ತಿರುಪತಿ: ಅಲಿಪಿರಿ ಕಾಲುದಾರಿಯಲ್ಲಿ ನಡೆದು ತಿರುಮಲ ಬೆಟ್ಟ ಏರುತ್ತಿದ್ದ ಕರ್ನಾಟಕ ಮೂಲದ ವೈರಲ್ ಅಜ್ಜಿಗೆ ತಿರುಪತಿ ತಿರುಲಮ ದೇವಸ್ಥಾನದ ಟ್ರಸ್ಟ್ (TTD) ವಿಐಪಿ ದರ್ಶನ ವ್ಯವಸ್ಥೆ ಕಲ್ಪಿಸಿದೆ.
ಹೌದು.. ಅಪರೂಪದ ಭಕ್ತಿ ಮತ್ತು ಅಚಲ ಸಂಕಲ್ಪಕ್ಕೆ ಸಾಕ್ಷಿಯಾಗುವ ಘಟನೆಯೊಂದರಲ್ಲಿ, ಅಲಿಪಿರಿ ಕಾಲುದಾರಿಯ ಮೂಲಕ ನಡೆದು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ತಲುಪಿದ ಕರ್ನಾಟಕ ಮೂಲದ 116 ವರ್ಷದ ವೃದ್ಧ ಭಕ್ತೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವತಿಯಿಂದ ವಿಶೇಷ ವಿಐಪಿ ದರ್ಶನದ ವ್ಯವಸ್ಥೆ ಮಾಡಲಾಯಿತು.
ವಯಸ್ಸಿನ ಮಿತಿಯನ್ನು ಲೆಕ್ಕಿಸದೆ, ಅಪಾರ ಭಕ್ತಿಯಿಂದ ಸಾಂಪ್ರದಾಯಿಕ ಅಲಿಪಿರಿ ಕಾಲುದಾರಿಯಲ್ಲಿ ಕಾಲ್ನಡಿಗೆಯಲ್ಲೇ ತಿರುಮಲ ತಲುಪಿದ ವೃದ್ಧೆಯ ದೃಢಸಂಕಲ್ಪ ಭಕ್ತರು ಹಾಗೂ ಟಿಟಿಡಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಯಿತು. ಅವರ ಭಕ್ತಿಯ ಪಯಣ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಪ್ರಶಂಸೆಗೆ ಕಾರಣವಾಯಿತು.
ವೃದ್ಧೆಯ ಅಸಾಮಾನ್ಯ ಭಕ್ತಿ ಮತ್ತು ಪರಿಶ್ರಮವನ್ನು ಗೌರವಿಸಿದ ಟಿಟಿಡಿ ಅಧಿಕಾರಿಗಳು, ಅವರಿಗೆ ವಿಶೇಷ ವಿಐಪಿ ದರ್ಶನದ ವ್ಯವಸ್ಥೆ ಕಲ್ಪಿಸಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಸುಗಮವಾಗಿ ಪಡೆಯಲು ಅವಕಾಶ ಮಾಡಿಕೊಟ್ಟರು. ಟಿಟಿಡಿಯ ಸಿಬ್ಬಂದಿಗಳು ವೃದ್ಧೆಯನ್ನು ಮತ್ತು ಆಕೆಯ ಓರ್ವ ಸಂಬಂಧಿಯನ್ನು ಖುದ್ದಾಗಿ ಕರೆದುಕೊಂಡು ಹೋಗಿ ದೇಗುಲದೊಳಗಿನ ಸಿಬ್ಬಂದಿಗೆ ಒಪ್ಪಿಸಿದರು. ಅಲ್ಲಿ ವೃದ್ಘೆ ದೇಗುಲದೊಳಗಿನ ಸಿಬ್ಬಂದಿ ಜೊತೆ ತೆರಳಿ ದರ್ಶನ ಮಾಡಿಕೊಂಡು ಆಶೀರ್ವಾದ ಪಡೆದರು.
ಈ ಕುರಿತು ಪ್ರತಿಕ್ರಿಯಿಸಿದ ಟಿಟಿಡಿ ಅಧಿಕಾರಿಗಳು, 116 ವರ್ಷದ ಭಕ್ತೆಯ ನಿಷ್ಠೆ ಮತ್ತು ದೇವರ ಮೇಲಿನ ಅಚಲ ವಿಶ್ವಾಸವು ಪ್ರತಿವರ್ಷ ತಿರುಮಲಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು. ಅಂತೆಯೇ ಅವರ ಭಕ್ತಿ ಎಲ್ಲ ವಯೋಮಾನದ ಯಾತ್ರಿಕರಿಗೂ ಆದರ್ಶವಾಗಿದೆ ಎಂದು ಅಭಿಪ್ರಾಯಪಟ್ಟರು.
11 ಕಿಲೋಮೀಟರ್ ನಡೆದೇ ಸಾಗಿದ್ದ ಅಜ್ಜಿ
ತಿರುಪತಿಯಿಂದ ತಿರುಮಲದವರೆಗೆ ಸುಮಾರು 11 ಕಿಲೋಮೀಟರ್** ಉದ್ದವಿರುವ ಅಲಿಪಿರಿ ಕಾಲುದಾರಿ, ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುವ ಪ್ರಮುಖ ಪಾದಯಾತ್ರಾ ಮಾರ್ಗಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ಭಕ್ತರು ತಮ್ಮ ಹರಕೆ ಹಾಗೂ ಭಕ್ತಿಯ ಸಂಕೇತವಾಗಿ ಈ ಮಾರ್ಗದಲ್ಲಿ ಕಾಲ್ನಡಿಗೆಯಲ್ಲೇ ಬೆಟ್ಟವನ್ನು ಏರುತ್ತಾರೆ.
116 ವರ್ಷದ ವೃದ್ಧೆಯ ಈ ಸಾಧನೆ ಭಕ್ತರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರ ಮನಗೆದ್ದಿದ್ದು, ಅನೇಕರು ಅವರ ಧೈರ್ಯ, ದೈಹಿಕ ಸಾಮರ್ಥ್ಯ ಮತ್ತು ಅಚಲ ಭಕ್ತಿಯನ್ನು ಕೊಂಡಾಡಿದ್ದಾರೆ.
ಈ ಪವಿತ್ರ ಪಾದಯಾತ್ರೆಯ ಮೂಲಕ ವೃದ್ಧೆ, "ಭಕ್ತಿಗೆ ವಯಸ್ಸಿನ ಮಿತಿಯಿಲ್ಲ; ದೃಢ ಸಂಕಲ್ಪ ಇದ್ದರೆ ಯಾವುದೂ ಅಸಾಧ್ಯವಲ್ಲ" ಎಂಬ ಸಂದೇಶವನ್ನು ಅಜ್ಜಿ ಸಾರಿದ್ದು, ಆ ಮೂಲಕ ದರ್ಶನಕ್ಕಾಗಿ ತಿರುಮಲಕ್ಕೆ ಆಗಮಿಸುವ ಅನೇಕ ಭಕ್ತರಿಗೆ ಪ್ರೇರಣೆಯಾಗಿದ್ದಾರೆ.