ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಹಾಗೂ ಇತರ ಉಗ್ರ ಸಂಘಟನೆಗಳಿಗೆ ಸೇರಿದ 24 ಭಯೋತ್ಪಾಕರ ಕಾರ್ಯಕರ್ತರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ "ಭಯೋತ್ಪಾದಕರು" ಎಂದು ಕೇಂದ್ರ ಸರ್ಕಾರ ಅಧಿಕೃತ ಆದೇಶದ ಮೂಲಕ ಘೋಷಿಸಿದೆ.
ಯುಎಪಿಎ ಕಾಯ್ದೆಯಡಿ, ಯಾವುದೇ ವ್ಯಕ್ತಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂದು ಕೇಂದ್ರ ಸರ್ಕಾರಕ್ಕೆ ನಂಬಿಕೆ ಬಂದರೆ, ಆತನನ್ನು ಭಯೋತ್ಪಾದಕ ಎಂದು ಘೋಷಿಸುವ ಅಧಿಕಾರವಿದೆ. ಈ ಘೋಷಣೆಯ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ತನಿಖಾ ಸಂಸ್ಥೆಗಳು ಅವರ ಆಸ್ತಿಗಳನ್ನು ಸ್ಥಗಿತಗೊಳಿಸುವುದು, ಹಣಕಾಸಿನ ಮೂಲಗಳನ್ನು ನಿರ್ಬಂಧಿಸುವುದು, ಶಸ್ತ್ರಾಸ್ತ್ರಗಳಿಗೆ ಪ್ರವೇಶವನ್ನು ತಡೆಯುವುದು ಹಾಗೂ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಕ್ರಮ ಕೈಗೊಳ್ಳಬಹುದು.
ವ್ಯಕ್ತಿಗಳನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅವಕಾಶವನ್ನು 2019ರಲ್ಲಿ ಯುಎಪಿಎಗೆ ಮಾಡಲಾದ ತಿದ್ದುಪಡಿಯ ಮೂಲಕ ಸೇರಿಸಲಾಗಿತ್ತು. ಅದಕ್ಕೂ ಮೊದಲು ಕೇವಲ ಸಂಘಟನೆಗಳನ್ನು ಮಾತ್ರ ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಲು ಅವಕಾಶವಿತ್ತು.
ಈ ಹೊಸ ಸೇರ್ಪಡೆಯೊಂದಿಗೆ, ದೇಶದಲ್ಲಿ ಭಯೋತ್ಪಾದಕರೆಂದು ಘೋಷಿಸಲಾದ ವ್ಯಕ್ತಿಗಳ ಒಟ್ಟು ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವಾರು ಉಗ್ರರು ಸೇರಿದ್ದಾರೆ.
ಭಯೋತ್ಪಾದಕರ ಪಟ್ಟಿಗೆ ಸೇರಿಸಲಾದವರಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸಂಬಂಧಿಸಿದ ಮಸೂದ್ ಇಲ್ಯಾಸ್ ಕಾಶ್ಮೀರಿ, ಮೊಹಮ್ಮದ್ ಮುಸ್ಸಾದಿಕ್ ಅಲಿಯಾಸ್ ಡಾಕ್ಟರ್, ಮುಫ್ತಿ ಮುಹಮ್ಮದ್ ಅಸ್ಗರ್ ಖಾನ್ ಅಲಿಯಾಸ್ ಅಬು ಸಾದ್, ಹಫೀಜ್ ಅಬ್ದುಲ್ ಶಕೂರ್ ಅಲಿಯಾಸ್ ಖಾರಿ ಜರ್ರಾರ್, ಅಬ್ದುಲ್ಲಾ ಜೆಹಾದಿ, ಗುಲಾಂ ಫರೀದ್, ಮೌಲಾನಾ ಇಮ್ದಾದ್ ಉಲ್ಲಾ ಮಕ್ಕಿ ಹಾಗೂ ವಸೀಂ ನೂರ್ ಜಾಟ್ ಸೇರಿದ್ದಾರೆ.
ಅದೇ ರೀತಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಫಿರ್ದೌಸ್ ಅಹ್ಮದ್ ಭಟ್, ಹರೂನ್ ರಶೀದ್ ಗನೈ, ಬಿಲಾಲ್ ಅಹ್ಮದ್ ಮಿರ್, ಅಬಿದ್ ಖಯ್ಯೂಮ್ ಲೋನ್, ನಜೀರ್ ಅಹ್ಮದ್ ಗುಜ್ಜರ್, ಅಬ್ದುಲ್ ರೌಫ್ ಅಲಿಯಾಸ್ ಹಫೀಜ್ ಅಬ್ದುಲ್ ರೌಫ್, ಅಶ್ಫಾಕ್ ಅಹ್ಮದ್, ಹಫೀಜ್ ಖಾಲಿದ್ ವಲೀದ್, ಮೌಲಾನಾ ಸೈಫುಲ್ಲಾ ಖಾಲಿದ್, ಮೊಹಮ್ಮದ್ ಯಾಕೂಬ್, ಮೌಲಾನಾ ಯೂಸುಫ್ ತೈಬಿ, ಓವೈಸ್ ಫಾರೂಜ್, ಖಾರಿ ಯಾಕೂಬ್ ಶೇಖ್, ರಾಣಾ ಇಫ್ತಿಖಾರ್ ಹಾಗೂ ಅಲ್ ಖೈದಾ ಮತ್ತು ಐಸಿಸ್ ಸಂಘಟನೆಗಳೊಂದಿಗೂ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಮೊಹಮ್ಮದ್ ಶಾಹಿದ್ ಫೈಸಲ್ ಅವರ ಹೆಸರೂ ಈ ಪಟ್ಟಿಯಲ್ಲಿದೆ.