ತೂತುಕುಡಿ: ಕೋವಿಲ್ಪಟ್ಟಿಯಲ್ಲಿ ಶನಿವಾರ ತಡರಾತ್ರಿ ನಡೆದ ಕೃತಜ್ಞತಾ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಬೆದರಿಕೆ ಹಾಕಿದ ತೂತುಕುಡಿ ಡಿಎಂಕೆ ಪಕ್ಷದ ವಿಲಾತಿಕುಲಂ ಶಾಸಕ ಜಿವಿ ಮಾರ್ಕಂಡೇಯನ್ ಅವರನ್ನು ಸೋಮವಾರ ಬಂಧಿಸಲಾಗಿದೆ.
ವಿಧಾನಸಭೆಯಲ್ಲೇ ಸಿಎಂ ಅವರ ಮೂಳೆ ಮುರಿಯುತ್ತೇನೆ ಎಂದು ಮಾರ್ಕಂಡೇಯನ್ ಅವರು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಈ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ದಳವು ಎಫ್ಐಆರ್ ದಾಖಲಿಸಿದ್ದು, ಇದೀಗ ಡಿಎಂಕೆ ಶಾಸಕರನ್ನು ಬಂಧಿಸಿದೆ.
ತಮಿಳು ವೆಟ್ರಿ ಕಳಗಂ(ಟಿವಿಕೆ) ಈಶಾನ್ಯ ಜಿಲ್ಲಾ ಜಂಟಿ ಕಾರ್ಯದರ್ಶಿ ಪಿ ಕಾಸಿರಾಮನ್ ಅವರು ಡಿಎಂಕೆ ಶಾಸಕರ ವಿರುದ್ಧ ತೂತುಕುಡಿ ಎಸ್‌ಪಿ ಅಭಿಷೇಕ್ ಗುಪ್ತಾ ಅವರಿಗೆ ದೂರು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ದೂರಿನ ಮೇರೆಗೆ ಜಿಲ್ಲಾ ಅಪರಾಧ ವಿಭಾಗವು ಮಾರ್ಕಂಡೇಯನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 351(3),352,353(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.
ಇಂದು ಬೆಳಗ್ಗೆ, ಪೊಲೀಸ್ ತಂಡ, ಮಾರ್ಕಂಡೇಯನ್ ಅವರನ್ನು ಬಂಧಿಸಲು ಅವರ ನಿವಾಸಕ್ಕೆ ತೆರಳಿದ್ದಾಗ ಡಿಎಂಕೆ ಕಾರ್ಯಕರ್ತರು, ಪೊಲೀಸರ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಆದಾಗ್ಯೂ, ಡಿಸಿಬಿ ಇನ್ಸ್‌ಪೆಕ್ಟರ್ ಪಿ ಜಾನಕಿ ನೇತೃತ್ವದ ಪೊಲೀಸ್ ತಂಡ ಮಾರ್ಕಂಡೇಯನ್ ಅವರನ್ನು ಬಂಧಿಸಿ ವಿಚಾರಣೆಗಾಗಿ ಎಸ್‌ಪಿ ಕಚೇರಿಗೆ ಕರೆದೊಯ್ದರು. ವಿಚಾರಣೆ ಮುಂದುವರೆದಿದೆ.