

ಕೌಶಂಬಿ: ಟೋಲ್ ಪ್ಲಾಜಾದ ಡಿವೈಡರ್ ಗೆ ಎಲ್ ಪಿಜಿ ಟ್ಯಾಂಕರ್ ಢಿಕ್ಕಿಯಾದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 4 ಮಂದಿ ಸಜೀವ ದಹನವಾಗಿದ್ದು ಹಲವರು ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಕೊಕ್ರಝಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿಹೋರಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು, ಕಾನ್ಪುರರಿಂದ ವಾರಣಾಸಿಗೆ ತೆರಳುತ್ತಿದ್ದ ಎಲ್‌ಪಿಜಿ ಟ್ಯಾಂಕರ್ ಅಗ್ನಿ ಅವಘಡದ ಸಿಸಿಟಿವಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.
ಭೀಕರ ಬೆಂಕಿ ಹೊತ್ತಿಕೊಳ್ಳುವ ಮುನ್ನ ಟ್ಯಾಂಕರ್ ಟೋಲ್ ಪ್ಲಾಜಾದ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಸಿಸಿಟಿವಿ ದೃಶ್ಯಗಳ ಪ್ರಕಾರ, ಎಲ್‌ಪಿಜಿ ಟ್ಯಾಂಕರ್ ಟೋಲ್ ಪ್ಲಾಜಾದತ್ತ ಸಾಗುತ್ತಿದ್ದ ವೇಳೆ ಪಕ್ಕದಲ್ಲೇ ಮತ್ತೊಂದು ಟ್ಯಾಂಕರ್ ಬಂದಿದ್ದು, ಒಂದು ಹಂತದಲ್ಲಿ ಎರಡೂ ಟ್ಯಾಂಕರ್ ಗಳು ಒಂದೇ ಪಥದಲ್ಲಿ ಸಾಗಲು ಮುಂದಾಗಿದ್ದವು. ಆದರೆ ಮತ್ತೊಂದು ಟ್ಯಾಂಕರ್ ನೋಡಿದ ಚಾಲಕ ಟ್ಯಾಂಕರ್ ಅನ್ನು ಏಕಾಏಕಿ ತಿರುಗಿಸಲು ಯತ್ನಿಸಿದ್ದು ಈ ವೇಳೆ ಟ್ಯಾಂಕರ್ ಡಿವೈಡರ್ ಗೆ ಢಿಕ್ಕಿಯಾಗಿದೆ.
4 ಸಾವು, ಹಲವರಿಗೆ ಗಾಯ
ಟ್ಯಾಂಕರ್ ಚಾಲಕನನ್ನು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಧರ್ಮೇಂದ್ರ ದ್ವಿವೇದಿ ಎಂದು ಗುರುತಿಸಲಾಗಿದ್ದು, ವಾಹನದ ಕ್ಯಾಬಿನ್ ಒಳಗೆ ಸಿಲುಕಿಕೊಂಡು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಾತ್ರವಲ್ಲದೇ ಐದು ಟೋಲ್ ಪ್ಲಾಜಾ ನೌಕರರಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ಪ್ರಯಾಗ್‌ರಾಜ್‌ನ ಸ್ವರೂಪ್ ರಾಣಿ ನೆಹರು (ಎಸ್‌ಆರ್‌ಎನ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರಾದ ಅಲೋಕ್ ಸಿಂಗ್ ಮರುದಿನ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎನ್ನಲಾಗಿದೆ.
ಗುರುವಾರ, ರಾಯ್‌ಬರೇಲಿಯ ನಿವಾಸಿ ಹಿರಾಮಣಿ ಸಿಂಗ್ ಮತ್ತು ಲಲಿತಪುರ ನಿವಾಸಿ ಕೃಷ್ಣಪಾಲ್ ಮೌರ್ಯ ಎಂಬ ಇಬ್ಬರು ಗಾಯಗೊಂಡ ನೌಕರರು ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ. ಇತರ ಇಬ್ಬರು ಟೋಲ್ ನೌಕರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಖ್ರಾಝಾರ್ ಠಾಣೆ ಅಧಿಕಾರಿ ಚಂದ್ರ ಭೂಷಣ್ ಮೌರ್ಯ ಇತ್ತೀಚಿನ ಸಾವುಗಳನ್ನು ದೃಢಪಡಿಸಿದರು, "ಚಿಕಿತ್ಸೆಯಲ್ಲಿ ಇನ್ನೂ ಇಬ್ಬರು ಗಾಯಗೊಂಡವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇದುವರೆಗೆ ನಾಲ್ಕು ಜನರು ಸಾವನ್ನಪ್ಪಿದ್ದಾರೆ, ಆದರೆ ಇಬ್ಬರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಘಟನೆಯ ತನಿಖೆ ಮುಂದುವರೆದಿದ್ದು, ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ " ಎಂದು ಹೇಳಿದರು.
ಕ್ಷಣಾರ್ಧದಲ್ಲಿ ಸ್ಫೋಟ, ಬೆಂಕಿ
ಢಿಕ್ಕಿಯ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್‌ಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ನೋಡ ನೋಡುತ್ತಲೇ ಸ್ಫೋಟವಾಗಿ ಬೆಂಕಿ ಹೊತ್ತುಕೊಂಡಿದೆ. ಬೆಂಕಿ ಕ್ಷಣಾರ್ಧದಲ್ಲೇ ಇಡೀ ಟ್ಯಾಂಕರ್ ಅನ್ನು ಆವರಿಸಿಕೊಂಡಿದ್ದು, ಅದರೊಳಗಿದ್ದವರು ಹಾಗೂ ಸಮೀಪದಲ್ಲಿದ್ದವರಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. ಹೀಗಾಗಿ ಈ ದುರ್ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸಾಕಷ್ಟು ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತಾದರೂ, ಟ್ಯಾಂಕರ್ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಕ ಹಾನಿಯಾಗಿದೆ.
ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳು ಸೇರಿದಂತೆ ಇತರ ಸಾಕ್ಷ್ಯಗಳನ್ನು ಪರಿಶೀಲಿಸಿ, ಯಾಂತ್ರಿಕ ದೋಷ, ಚಾಲಕರ ನಿಯಂತ್ರಣ ತಪ್ಪಿರುವುದು ಅಥವಾ ಇತರೆ ಯಾವುದೇ ಕಾರಣದಿಂದ ಈ ದುರ್ಘಟನೆ ಸಂಭವಿಸಿದೆಯೇ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಎಚ್ಚರಿಕೆ ಅತ್ಯಗತ್ಯ
ಈ ದುರಂತವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್‌ಪಿಜಿ ಸೇರಿದಂತೆ ಅಪಾಯಕಾರಿ ವಸ್ತುಗಳನ್ನು ಸಾಗಿಸುವ ವಾಹನಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಇಂತಹ ಅವಘಡಗಳನ್ನು ತಡೆಯಲು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.