Urban Flooding: ಸರಿಯಾಗಿ 15 ದಿನದ ಹಿಂದೆ ದೇಶದ ಬಹುತೇಕ ಕಡೆ ಮಳೆರಾಯನ ಬರುವಿಕೆಗಾಗಿ ಜನ ನೋಡುತ್ತಿದ್ದರು. ಆದರೆ, ಇದೀಗ ಸುರಿಯುತ್ತಿರುವ ಮಳೆಯಿಂದ (Rain) ದೇಶದ ಹಲವು ಕಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಇನ್ನು ಪ್ರತಿ ವರ್ಷದ ಮಳೆಗಾಲದಲ್ಲಿಯೂ (Monsoon Season), ಬೆಂಗಳೂರು, ಮುಂಬೈ, ಗುರುಗ್ರಾಮ, ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಮಳೆರಾಯನ ಅಟ್ಟಹಾಸಕ್ಕೆ ಕಾರುಗಳು ಮುಳುಗಿದ, ವಿಮಾನ ನಿಲ್ದಾಣಗಳು ಕ್ಲೋಸ್ ಆದ, ಆಫೀಸ್-ಕ್ಯಾಂಪಸ್‌ಗಳು ದ್ವೀಪದಂತಾಗಿ, ರಸ್ತೆಯಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ವಾಹನದಲ್ಲಿಯೇ ಸಿಲುಕಿಕೊಂಡ ಸುದ್ದಿಗಳನ್ನ ನೋಡಿರುತ್ತೀರಿ. ಈ ದೃಶಗಳು ಪ್ರತಿ ಪ್ರತಿ ಮಳೆಗಾಲದಲ್ಲೂ ಮರುಕಳಿಸುತ್ತಿದೆ. ಹಾಗಾಗಿ, ಅಧಿಕಾರಿಗಳು ಇದನ್ನು ಅಸಾಧಾರಣ ಮಳೆ, ಶತಮಾನದಲ್ಲಿ ಒಮ್ಮೆ ಬರುವ ದಾಖಲೆಯ ಮಳೆ, ಅಭೂತಪೂರ್ವ ಮಳೆ ಎಂದು ವರ್ಣಿಸುತ್ತಾ ಪ್ರತಿ ಘಟನೆಗೂ ಒಂದೇ ಸಬೂಬು ನೀಡುತಾರೆ.
ಒಂದು ಕಾಲದಲ್ಲಿ, ಸೀಸನ್ನಲ್ ಮಾನ್ಸೂನ್ ಪ್ರಾಬ್ಲಮ್ ಎಂದು ಕರೆಯಲಾಗುತ್ತಿದ್ದ ಇವುಗಳು, ಈಗ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿ ಜನವಸತಿಗಳನ್ನು ಸ್ಥಳಾಂತರಿಸಲು ಕಾರಣವಾಗುತ್ತಿದೆ. ಅದರೊಂದಿಗೆ, ಸಾವಿರಾರು ಕೋಟಿ ಮೌಲ್ಯದ ಆರ್ಥಿಕ ಹಾನಿಯನ್ನುಂಟುಮಾಡುತ್ತದೆ. ಹಾಗಾಗಿ. ತಜ್ಞರು ಇದನ್ನು ಕೇವಲ ನೈಸರ್ಗಿಕ ವಿಕೋಪವಲ್ಲ, ನಾವೇ ನಿರ್ಮಿಸಿದ ವ್ಯವಸ್ಥಿತ ವಿಪತ್ತು ಎಂದು ಕರೆಯುತ್ತಿದಾರೆ.
ಹಾಗಾದ್ರೆ, ನಗರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ನಿಜವಾದ ಕಾರಣವೇನು?
ಸಾಮಾನ್ಯವಾಗಿ ಮಳೆ ಪ್ರವಾಹಕ್ಕೆ (Flood) ಕಾರಣವಾಗಬಹುದು, ಆದರೆ ನಗರ ಪ್ರದೇಶಗಳಲ್ಲಿ ಮುಳುಗಡೆಯಾಗುವಷ್ಟರ ಮಟ್ಟಿಗೆ ಪರಿಸ್ಥಿತಿ ಉಂಟಾಗಲು, ಆ ನಗರವನ್ನು ಹೇಗೆ ಪ್ಲಾನ್ ಮಾಡಿ ನಿರ್ಮಿಸಲಾಗಿದೆ ಎಂಬುದರ ಮೇಲೆಯೇ ಹೆಚ್ಚಾಗಿ ನಿರ್ಧರಿಸಲ್ಪಡುತ್ತದೆ.ಅದರಂತೆ, ಭಾರತದ ನಗರಗಳಲ್ಲಿ ಕಾಣುವ ಪ್ರಮುಖ ಸಮಸ್ಯೆ ಅಂದರೆ, ಪ್ಲೂನಿಯಲ್ ಪ್ರವಾಹ.!
ಅಂದರೆ ನದಿ ಉಕ್ಕಿ ಹರಿಯುವುದರಿಂದ ಅಥವಾ ಸಮುದ್ರದ ಅಲೆಗಳಿಂದ ಅಲ್ಲ, ಬದಲಾಗಿ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ಭೂಮಿಯೊಳಗಡೆ ಹೋಗದೆ, ರಸ್ತೆ ಮತ್ತು ಬಡಾವಣೆಗಳಲ್ಲಿ ನಿಲ್ಲುವುದರಿಂದ ಉಂಟಾಗುವ ಪ್ರವಾಹ. ಅರ್ಥಾತ್ ಭೂಮಿಯನ್ನು ಕಾಂಕ್ರೀಟ್ ನಿಂದ ಮುಚ್ಚಿದಾಗ, ಭೂಪ್ರದೇಶದ ಇಳಿಜಾರು ಬದಲಿಸಿದಾಗ ಮಳೆ ನೀರು ಹರಿದು ಹೋಗಲು ದಾರಿ ಸಿಗದೆ ನಗರದೊಳಗೆ ಈ ನೀರುಗಳು ಕಟ್ಟಿಕೊಳ್ಳುತ್ತದೆ.
ಭಾರತದ ನಗರಗಳಲ್ಲಿ ಪ್ರವಾಹ ಯಾಕೆ ಹೆಚ್ಚಾಗುತ್ತಿದೆ?
ಈ ಹಿಂದೆಯಲ್ಲ ಭಾರತದಲ್ಲಿ ನಗರಗಳಲ್ಲಿ ಕೆರೆ-ಕಟ್ಟೆಗಳು ಸಾಮಾನ್ಯವಾಗಿರುತ್ತಿದ್ದವು. ಜೊತೆಗೆ ಬಹುತೇಕ ಎಲ್ಲಾ ದೇವಸ್ಥಾನದಲ್ಲಿಯೂ ಕಲ್ಯಾಣಿಗಳಿರುತ್ತಿದ್ದವು. ಇವು ನೈಸರ್ಗಿಕ ಸ್ಪಾಂಜ್ ರೀತಿ ಕೆಲಸ ಮಾಡಿ, ಮಳೆ ನೀರನ್ನು ಭೂಮಿಯು ಹೀರಿಕೊಂಡು ಅಂತರ್ಜಲಕ್ಕೆ ಇಳಿಸುತ್ತಿದ್ದವು. ಆದರೆ ವೇಗದ ರಿಯಲ್ ಎಸ್ಟೇಟ್ ವಿಸ್ತರಣೆ ಈ ವ್ಯವಸ್ಥೆಯನ್ನು ನಾಶ ಮಾಡಿದೆ.
ಹೌದು, 1973 ಮತ್ತು 2010 ರ ನಡುವೆ ಬೆಂಗಳೂರಿನಲ್ಲಿ ಜನವಸತಿ ಪ್ರದೇಶಗಳು 632% ಹೆಚ್ಚಾಗಿದೆ. ಇದೇ ವೇಳೆ ಆಘಾತಕಾರಿಯಾಗಿ ನಗರದ ಜಲಮೂಲಗಳು 79% ಕಡಿಮೆಯಾಗಿವೆ. ಜೊತೆಗೆ 2011 ರ ವೇಳೆಗೆ ಚೆನ್ನೈನ ಪಲ್ಲಿಕಾರಣೈ ಜೌಗು ಪ್ರದೇಶದ ಮೂಲವು ಶೇ. 12 ಕ್ಕೆ ಇಳಿದಿದೆ. ಮತ್ತೊಂದೆಡೆ, ಮುಂಬೈನಲ್ಲಿ ಕರಾವಳಿ ಜೌಗು ಮತ್ತು ಮಾಂಗ್ರೋವ್ ಭೂಮಿಯ ನಾಶದಿಂದ ಮಳೆ ನೀರು ಹರಿದು ಹೋಗುವ ಸಾಮರ್ಥ್ಯ ಕಡಿಮೆಯಾಗಿದೆ. ಅದರಂತೆ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿಯೂ ಕೆರೆಗಳು, ನಾಲೆಗಳು ಮತ್ತು ತೇವಾಂಶಭರಿತ ಪ್ರದೇಶಗಳ ಒತ್ತುವರಿಯಿಂದಾಗಿ ಜಲಾವೃತವಾಗುವುದು ಸಾಮಾನ್ಯವಾಗಿ ಬಿಟ್ಟಿದೆ.
ಅದರಲ್ಲೂ, ಮಳೆಯಾದ ಪ್ರತಿಯೊಂದು ಸಂದರ್ಭದಲ್ಲಿ ಮಣ್ಣಿನ ಮೂಲಕ ನಿಧಾನವಾಗಿ ಭೂಮಿಯು ನಿಧಾನವಾಗಿ ಹೀರಿಕೊಳ್ಳುತೀದ್ದವು. ಆದ್ರೆ, ಈಗ ಮಳೆ ನೀರು ಕಾಂಕ್ರೀಟ್ ಮೇಲೆ ವೇಗವಾಗಿ ಹರಿದು, ಹಳೆಯ ಚರಂಡಿ ವ್ಯವಸ್ಥೆಯನ್ನು ಮೀರಿ ಹರಿಯುತ್ತಿದೆ.
ಚರಂಡಿ ವ್ಯವಸ್ಥೆಗಳು ಯಾಕೆ ಫೇಲ್ ಆಗುತ್ತಿದೆ?
ಹೆಚ್ಚಿನ ನಗರಗಳ ಚರಂಡಿಗಳು ಬ್ರಿಟಿಷ್ ಕಾಲದವು, ಹಿಂದಿನ ಜನಸಂಖ್ಯೆ ಮತ್ತು ನೀರಿನ ಪ್ರಮಾಣಕ್ಕೆ ತಕ್ಕಂತೆ ವಿನ್ಯಾಸ ಮಾಡಲಾಗಿತ್ತು. ಆದರೆ, ವರ್ಷಗಳಿಂದ ಇವುಗಳ ಸರಿಯಾದ ನಿರ್ವಹಣೆ ಇಲ್ಲದೆ, ಹೂಳು ತುಂಬಿದೆ, ಕಸ ಮತ್ತು ಕಟ್ಟಡದ ತ್ಯಾಜ್ಯದಿಂದ ಬ್ಲಾಕ್ ಆಗುತ್ತಿವೆ.ಅದರಲ್ಲೂ ಹವಾಮಾನ ಬದಲಾವಣೆಯಿಂದಾಗಿ ಸುರಿಯುವ ಭಾರಿ ಮಳೆಯು ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ.
ನಗರದಲ್ಲಿ ಉಂಟಾಗುವ ಪ್ರವಾಹದಿಂದ ತೊಂದರೆ ಯಾರಿಗೆ?
ಪ್ರವಾಹದ ನೀರು ಎಲ್ಲರಿಗೂ ಒಂದೇ ರೀತಿ ಕಂಡರೂ ಅದರ ಪರಿಣಾಮ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ! ಹೌದು, ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿಗಳಿಂದ ಅತಿಹೆಚ್ಚು ತೊಂದರೆಗೆ ಒಳಗಾಗುವ ಜನರು ಅಂದ್ರೆ ಬಡ ಕುಟುಂಬಗಳು. ಅದರಲ್ಲೂ, ತಗ್ಗು ಪ್ರದೇಶ ಮತ್ತು ಚರಂಡಿ ಪಕ್ಕದ ಜಾಗಗಳಲ್ಲಿ ವಾಸಿಸುವ ಜನರು. ಅದ್ರಂತೆ, ಪ್ರತಿ ಮಳೆಗಾಲದಲ್ಲೂ ಬಹುತೇಕ ಈ ಜನರ ಮನೆ, ವಸ್ತುಗಳು ನಾಶವಾಗಿ ಸಾಲದ ಸುಳಿಗೆ ಸಿಲುಕುತ್ತಾರೆ. ಅದರಂತೆ, ಶ್ರೀಮಂತ ಜನರು ವಾಸಿಸುವ ಬಡಾವಣೆಗಳಲ್ಲಿ ಸೇವೆಗಳು ಬೇಗ ಪುನಃಸ್ಥಾಪನೆಯಾದರೆ ಕೊಳಚೆ ಪ್ರದೇಶಗಳಲ್ಲಿ ಚೇತರಿಕೆ ಬಹಳ ನಿಧಾನ.
ಸರ್ಕಾರಗಳು ವಿಫಲವಾಗುತಿರೋದು ಎಲ್ಲಿ?
ನಗರಪ್ರದೇಶಗಲ್ಲಿ ಉಂಟಾಗುವ ಪ್ರವಾಹಗಳು ಯಾವುದೊ ಎಂಜಿನಿಯರಿಂಗ್ ಜ್ಞಾನದ ಕೊರತೆಯಲ್ಲ, ಬದಲಾಗಿ ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯ.! ಹೌದು, ನಗರದ ನೀರಿನ ನಿರ್ವಹಣೆಯು ಪಾಲಿಕೆ, ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ, ಲೋಕೋಪಯೋಗಿ ಇಲಾಖೆ, ವಿಪತ್ತು ನಿರ್ವಹಣಾ ಘಟಕ ಎಂದು ಹಲವು ಇಲಾಖೆಗಳಲ್ಲಿ ಹಂಚಿ ಹೋಗಿದೆ. ಈ ಯಾವ ಇಲಾಖೆಗಳ ನಡುವೆಯೂ ಸರಿಯಾದ ಸಮನ್ವಯವಿಲ್ಲ.
ಇದರೊಂದಿಗೆ, ಸರ್ಕಾರಗಳು ಖಜಾನೆ ಹಣವನ್ನು ಮೇಲ್ಸೇತುವೆ, ಮೆಟ್ರೋ, ಎಕ್ಸ್‌ಪ್ರೆಸ್‌ವೇಗಳಂತಹ ಕಣ್ಣಿಗೆ ಕಾಣುವ ಯೋಜನೆಗಳಿಗೆ ಹೆಚ್ಚು ಖರ್ಚು ಮಾಡುತ್ತವೆ. ಈ ವೇಳೆ, ಕಣ್ಣಿಗೆ ಕಾಣದ ಚರಂಡಿಗಳನ್ನು ನಿರ್ವಹಣೆ ಮಾಡಲು ಹಿಂದುಮುಂದು ನೋಡುತ್ತಾರೆ. ಅದರಲ್ಲೂ, ಮಳೆಗಾಲಕ್ಕೂ ಮೊದಲೇ ಮಾಡಬೇಕಾದ ಹೂಳೆತ್ತುವ ಕೆಲಸವನ್ನು ಮಳೆ ಬಂದ ನಂತರವೇ ಮಾಡುತ್ತಾರೆ. ಇದರ ನಡುವೆ, ಅನೇಕ ನಗರಗಳಲ್ಲಿ ನೆರೆ ಅಪಾಯದ ನಕ್ಷೆಗಳು, ಸ್ಥಳೀಯ ಮಳೆ ದಾಖಲೆಗಳು ಮತ್ತು ಚರಂಡಿಗಳ ಡಿಜಿಟಲ್ ಮಾಹಿತಿಯೇ ಇಲ್ಲ.!
ಇಂತಹ ಪ್ರವಾಹ ಪರಿಸ್ಥಿತಿಯನ್ನ ಮೆಟ್ಟಿನಿಂತ ಯಾವುದಾದ್ರೂ ನಗರ ಇದೆಯಾ?
ಗುಜರಾತ್ ರಾಜ್ಯದ ಸೂರತ್ ನಲ್ಲಿ ಭೀಕರ ಪ್ರವಾಹದ ನಂತರ ಸೂರತ್ ಕ್ಲೈಮೇಟ್ ಚೇಂಜ್ ಟ್ರಸ್ಟ್ ಸ್ಥಾಪಿಸಿದ ಸರ್ಕಾರ, ಉದ್ಯಮಿಗಳು ಮತ್ತು ಸಂಶೋಧಕರನ್ನು ಒಟ್ಟುಗೂಡಿಸಿ ಮುನ್ನೆಚ್ಚರಿಕೆ ವ್ಯವಸ್ಥೆ ರೂಪಿಸಿದೆ. ಇದರೊಂದಿಗೆ ಅಹಮದಾಬಾದ್ನಲ್ಲಿಯೂ ಕೂಡ ಹೀಟ್ ಆಕ್ಷನ್ ಪ್ಲಾನ್ ಸಮಿತಿ ಸ್ಥಾಪಿಸಲಾಗಿದ್ದು, ಇದು ಕೂಡ ಸಮನ್ವಯದಿಂದ ವಿಪತ್ತು ಸಾವುಗಳನ್ನು ಕಡಿಮೆ ಮಾಡಬಹುದು ಎಂದು ತೋರಿಸಿದೆ.
ಇದಕ್ಕೆ ಪರಿಹಾರ ದೊಡ್ಡ ಚರಂಡಿಗಳು ಮಾತ್ರವೇ?
ಇಲ್ಲ. ಕೇವಲ ಕಾಂಕ್ರೀಟ್ ಆಧಾರಿತ ಪರಿಹಾರ ಒಂದೇ ಸಾಕಾಗಲ್ಲ. ಹಾಗಾಗಿಯೇ, ಈಗ ಆಧುನಿಕ ಯೋಜನೆ ಪರಿಸರ ಆಧಾರಿತ ಹೊಂದಾಣಿಕೆಯನ್ನು ಸೂಚಿಸುವ ಸ್ಪಾಂಜ್ ಸಿಟಿ ಎಂಬ ಪರಿಕಲ್ಪನೆ ಮುಖ್ಯವಾಗುತ್ತಿದೆ. ಅಂದರೆ ಮಳೆಯನ್ನು ಶತ್ರು ಎಂದು ಕೊಳವೆ ಭಾವಿಯಲ್ಲಿ ತಳ್ಳುವ ಬದಲು, ನೀರನ್ನು ಹೀರಿಕೊಳ್ಳುವ ಮತ್ತು ನಿಧಾನವಾಗಿ ಬಿಡುಗಡೆ ಮಾಡುವ ನಗರಗಳನ್ನು ಕಟ್ಟುವುದು ಇದರ ಉದ್ದೇಶ.. ಅದರಂತೆ, ನೀರನ್ನು ಹೀರಿಕೊಳ್ಳುವ ಪಾದಚಾರಿ ಮಾರ್ಗಗಳು, ನಗರದಲ್ಲಿ ಹೆಚ್ಚಿನ ಪಾರ್ಕ್ಗಳು ಜೊತೆಗೆ ಕೆರೆ ಮತ್ತು ಜೌಗು ಪ್ರದೇಶಗಳ ಸಂರಕ್ಷಣೆ ಬಹಳ ಮುಖ್ಯ.
ಏತನ್ಮಧ್ಯೆ ಇದಕ್ಕೆ ಉತ್ತಮ ಉದಾಹರಣೆ ಪೂರ್ವ ಕೋಲ್ಕತ್ತಾ! ಹೌದು, ಪೂರ್ವ ಕೋಲ್ಕತ್ತಾ ಪ್ರದೇಶವು ಕೋಲ್ಕತ್ತಾದ ನೈಸರ್ಗಿಕ ಕಿಡ್ನಿಯಂತೆ ಕೆಲಸ ಮಾಡಿ ಕೊಳಚೆ ನೀರನ್ನು ಶುದ್ಧಿಕರಿಸಿ, ಮೀನುಗಾರಿಕೆ ಮತ್ತು ಕೃಷಿಗೆ ಬಳಕೆಯಾಗುವಂತೆ ಮಾಡುತ್ತದೆ. ಜೊತೆಗೆ ಪ್ರವಾಹವನ್ನು ಸಹ ತಡೆಯುತ್ತದೆ.
ಹಾಗಾದ್ರೆ, ಭಾರತದ ನಗರಗಳ ಮುಂದಿರುವ ಆಯ್ಕೆ ಏನು?
ಮುಂದಿನ ದಶಕಗಳಲ್ಲಿ ಕೋಟ್ಯಂತರ ಜನರು ತಮ್ಮ ಊರುಗಳಿಂದ ನಗರಗಳಿಗೆ ಬರಲಿದ್ದಾರೆ. ಕೆರೆ, ಜೌಗು, ಪ್ರವಾಹ ತಗ್ಗುಗಳನ್ನು ಖಾಲಿ ಜಾಗ ಎಂದು ಕಾಂಕ್ರೀಟ್ ಕಾಡು ಕಟ್ಟುವುದನ್ನು ಮುಂದುವರಿಸಬೇಕೇ ಅಥವಾ ನೀರನ್ನು ನಗರದ ಜೀವಂತ ಭಾಗವಾಗಿಸಿ ಗೌರವಿಸಿ ಬದುಕಲು ಕಲಿಯಬೇಕೇ ಎಂಬುದು ಈಗಿನ ಪ್ರಶ್ನೆಯಾಗಿದೆ?