ಘಾಜಿಯಾಬಾದ್: "ನನ್ನನ್ನು ಉಳಿಸಿ... ದಯವಿಟ್ಟು ಸಹಾಯ ಮಾಡಿ..." ಎಂದು ಸುಮಾರು 40 ನಿಮಿಷಗಳ ಕಾಲ ಪರದಾಡಿದ 22 ವರ್ಷದ ಯುವಕನಿಗೆ ಸಮಯಕ್ಕೆ ಚಿಕಿತ್ಸೆ ಸಿಗದೆ ಪೊಲೀಸ್ ಬೂತ್ ಎದುರೇ ರಕ್ತಸ್ರಾವದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.
ಘಟನೆಯಿಂದ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬಿಹಾರದ ಸಿವಾನ್ ಜಿಲ್ಲೆಯ ಮೂಲದ ರಾಜ್ ಕುಮಾರ್ ಘಾಜಿಯಾಬಾದ್‌ನಲ್ಲಿ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮೃತನನ್ನು ರಾಜ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಕಾರು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಭಾನುವಾರ ಬಾಪುಧಾಮ್ ಪ್ರದೇಶದಲ್ಲಿರುವ ಪಿಂಕ್ ಪೊಲೀಸ್ ಬೂತ್ ಬಳಿ ನಡೆದ ಸಣ್ಣ ಜಗಳ ಕ್ಷಣಾರ್ಧದಲ್ಲೇ ದುರಂತಕ್ಕೆ ತಿರುಗಿದೆ. ರಾಜ್ ಕುಮಾರ್ ದುರಂತ ಸಾವನ್ನಪ್ಪಿದ್ದಾನೆ.
ಆಗಿದ್ದೇನು?
ಮೂಲಗಳ ಪ್ರಕಾರ, ಆಟೋ ಚಾಲಕನೊಂದಿಗೆ ಕೇವಲ 20 ರೂಪಾಯಿ ಬಾಡಿಗೆ ವಿಚಾರಕ್ಕೆ ರಾಜ್ ಕುಮಾರ್ ವಾಗ್ವಾದ ನಡೆಸಿದ್ದರು. ಬಳಿಕ ಆತ ಹಾಗೂ ಆಟೋ ಚಾಲಕ ಪಿಂಕ್ ಪೊಲೀಸ್ ಬೂತ್‌ಗೆ ತೆರಳಿದ್ದಾರೆ. ಈ ವೇಳೆ ಅಲ್ಲಿಯೇ ಇಬ್ಬರ ನಡುವೆ ಕೈಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೂತ್‌ನ ಬಾಗಿಲು ಬಲವಾಗಿ ಬಡಿದ ಪರಿಣಾಮ ಗಾಜು ಒಡೆದು ರಾಜ್ ಕುಮಾರ್ ಅವರ ಕೈಗೆ ಆಳವಾದ ಗಾಯವಾಗಿದೆ.
ಈ ವೇಳೆ ಗಾಯದಿಂದ ತೀವ್ರ ರಕ್ತಸ್ರಾವವಾಗುತ್ತಿದ್ದರೂ, ಇವರಿಬ್ಬರ ಕಿರುಚಾಟ ಗಲಾಟೆ ನೋಡಿದ್ದ ಪೊಲೀಸ್ ಬೂತ್‌ನಲ್ಲಿದ್ದ ಮಹಿಳಾ ಸಿಬ್ಬಂದಿ ಭಯಗೊಂಡು ಒಳಗೇ ಬಾಗಿಲು ಹಾಕಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮೃತ ರಾಜ್ ಕುಮಾರ್ ತಾಯಿ, "ಅವರು ಸಹಾಯಕ್ಕೆ ಬರಲಿಲ್ಲ. ನನ್ನ ಮಗ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದರೂ ಯಾರೂ ಕೈಹಾಕಲಿಲ್ಲ" ಎಂದು ಮೃತನ ತಾಯಿ ಕಣ್ಣೀರಿಟ್ಟಿದ್ದಾರೆ.
ಸ್ಥಳೀಯರ ಪ್ರಕಾರ, ರಾಜ್ ಕುಮಾರ್ ಸುಮಾರು 40 ನಿಮಿಷಗಳ ಕಾಲ ಸಹಾಯಕ್ಕಾಗಿ ಬೇಡಿಕೊಂಡರೂ ತಕ್ಷಣ ಆಂಬುಲೆನ್ಸ್ ಅಥವಾ ವಾಹನ ವ್ಯವಸ್ಥೆಯಾಗಲಿಲ್ಲ. ಕೆಲವರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಬಳಿಕ ಇಬ್ಬರು ಪೊಲೀಸರು ಸ್ಥಳಕ್ಕೆ ಬಂದರೂ, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನ ದೊರೆಯಲಿಲ್ಲ. ಕೊನೆಗೆ ಸುಮಾರು ಅರ್ಧ ಗಂಟೆಯ ಬಳಿಕ ಆಂಬುಲೆನ್ಸ್ ಬಂದಿದ್ದು, ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರಲ್ಲಾಗಲೇ ತುಂಬಾ ತಡವಾಗಿತ್ತು. ಚಿಕಿತ್ಸೆ ವೇಳೆ ರಾಜ್ ಕುಮಾರ್ ಮೃತಪಟ್ಟಿದ್ದಾರೆ.
ಎಫ್‌ಐಆರ್ ಪ್ರಕಾರ, ಆಸ್ಪತ್ರೆಗೆ ದಾಖಲಿಸುವಲ್ಲಿಯೇ ಸುಮಾರು ಒಂದು ಗಂಟೆ ವಿಳಂಬವಾಗಿದೆ. ಆದರೆ, ಸಹಾಯಕ ಪೊಲೀಸ್ ಆಯುಕ್ತೆ ಉಪಾಸನಾ ಪಾಂಡೆ ಅವರ ಪ್ರಕಾರ, ರಾಜ್ ಕುಮಾರ್ ಹಾಗೂ ಆಟೋ ಚಾಲಕ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು. ಮದ್ಯದ ಅಮಲಿನಲ್ಲಿ ಬೂತ್‌ನ ಗಾಜಿನ ಬಾಗಿಲು ಬಡಿದ ಪರಿಣಾಮ ಗಾಜು ಒಡೆದು ಕೈಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಚಿಕಿತ್ಸೆ ಫಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
3 ದಿನಗಳಾದರೂ ಬಂಧನವಿಲ್ಲ
ಇನ್ನೊಂದೆಡೆ, ಘಟನೆ ನಡೆದ ಮೂರು ದಿನಗಳಾದರೂ ಯಾವುದೇ ಬಂಧನವಾಗಿಲ್ಲ. ಎಂಟು ತಿಂಗಳ ಗರ್ಭಿಣಿಯಾಗಿರುವ ರಾಜ್ ಕುಮಾರ್ ಅವರ ಪತ್ನಿ ಗುಡಿಯಾ ದೇವಿ ಪತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಎರಡು ವರ್ಷಗಳಿಂದ ಕೋಮಾದಲ್ಲಿರುವ ತಂದೆ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಸಹೋದರ ಮತ್ತು ಗರ್ಭಿಣಿ ಪತ್ನಿಯನ್ನು ಅಗಲಿರುವ ರಾಜ್ ಕುಮಾರ್ ಅವರ ಸಾವಿನಿಂದ ಕುಟುಂಬವೇ ದಿಕ್ಕುತೋಚದ ಸ್ಥಿತಿಗೆ ತಲುಪಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸ್ ಬೂತ್ ಎದುರೇ ಯುವಕನೊಬ್ಬ ಜೀವಕ್ಕಾಗಿ ಪರದಾಡುತ್ತಿದ್ದರೂ ಸಮಯಕ್ಕೆ ನೆರವು ಸಿಗದಿರುವುದು ಆಡಳಿತದ ಕಾರ್ಯವೈಖರಿ ಕುರಿತು ಗಂಭೀರ ಚರ್ಚೆಗೆ ಗ್ರಾಸವಾಗಿದೆ.