ನವದೆಹಲಿ: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರನ್ನು, ಇಲ್ಲಿನ ಸಫ್ದರ್‌ಜಂಗ್ ಆಸ್ಪತ್ರೆಯಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸುವ ಸಲಹೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಮುಂದಿಟ್ಟಿದೆ.
ಸೋನಂ ವಾಂಗ್ಚುಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವ ವಿಚಾರದಲ್ಲಿ ಮಧ್ಯೆ ಪ್ರವೇಶಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠವು ನಡೆಸಿತು.
ಈ ವೇಳೆ ವಾಂಗ್‌ಚುಕ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಆದಾಗ್ಯೂ, ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಹೋರಾಟಗಾರ ವಾಂಗ್‌ಚುಕ್ ಅವರು ಮೇದಾಂತ ಆಸ್ಪತ್ರೆಯಿಂದ ಬಿಡುಗಡೆ ಕೋರಬಾರದು ಎಂದು ವಾದಿಸಿದರು.
'ಮೇದಾಂತ ಒಂದು ಪ್ರತಿಷ್ಠಿತ ಆಸ್ಪತ್ರೆಯಾಗಿದೆ. ಅವರನ್ನು ಮೇದಾಂತಾ ಆಸ್ಪತ್ರೆಗೆ ಸ್ಥಳಾಂತರಿಸುವುದಕ್ಕೆ ಸರ್ಕಾರಕ್ಕೆ ಯಾವುದೇ ಆಕ್ಷೇಪಣೆ ಇಲ್ಲ' ಎಂದು ಮೆಹ್ತಾ ಹೇಳಿದರು.
ವಿಚಾರಣೆಯ ಸಂದರ್ಭದಲ್ಲಿ, ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ವಾಂಗ್‌ಚುಕ್ ಅವರ ಆರೋಗ್ಯದ ಮೇಲೆ ನಿಗಾ ಇರಿಸಿರುವ ತಂಡದ ಭಾಗವಾಗಿರುವ ಏಮ್ಸ್ (AIIMS) ವೈದ್ಯರು ಹಾಗೂ ಅವರ ವೈಯಕ್ತಿಕ ವೈದ್ಯರೊಂದಿಗೆ ನ್ಯಾಯಾಲಯವು ಸಮಾಲೋಚನೆ ನಡೆಸಿತು; ಅಲ್ಲದೆ, ಅವರಿಗೆ ನಿರಂತರ ನಿಗಾ ಅಗತ್ಯವಿದೆ ಎಂಬ ವಿಷಯದಲ್ಲಿ ಎಲ್ಲರಲ್ಲೂ ಒಮ್ಮತವಿರುವುದನ್ನು ನ್ಯಾಯಾಲಯ ಗಮನಿಸಿತು.
'ವಾಂಗ್‌ಚುಕ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ನಾವು ಪ್ರಸ್ತಾಪಿಸುತ್ತೇವೆ' ಎಂದು ಹೇಳಿದ ನ್ಯಾಯಪೀಠ, ಮಧ್ಯಾಹ್ನದ ನಂತರದ ಸೆಷನ್‌ನಲ್ಲಿ ಈ ಕುರಿತು ಆದೇಶ ಹೊರಡಿಸುವುದಾಗಿ ತಿಳಿಸಿತು.
ಹೈಕೋರ್ಟ್‌ಗೆ ಧನ್ಯವಾದ ಅರ್ಪಿಸಿದ ವಾಂಗ್‌ಚುಕ್ ಪತ್ನಿ
ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪ್ರಸ್ತಾಪಿಸಿದ್ದಕ್ಕಾಗಿ, ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ಮಂಗಳವಾರ ದೆಹಲಿ ಹೈಕೋರ್ಟ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
'ನಮ್ಮ ಆಯ್ಕೆಯ ಆಸ್ಪತ್ರೆಯಾದ ಮೇದಾಂತಾಗೆ ಸೋನಮ್ ವಾಂಗ್‌ಚುಕ್ ಅವರನ್ನು ಸ್ಥಳಾಂತರಿಸಲು ಅನುಕೂಲಕರ ಆದೇಶ ಹೊರಡಿಸಿದ ಗೌರವಾನ್ವಿತ ದೆಹಲಿ ಹೈಕೋರ್ಟ್‌ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು! ಅಸಾಧ್ಯವೆನಿಸುವ ಸವಾಲುಗಳ ನಡುವೆಯೂ ದಾಖಲೆ ಸಮಯದಲ್ಲಿ ಈ ಗೆಲುವು ಸಾಧಿಸಲು ನೆರವಾದ ಅಖಿಲ್ ಸಿಬಲ್, ಬಾಹುಲಿ ಶರ್ಮಾ ಹಾಗೂ ಅವರ ತಂಡಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು!!' ಎಂದು ಆಂಗ್ಮೋ ಅವರು 'X' ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಏಕಸದಸ್ಯ ಪೀಠದ ಭಾನುವಾರದ ಆದೇಶವು, ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗದಿದ್ದರೂ, ಬಂಧನದ ಆದೇಶವಿಲ್ಲದಿದ್ದರೂ ವಾಂಗ್‌ಚುಕ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕಾನೂನುಬಾಹಿರವಾಗಿ ನಿರ್ಬಂಧಿಸುವಂತೆ ಮಾಡಿದೆ ಹಾಗೂ ವೈದ್ಯಕೀಯ ಚಿಕಿತ್ಸೆ ವಿಚಾರದಲ್ಲಿ ಸೋನಂ ಅವರಿಗಾಗಲಿ ಅಥವಾ ಅವರ ಪತ್ನಿಗಾಗಲಿ ಯಾವುದೇ ಹಕ್ಕು ಇಲ್ಲ ಎಂಬಂತಿದೆ' ಎಂದು ಆಂಗ್ಮೋ ತಮ್ಮ ಮೇಲ್ಮನವಿಯಲ್ಲಿ ವಾದಿಸಿದ್ದಾರೆ.
ಸೋನಂ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರಿ ಆಂಗ್ಮೋ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರಣಾ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಾರ್ಯಕರ್ತರನ್ನು ಜಂತರ್ ಮಂತರ್‌ನಿಂದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ ಸರ್ಕಾರದ ಕ್ರಮವನ್ನು 'ಸ್ವೇಚ್ಛಾಚಾರದ ನಿರ್ಧಾರ' ಎಂದು ಕರೆಯಲಾಗುವುದಿಲ್ಲ. 'ಈ ಹಂತದಲ್ಲಿ ಮಧ್ಯಂತರ ಆದೇಶದ ಅಗತ್ಯವಿಲ್ಲ' ಎಂದು ತಿಳಿಸಿದ್ದರು.
ಜಂತರ್ ಮಂತರ್‌ನಲ್ಲಿನ ಪ್ರತಿಭಟನಾ ಸ್ಥಳದಿಂದ ದೆಹಲಿ ಪೊಲೀಸರು ವಾಂಗ್‌ಚುಕ್ ಅವರನ್ನು ಬಲವಂತವಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ ಮರುದಿನವೇ (ಅಂದರೆ ಅವರ ಉಪವಾಸ ಸತ್ಯಾಗ್ರಹದ 21ನೇ ದಿನದಂದು), ಆಂಗ್ಮೋ ತಮ್ಮ ಅರ್ಜಿಯ ತುರ್ತು ವಿಚಾರಣೆಯನ್ನು ಕೋರಿದ್ದರು.