ ಸಂಭವಿಸಿದೆ ಮತ್ತು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಕರೆ ಬಂದಿತು " ಎಂದು ಅವರು ತಿಳಿಸಿದ್ದಾರೆ.
ಭಾರತದ ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಕೂಡ ರಾಕೇಶ್ ಚೌಹಾಣ್ ಅವರ ದೇಹದಲ್ಲಿ ಒಂದೇ ಒಂದು ಅಂಗವೂ ಕಂಡುಬಂದಿಲ್ಲ ಎಂದು ಹೇಳಿದೆ.
ಮೆದುಳು, ಹೃದಯ, ಎರಡೂ ಶ್ವಾಸಕೋಶಗಳು, ಮೂತ್ರಪಿಂಡ, ಯಕೃತ್ತು, ಗುಲ್ಮ, ಮೇದೋಜ್ಜೀರಕ ಗ್ರಂಥಿ, ಹೊಟ್ಟೆ, ಕರುಳು, ಥೈರಾಯ್ಡ್, ಹೈಯಾಯ್ಡ್, ಧ್ವನಿಪೆಟ್ಟಿಗೆ ಮತ್ತು ಶ್ವಾಸನಾಳ ಎಲ್ಲವೂ ಕಾಣೆಯಾಗಿವೆ ಎಂದು ವರದಿಯಾಗಿದೆ.
ಕಳೆದ ಮೇನಲ್ಲಿ ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ಉತ್ತರ ಪ್ರದೇಶದ 33 ವರ್ಷದ ರಾಕೇಶ್ ಚೌಹಾಣ್ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ರಾಕೇಶ್ ಅವರ ಮೃತದೇಹವನ್ನು ಉತ್ತರ ಪ್ರದೇಶದಲ್ಲಿ ಮರು ಮರಣೋತ್ತರಕ್ಕೆ ಒಳಪಡಿಸಿದಾಗ ಬೆಳಕಿಗೆ ಬಂದ ವಿಚಾರಗಳು ಸದ್ಯ ಆ ವೈದ್ಯರನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಉತ್ತರ ಪ್ರದೇಶದ ಡಿಯೋರಿಯಾ ನಿವಾಸಿಯಾದ 33 ವರ್ಷದ ರಾಕೇಶ್ ಚೌಹಾಣ್ 2025ರಲ್ಲಿ ಎಕ್ಸ್ಫಿನಿಟಿ ಕಂಪನಿ ಮೂಲಕ ವೆನೆಜುವೆಲಾಗೆ ಹಡಗಿನಲ್ಲಿ ಕೆಲಸಕ್ಕೆ ತೆರಳಿದ್ದರು. ಮೇನಲ್ಲಿ ಅವರು ಮೃತಪಟ್ಟಿದ್ದರು. ಭಾರತಕ್ಕೆ ತಡವಾಗಿ ಮೃತದೇಹ ರವಾನಿಸಿದರೂ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ. ಉತ್ತರ ಪ್ರದೇಶದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ, ರಾಕೇಶ್ ಅವರ ದೇಹದಲ್ಲಿ ಮೆದುಳು, ಹೃದಯ ಹಾಗೂ ಶ್ವಾಸಕೋಶ ಸೇರಿದಂತೆ ಇನ್ನಿತರ ಭಾಗಗಳು ಕಾಣೆಯಾಗಿವೆ.