ನಿರ್ಮಲಾ ಸೀತಾರಾಮನ್  
ದೇಶ

'NEET ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮೊದಲು ನೋವಾಯಿತು, ನಂತರ ಅದನ್ನು ಅವಕಾಶವಾಗಿ ಬಳಸಿಕೊಂಡೆ' ಎನ್ನುವ ವಿದ್ಯಾರ್ಥಿಗಳಿದ್ದಾರೆ: ನಿರ್ಮಲಾ ಸೀತಾರಾಮನ್-Video

ಪರೀಕ್ಷೆಗಳ ಪಾವಿತ್ರ್ಯವನ್ನು ಹಾಳು ಮಾಡಿದವರ ವಿರುದ್ಧ ತ್ವರಿತ ನ್ಯಾಯ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ನವದೆಹಲಿ: ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅನೇಕ ವಿದ್ಯಾರ್ಥಿಗಳು ಅದನ್ನು ಅವಕಾಶವಾಗಿ ಬಳಸಿಕೊಂಡು ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಹೇಳಿಕೆ ವೈರಲ್ ಆಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕೇಳಿದ ಪ್ರಶ್ನೆಗೆ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ ಅವರು, ಪರೀಕ್ಷೆಗಳ ಪಾವಿತ್ರ್ಯವನ್ನು ಹಾಳು ಮಾಡಿದವರ ವಿರುದ್ಧ ತ್ವರಿತ ನ್ಯಾಯ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮೊದಲಿಗೆ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ನೋವಾಯಿತು. ಆದರೆ ನಂತರ ಅದನ್ನೇ ಒಂದು ಅವಕಾಶವಾಗಿ ಬಳಸಿಕೊಂಡು ಇನ್ನಷ್ಟು ಉತ್ತಮವಾಗಿ ಕೆಲ ವಿದ್ಯಾರ್ಥಿಗಳು ಸಿದ್ಧತೆ ನಡೆಸಿದರು. ಇದರಿಂದ ನನ್ನ ಸಾಧನೆ ಉತ್ತಮವಾಯಿತು ಎಂದು ಕೆಲವು ಯುವಕರು ಹೇಳುತ್ತಿದ್ದಾರೆ. ಈ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿರುವ ಯುವಕರೂ ಇದ್ದಾರೆ. ಈ ಎಲ್ಲದರ ನಡುವೆ ಸರ್ಕಾರ ಮತ್ತು ಪ್ರಧಾನಿ ಪರಿಸ್ಥಿತಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಮರುಪರೀಕ್ಷೆಗಳನ್ನು ತ್ವರಿತವಾಗಿ ನಡೆಸಿ, ಫಲಿತಾಂಶಗಳನ್ನು ಸಮಯಕ್ಕೆ ಪ್ರಕಟಿಸಿರುವುದರಿಂದ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಯೋಜನೆಗಳನ್ನು ಮುಂದುವರಿಸಲು ಸಾಧ್ಯವಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಸರ್ಕಾರ ಸಮಯಕ್ಕೆ ಸರಿಯಾಗಿ ಆರೋಪಿಗಳನ್ನು ಬಂಧಿಸದೆ, ಮರುಪರೀಕ್ಷೆಗಳನ್ನು ನಡೆಸದೇ, ಫಲಿತಾಂಶಗಳನ್ನು ಪ್ರಕಟಿಸದೇ ಇದ್ದಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಈಗ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣಕ್ಕಾಗಿ ಸೇರಬೇಕಾದ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಹೇಳಿದರು.

ಕಳೆದ ಕೆಲವು ವಾರಗಳಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಜುಲೈ 20ರಂದು ಸಂಸತ್ ಚಲೋ ಪ್ರತಿಭಟನೆಯ ವೇಳೆ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ (RAF) ಲಾಠಿಚಾರ್ಜ್ ಹಾಗೂ ಆಶ್ರುವಾಯು ಪ್ರಯೋಗ ನಡೆಸಿದ್ದು, ಹಲವಾರು ಪ್ರತಿಭಟನಾಕಾರರು ಗಾಯಗೊಂಡಿದ್ದರು. ಕೆಲ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿದ್ದವು.

ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಕೇಂದ್ರ ಸಚಿವರು ಕಾಕ್ರೋಚ್ ಜನತಾ ಪಕ್ಷ (CJP) ಪ್ರತಿನಿಧಿಗಳೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NAT)ಯನ್ನು ಸಂಪೂರ್ಣವಾಗಿ ಪುನಾರಚನೆ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಸಂಸ್ಥೆಯ 47 ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸುವ ತಮ್ಮ ಮೂಲ ಬೇಡಿಕೆಯಿಂದ ಹಿಂದೆ ಸರಿದಿಲ್ಲ.

ವಿರೋಧ ಪಕ್ಷ ಟೀಕೆ ಕುರಿತು ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸರ್ಕಾರ ಕೈಗೊಂಡಿರುವ ತ್ವರಿತ ಕ್ರಮಗಳಿಂದ ವಿರೋಧ ಪಕ್ಷದ ಟೀಕೆಗಳಿಗೆ ಅರ್ಥವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇದು ವಿದ್ಯಾರ್ಥಿಗಳು ಮತ್ತು ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಷಯ. ಸರ್ಕಾರ ಸ್ಪಂದಿಸದಿದ್ದರೆ ವಿರೋಧ ಪಕ್ಷವು ಟೀಕಿಸುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಈ ವಿಷಯದಲ್ಲಿ ಪ್ರಧಾನಮಂತ್ರಿಯವರ ಮಟ್ಟದಲ್ಲಿಯೇ ಸ್ಪಷ್ಟ ಪ್ರತಿಕ್ರಿಯೆ ನೀಡಲಾಗಿದೆ ಎಂದು ಹೇಳಿದರು.

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ ಎಂದು ಭರವಸೆ ನೀಡಿದ ಅವರು, ಇಂದು ತ್ವರಿತ ನ್ಯಾಯಾಲಯಗಳ ಘೋಷಣೆಗೆ ಮುಂಚೆಯೇ ಪ್ರಶ್ನೆಪತ್ರಿಕೆ ಸೋರಿಕೆ, ಖರೀದಿ ಹಾಗೂ ಮಾರಾಟದಲ್ಲಿ ಭಾಗಿಯಾದವರನ್ನು ಸರ್ಕಾರ ಬಂಧಿಸಿತ್ತು. ಪರೀಕ್ಷೆಯ ಪಾವಿತ್ರ್ಯವನ್ನು ಹಾಳು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಖಚಿತ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP, ವಿದ್ಯಾರ್ಥಿಗಳ ಪ್ರತಿಭಟನೆ: 2 ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಇಲ್ಲ?

ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗಿನ ಮೇಲೆ ಭೀಕರ ದಾಳಿ; ಭಾರತೀಯ ನಾವಿಕ ಬಲಿ, ಭಾರತ ತೀವ್ರ ಖಂಡನೆ..!

26 ದಿನ ಉಪವಾಸ ಮಾಡಿದ್ದೇನೆ... ಇನ್ನೂ ನನ್ನ ಪ್ರಾಮಾಣಿಕತೆಗೆ ಸಾಕ್ಷಿ ಬೇಕೇ?; ಟೀಕಾಕಾರರಿಗೆ ಸೋನಂ ವಾಂಗ್ಚುಕ್ ತಿರುಗೇಟು

Mahadayi ಯೋಜನೆಗೆ ಮತ್ತೆ ಹಿನ್ನಡೆ: ಸುಪ್ರೀಂ ಕೋರ್ಟ್ ಕೇಸ್ ನೆಪವೊಡ್ಡಿ ಪ್ರಸ್ತಾವನೆ ವಾಪಸ್ ಕಳುಹಿಸಿದ ಕೇಂದ್ರ ಸರ್ಕಾರ..!

Instagramನಲ್ಲಿ 30 ಕೋಟಿ ವೀಕ್ಷಣೆ ದಾಟಿದ Video: ನಿಮ್ಮ ಪ್ರೀತಿ-ಸಲಹೆಗಳು ಹೀಗೆ ಮುಂದುವರಿಯಲಿ; ಯುವ ಜನತೆಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ