ಅಸ್ಸಾಂ ಹೈಕೋರ್ಟ್ (AI ರಚಿತ ಚಿತ್ರ) 
ದೇಶ

Voter ID, PAN.. ಪೌರತ್ವ ಸಾಬೀತಿಗೆ ಸಲ್ಲಿಸಿದ್ದ 16 ದಾಖಲೆಗಳನ್ನೂ ತಿರಸ್ಕರಿಸಿದ ಹೈಕೋರ್ಟ್: ನ್ಯಾಯಾಧೀಶರು ಹೇಳಿದ್ದೇನು?

ಅಮೀನುಲ್ ಹೋಕ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ್ದು, 2019ರ ಫೆಬ್ರವರಿ 28ರಂದು ಗೌಹಾಟಿ ವಿದೇಶಿಯರ ನ್ಯಾಯಮಂಡಳಿ ಅವರನ್ನು ವಿದೇಶಿಯೆಂದು ಘೋಷಿಸಿದ್ದ ಆದೇಶವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಗುವಾಹತಿ: ಐತಿಹಾಸಿಕ ಮಹತ್ವದ ತೀರ್ಪೊಂದರಲ್ಲಿ, ಅಸ್ಸಾಂನ ಗುವಾಹತಿ ಹೈಕೋರ್ಟ್ ಅರ್ಜಿದಾರರು ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು 16 ದಾಖಲೆಗಳನ್ನು ಸಲ್ಲಿಸಿದ್ದರೂ, ಅವುಗಳ ಆಧಾರದ ಮೇಲೆ ಅವರು ಭಾರತೀಯ ನಾಗರಿಕರೆಂದು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಹೇಳಿದೆ.

ವಿದೇಶಿಯರ ಕಾಯ್ದೆ, 1946ರ ಸೆಕ್ಷನ್ 9ರ ಅಡಿಯಲ್ಲಿ, ಈ ಪ್ರಕರಣದಲ್ಲಿ ಸಲ್ಲಿಸಲಾದ 16 ದಾಖಲೆಗಳು ಅರ್ಜಿದಾರರು ವಿದೇಶಿಯಲ್ಲ, ಭಾರತೀಯ ನಾಗರಿಕ ಎಂಬುದನ್ನು ಸಾಬೀತುಪಡಿಸಲು ಸಹಾಯಕವಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪೌರತ್ವದ ಬಗ್ಗೆ ಪ್ರಶ್ನೆ ಉದ್ಭವಿಸಿದಾಗ ತಾವು ಭಾರತೀಯ ನಾಗರಿಕರು ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಸಂಬಂಧಿತ ವ್ಯಕ್ತಿಯ ಮೇಲೇ ಇರುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಕಲ್ಯಾಣ್ ರೈ ಸುರಾನಾ ಮತ್ತು ಶಮೀಮಾ ಜಹಾನ್ ಅವರಿದ್ದ ವಿಭಾಗೀಯ ಪೀಠವು ಜೂನ್ 30ರಂದು ಈ ಆದೇಶ ನೀಡಿದೆ.

ಆದೇಶದಲ್ಲೇನಿದೆ?

"ಅರ್ಜಿದಾರರು 16 ದಾಖಲೆಗಳನ್ನು ಪ್ರದರ್ಶಿಸಿದ್ದರೂ, ವಿದೇಶಿಯರ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ತಮ್ಮ ಮೇಲಿರುವ ಹೊಣೆಗಾರಿಕೆಯನ್ನು ಅವರು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಅಥವಾ ತಾವು ವಿದೇಶಿಯಲ್ಲ, ಭಾರತೀಯ ನಾಗರಿಕರು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ," ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಈ ಪ್ರಕರಣವು ಅಮೀನುಲ್ ಹೋಕ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ್ದು, 2019ರ ಫೆಬ್ರವರಿ 28ರಂದು ಗೌಹಾಟಿ ವಿದೇಶಿಯರ ನ್ಯಾಯಮಂಡಳಿ (Foreigners Tribunal) ಅವರನ್ನು ವಿದೇಶಿಯೆಂದು ಘೋಷಿಸಿದ್ದ ಆದೇಶವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಯಾವ್ಯಾವ ದಾಖಲೆಗಳ ಸಲ್ಲಿಸಿದ್ದರು?

ಅಮೀನುಲ್ ಹೋಕ್ ಅವರು 1951ರ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪ್ರತಿಗಳು, ಅದರಲ್ಲಿ ಅವರ ಅಜ್ಜ-ಅಜ್ಜಿ ಮತ್ತು ತಂದೆಯ ಹೆಸರುಗಳಿದ್ದ ದಾಖಲೆಗಳು, 1966ರಿಂದ 2017ರವರೆಗಿನ ಮತದಾರರ ಪಟ್ಟಿಗಳಲ್ಲಿ ತಮ್ಮ ಪೋಷಕರು ಹಾಗೂ ತಮ್ಮ ಹೆಸರಿರುವ ಪ್ರಮಾಣೀಕೃತ ಪ್ರತಿಗಳು, 1973ರ ಭೂ ಖರೀದಿ ದಾಖಲೆಗಳು, ಶಾಶ್ವತ ಖಾತೆ ಸಂಖ್ಯೆ (ಪ್ಯಾನ್), ಮತದಾರರ ಗುರುತಿನ ಚೀಟಿ ಹಾಗೂ ಶಾಲಾ ಪ್ರಮಾಣಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಿದ್ದರು.

ನ್ಯಾಯಾಧೀಶರು ಹೇಳಿದ್ದೇನು?

ಅಲ್ಲದೆ ತಮ್ಮ ಕುಟುಂಬ ಹಲವು ತಲೆಮಾರುಗಳಿಂದ ಅಸ್ಸಾಂನಲ್ಲೇ ವಾಸಿಸುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು. ಅವರ ತಂದೆ ನ್ಯಾಯಾಲಯಕ್ಕೆ ಹಾಜರಾಗಿ ಅಮೀನುಲ್ ಹೋಕ್ ತಮ್ಮ ಪುತ್ರ ಎಂದು ಗುರುತಿಸಿದ್ದರು. ಆದರೆ, "ದಾಖಲೆಗಳ ಬೆಂಬಲವಿಲ್ಲದ ಕೇವಲ ಮೌಖಿಕ ಸಾಕ್ಷ್ಯವು ಇಬ್ಬರ ನಡುವಿನ ಸಂಬಂಧವನ್ನು ಸಾಬೀತುಪಡಿಸಲು ಸಾಕಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.

2019ರ ಫೆಬ್ರವರಿಯಲ್ಲಿ ಅಸ್ಸಾಂನ ಕಾಮರೂಪ್ ಜಿಲ್ಲೆಯ ವಿದೇಶಿಯರ ನ್ಯಾಯಮಂಡಳಿ ಅಮೀನುಲ್ ಹೋಕ್ ಅವರನ್ನು ವಿದೇಶಿಯೆಂದು ಘೋಷಿಸಿತ್ತು. ನಂತರ ಅವರು ಗೌಹಾಟಿ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರ ಪರ ವಕೀಲರು, ಅವರು ವಲಸೆ ಕಾರ್ಮಿಕರಾಗಿದ್ದು, ಕೆಲವು ದಾಖಲೆಗಳಲ್ಲಿ ತಂದೆ ಮತ್ತು ಅಜ್ಜನ ಹೆಸರಿನಲ್ಲಿ ಕಂಡುಬಂದ ವ್ಯತ್ಯಾಸಗಳ ಕಾರಣದಿಂದ ಅವರನ್ನು ವಿದೇಶಿಯೆಂದು ಘೋಷಿಸಲಾಗಿದೆ ಎಂದು ವಾದಿಸಿದ್ದರು.

ಆದರೆ, ತಂದೆಯ ಹೆಸರಿನಲ್ಲಿ ಮೊಹಿರುದ್ದೀನ್ ಶೇಖ್, ಮಾಹರುದ್ದೀನ್ ಶೇಖ್, ಮೊಹಿರುದ್ದೀನ್ ಹಾಗೂ ಮೊಹಿರ್ ಉದ್ದೀನ್ ಎಂಬ ನಾಲ್ಕು ವಿಭಿನ್ನ ರೂಪಗಳು ಕಂಡುಬಂದಿದ್ದರೂ, ಆ ಕಾಗುಣಿತದ ವ್ಯತ್ಯಾಸವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿಲ್ಲ.

ಆದರೂ, ಪಾಸನ್ ಅಲಿ, ಮೊಹಿರುದ್ದೀನ್ ಹಾಗೂ ಅಮೀನುಲ್ ಹೋಕ್ ಒಂದೇ ಕುಟುಂಬದ ಸದಸ್ಯರು ಎಂಬುದನ್ನು ಮೂರು ಗ್ರಾಮಗಳಾದ ದೋಬಕುರಾ, ಘುಗುಡೋಬಾ ಮತ್ತು ಹಶ್ದೋಬಾ ಮತದಾರರ ಪಟ್ಟಿಗಳಲ್ಲಿ ನಿರಂತರವಾಗಿ ತೋರಿಸುವ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.

ದಾಖಲೆಗಳಲ್ಲಿನ ಕೊರತೆಗಳನ್ನು ಮುಚ್ಚಿಹಾಕಲು ಅರ್ಜಿದಾರರು ಮತದಾರರ ಪಟ್ಟಿಗಳನ್ನೇ ಆಧಾರವಾಗಿಸಿಕೊಂಡಿದ್ದಾರೆ. ಕುಟುಂಬವು ದೋಬಕುರಾದಿಂದ ಘುಗುಡೋಬಾಗೆ ಹಾಗೂ ಅಲ್ಲಿಂದ ಹಶ್ದೋಬಾಗೆ ಸ್ಥಳಾಂತರಗೊಂಡಿದೆ ಎಂಬ ವಾದಕ್ಕೆ ಯಾವುದೇ ದಾಖಲಾತಿ ಬೆಂಬಲವಿಲ್ಲ. ಮತದಾರರ ಪಟ್ಟಿಗಳಲ್ಲಿನ ಹೆಸರುಗಳ ವ್ಯತ್ಯಾಸವನ್ನು ದಾಖಲಾತಿ ದೋಷ ಎಂದು ಮಾತ್ರ ವಾದಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, 2017ರ ಅಕ್ಟೋಬರ್ 20ರಂದು ಹಶ್ದೋಬಾ ಆಂಚಲಿಕ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ನೀಡಿದ್ದ ಶಾಲಾ ಪ್ರಮಾಣಪತ್ರವನ್ನೂ ಅರ್ಜಿದಾರರು ಸಲ್ಲಿಸಿದ್ದರು. ಅದರಲ್ಲಿ ವಿದ್ಯಾರ್ಥಿಯು 1999ರಲ್ಲಿ ಶಾಲೆ ತೊರೆದಿದ್ದಾನೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಆ ಪ್ರಮಾಣಪತ್ರ ನೀಡಿದ ಮುಖ್ಯ ಶಿಕ್ಷಕರು ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡದ ಕಾರಣ, ಆ ದಾಖಲೆಗೂ ಅಗತ್ಯವಾದ ಪುರಾವೆ ದೊರೆಯಲಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಅಂದಹಾಗೆ ಅಸ್ಸಾಂ ಎನ್‌ಆರ್‌ಸಿ 2019ರಲ್ಲಿ ಪೂರ್ಣಗೊಂಡಿದ್ದರೂ, ಇದುವರೆಗೆ ಅಧಿಕೃತವಾಗಿ ಪ್ರಕಟವಾಗಿಲ್ಲ. ಭಾರತದಲ್ಲಿ ಯಾರು ನಿಜವಾದ ಭಾರತೀಯ ನಾಗರಿಕರು ಹಾಗೂ ಯಾರು ಅಕ್ರಮ ವಲಸಿಗರು ಎಂಬುದನ್ನು ನಿರ್ಧರಿಸುವ ಉದ್ದೇಶದಿಂದ ಈ ನೋಂದಣಿ ಸಿದ್ಧಪಡಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!