ನಾಗ್ಪುರ: 1947ರ ಭಾರತ ವಿಭಜನೆ ಬಳಿಕ ಪಾಕಿಸ್ತಾನದಿಂದ ಭಾರತಕ್ಕೆ ಬಂದವರನ್ನು "ನಿರಾಶ್ರಿತರು (Refugees)" ಎಂದು ಕರೆಯುವುದು ತಪ್ಪು. ಅವರು ತಮ್ಮ ದೇಶ ಮತ್ತು ಧರ್ಮದ ಮೇಲಿನ ಪ್ರೀತಿಯಿಂದ ಎಲ್ಲವನ್ನೂ ತ್ಯಾಗ ಮಾಡಿದ "ಹೋರಾಟದ ಯೋಧರು" ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಬುಧವಾರ ನಾಗಪುರದಲ್ಲಿ ನಡೆದ ಸಿಂಧು ಎಜುಕೇಶನ್ ಸೊಸೈಟಿಯ 75ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಿಂದ ಭಾರತಕ್ಕೆ ಬಂದವರು ತಮ್ಮ ಮನೆ, ಆಸ್ತಿ, ವ್ಯಾಪಾರ ಹಾಗೂ ಹಲವು ತಲೆಮಾರುಗಳಿಂದ ಸಂಪಾದಿಸಿದ್ದ ಸಂಪತ್ತನ್ನು ಬಿಟ್ಟು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದರು. "ಅವರು ನಿರಾಶ್ರಿತರಲ್ಲ. ಹೌದು, ಅವರು ಸ್ಥಳಾಂತರಗೊಂಡಿದ್ದರು. ಆದರೆ, ಅವರನ್ನು ನಿರಾಶ್ರಿತರು ಎಂದು ಕರೆಯುವುದು ಆ ಕಾಲದಲ್ಲೇ ಬಳಸಲಾದ ತಪ್ಪು ಪದ. ಅವರು ಹೋರಾಟದ ಯೋಧರು ಎಂದು ಹೇಳಿದರು.
ಮಾತೃಭೂಮಿಯ ಮೇಲಿನ ಪ್ರೀತಿ ಮತ್ತು ತಮ್ಮ ಧರ್ಮದ ಮೇಲಿನ ನಿಷ್ಠೆಯಿಂದ ಅವರು ಈ ಹೋರಾಟ ನಡೆಸಿದರು. ಭಾರತವನ್ನು ಒಗ್ಗೂಡಿಸಿ ಉಳಿಸಿಕೊಳ್ಳುವ ಹೋರಾಟದಲ್ಲಿ ಸೋತಿದ್ದೇವೆ. ಅದು ಅವರೊಬ್ಬರ ತಪ್ಪಿನಿಂದಲ್ಲ, ನಮ್ಮೆಲ್ಲರ ಸೋಲಾಗಿತ್ತು ಎಂದು ತಿಳಿಸಿದರು.
ಅವರು ತಮ್ಮ ವೃತ್ತಿ, ಸಂಪತ್ತು ಅಥವಾ ವೈಯಕ್ತಿಕ ಭವಿಷ್ಯವನ್ನು ಆಯ್ಕೆ ಮಾಡಲಿಲ್ಲ. ಬದಲಿಗೆ ದೇಶವನ್ನು ಆಯ್ಕೆ ಮಾಡಿಕೊಂಡರು. ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಂಡರು. ವಿಭಜನೆಯ ಬಳಿಕ ಭಾರತಕ್ಕೆ ಬಂದವರು, ತಮ್ಮ ಧರ್ಮವನ್ನು ಭಯವಿಲ್ಲದೆ ಆಚರಿಸಬಹುದಾದ ದೇಶವಾಗಿ ಭಾರತವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದ್ದರು ಎಂದರು.
ಇದೇ ವೇಳೆ ಜೀವನದಲ್ಲಿ ಎದುರಾಗುವ ಸಂಕಷ್ಟಗಳ ಬಗ್ಗೆ ಮಾತನಾಡಿದ ಅವರು, ಪರಿಸ್ಥಿತಿಗಳು ಅಥವಾ ವಿಧಿಯ ಮುಂದೆ ಅಸಹಾಯಕರಾಗಬಾರದು. ಕಷ್ಟದ ಸಮಯದಲ್ಲಿ ಪ್ರಯತ್ನಿಸುವ ವ್ಯಕ್ತಿಯೇ ಅಂತಿಮವಾಗಿ ಯಶಸ್ಸು ಸಾಧಿಸುತ್ತಾನೆ. ಸಮಸ್ಯೆಗಳಿಂದ ಓಡಿ ಹೋಗುವವನು ಮೊದಲೇ ಸೋಲನ್ನು ಒಪ್ಪಿಕೊಂಡಂತೆಯೇ ಎಂದು ಹೇಳಿದರು.
ಶಿಕ್ಷಣದ ಕುರಿತು ಮಾತನಾಡಿ, ಶಿಕ್ಷಣದ ಉದ್ದೇಶ ಕೇವಲ ಉದ್ಯೋಗ ಪಡೆಯುವುದಲ್ಲ. ಉತ್ತಮ ವ್ಯಕ್ತಿತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದೂ ಆಗಿರಬೇಕು ಎಂದು ಅಭಿಪ್ರಾಯಪಟ್ಟರು.
ಮೌಲ್ಯಾಧಾರಿತ ಶಿಕ್ಷಣವು ಸರಿ-ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರಿಯಲು ಸಹಾಯ ಮಾಡುತ್ತದೆ. ಈ ಮೌಲ್ಯಗಳು ಕೇವಲ ಪಠ್ಯಪುಸ್ತಕಗಳಿಂದ ಮಾತ್ರವಲ್ಲ, ಶಿಕ್ಷಕರ ನಡವಳಿಕೆ ಮತ್ತು ಅವರು ವಿದ್ಯಾರ್ಥಿಗಳಿಗೆ ನೀಡುವ ಸಂಸ್ಕಾರಗಳಿಂದಲೂ ರೂಪುಗೊಳ್ಳುತ್ತವೆ. ಶಿಕ್ಷಣದ ಅಂತಿಮ ಗುರಿ ಸಮಾಜದ ಒಳಿತಿಗಾಗಿ ಬದುಕುವ ಉತ್ತಮ ವ್ಯಕ್ತಿಗಳನ್ನು ರೂಪಿಸುವುದೇ ಆಗಿದೆ ಎಂದು ತಿಳಿಸಿದರು.