

ಕನೌಜ್: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಬಾಜೆಡಿ ಗ್ರಾಮದ ಸರ್ಕಾರಿ ಶಾಲೆಯ ಇಬ್ಬರು ಸಹಾಯಕ ಶಿಕ್ಷಕರು ತರಗತಿಯೊಳಗೇ ಪರಸ್ಪರ ಚುಂಬಿಸುತ್ತಾ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸೌರಿಖ್ ಬ್ಲಾಕ್‌ನಲ್ಲಿರುವ ಕಾಂಪೋಸಿಟ್ ಪ್ರಾಥಮಿಕ ಶಾಲೆಯಲ್ಲಿ ನಿಯೋಜಿತರಾಗಿದ್ದ ಇಬ್ಬರೂ ಸಹಾಯಕ ಶಿಕ್ಷಕರನ್ನು ಜಿಲ್ಲಾ ಶಿಕ್ಷಣ ಅಧಿಕಾರಿ ಸಂದೀಪ್ ಕುಮಾರ್ ಅವರು ಮಂಗಳವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಕರು ದುರ್ವರ್ತನೆ ತೋರಿದ ಬಗ್ಗೆ ವಿಚಾರಣೆ
ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಸೌರಿಖ್ ಬ್ಲಾಕ್ ಶಿಕ್ಷಣ ಅಧಿಕಾರಿ ವಿಶ್ವನಾಥ್ ಪಾಠಕ್ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ.
ವಿಡಿಯೋದಲ್ಲಿ ಏನಿದೆ?
ತರಗತಿಯಲ್ಲಿ ಮಕ್ಕಳು ಇಲ್ಲದ ಸಮಯದಲ್ಲಿ ಸಹಾಯಕ ಶಿಕ್ಷಕ ಹಾಗೂ ಸಹಾಯಕ ಶಿಕ್ಷಕಿ ಇಬ್ಬರು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ವಿಡಿಯೋ ಸೆರೆಯಾಗಿದ್ದು, ಮಾಹಿತಿ ಪ್ರಕಾರ, ವಿಡಿಯೋದಲ್ಲಿರುವ ಪುರಷ ಶಿಕ್ಷಕನ ಹೆಂಡತಿಗೆ ಗಂಡನ ಮೇಲೆ ಅನುಮಾನವಿದ್ದ ಹಿನ್ನಲೆಯಲ್ಲಿ, ಗೌಪ್ಯವಾಗಿ ಕ್ಯಾಮರಾವನ್ನು ಇಟ್ಟಿದ್ದು, ಅದರಲ್ಲಿ ಗಂಡನ ರಾಸಲೀಲೆ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ಪೋಷಕರಿಂದ ತೀವ್ರ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಈ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದ ಪಾಲಕರು, ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಮಕ್ಕಳು ಮೌಲ್ಯಯುತ ಶಿಕ್ಷಣ ಪಡೆದು, ಉತ್ತಮ ಪ್ರಜೆಗಳಾಗಲು ಶಾಲೆಗೆ ಬರುತ್ತಾರೆ. ಆದರೆ ಅಲ್ಲಿರುವ ಶಿಕ್ಷಕರ ವರ್ತನೆಯೇ ಲಜ್ಜೆಗೆಟ್ಟಿದ್ದರೆ ಮಕ್ಕಳು ಇವರಿಂದ ಇನ್ನೇನು ಕಲಿಯುತ್ತಾರೆ? ಎಂದು ಅಕ್ರೋಶ ಹೊರಹಾಕಿದ್ದಾರೆ.