ಇಂದೋರ್: ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ಭಾರತದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತೆಯೇ ಹಿಂಸಾಚಾರ ಸೃಷ್ಟಿಸಿ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸಿದ್ದ "ವಿದೇಶಿ ಶಕ್ತಿಗಳ ಸಂಚನ್ನು" ವಿಫಲಗೊಳಿಸಿದೆ ಎಂದು ಮಧ್ಯಪ್ರದೇಶ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಆರೋಪಿಸಿದ್ದಾರೆ.
ಶನಿವಾರ ತಡರಾತ್ರಿ ಇಂದೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಆರಂಭವಾದ ಮೊದಲ ದಿನವೇ ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದರು ಎಂದು ಹೇಳಿದರು.
ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ವಿರುದ್ಧ 36 ದಿನಗಳ ಕಾಲ ನಡೆದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆಯ ಬಳಿಕ ಶನಿವಾರ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯ ನಂತರ ಸಿಜೆಪಿ ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತ್ತು.
ಬಾಂಗ್ಲಾದೇಶ ಮಾದರಿ ಹಿಂಸಾಚಾರ ಸೃಷ್ಟಿಗೆ ಸಂಚು
"ಭಾರತದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಮಾದರಿಯಲ್ಲಿ ಹಿಂಸಾಚಾರ ಸೃಷ್ಟಿಸಿ ದೇಶವನ್ನು ಅಸ್ಥಿರಗೊಳಿಸಲು ವಿದೇಶಿ ಶಕ್ತಿಗಳು ರೂಪಿಸಿದ್ದ ಸಂಚು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯಿಂದ ವಿಫಲವಾಗಿದೆ. ಅವರು ಕೈಗೊಂಡ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ," ಎಂದು ವಿಜಯವರ್ಗೀಯ ಹೇಳಿದರು.
ಮೊದಲೇ ರಾಜಿನಾಮೆಗೆ ಮುಂದಾಗಿದ್ದ ಪ್ರಧಾನ್
ಧರ್ಮೇಂದ್ರ ಪ್ರಧಾನ್ ಅವರಿಗೆ ನೀಡಲಾದ ಪ್ರತಿಯೊಂದು ಜವಾಬ್ದಾರಿಯನ್ನು ಅವರು ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ನಿರ್ವಹಿಸಿದ್ದಾರೆ ಎಂದು ಅವರು ವಿಜಯವರ್ಗೀಯ ಶ್ಲಾಘಿಸಿದರು. "ವಿದ್ಯಾರ್ಥಿಗಳ ಪ್ರತಿಭಟನೆ ಆರಂಭವಾದ ಮೊದಲ ದಿನವೇ ಪ್ರಧಾನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ, ಅಗತ್ಯವಿದ್ದರೆ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದರು" ಎಂದು ಹೇಳಿದರು.
ಆದರೆ, ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ರಾಜೀನಾಮೆ ನೀಡಬೇಡಿ ಹಾಗೂ ಈ ವಿಚಾರವನ್ನು ಯಾರೊಂದಿಗೂ ಚರ್ಚಿಸಬೇಡಿ ಎಂದು ಬಿಜೆಪಿ ಅಧ್ಯಕ್ಷರು ಪ್ರಧಾನ್ ಅವರಿಗೆ ಸೂಚಿಸಿದ್ದರು. ನಂತರ ಪರಿಸ್ಥಿತಿ ಬದಲಾಗಿ ಪಕ್ಷವು ರಾಜೀನಾಮೆ ನೀಡುವಂತೆ ತೀರ್ಮಾನಿಸಿದಾಗ, ಪ್ರಧಾನ್ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು ಎಂದು ಅವರು ವಿವರಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಧರ್ಮೇಂದ್ರ ಪ್ರಧಾನ್ ರಾcಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಸಂಭ್ರಮಾಚರಣೆ ನಡೆಸಿರುವುದನ್ನು ಟೀಕಿಸಿದ ವಿಜಯವರ್ಗೀಯ, "ನೆರೆಯ ಮನೆಯ ಮಗುವು ಹುಟ್ಟಿದಾಗ ತಾವು ಡೊಳ್ಳು ಬಾರಿಸುವಂತಿದೆ ಕಾಂಗ್ರೆಸ್‌ನ ಸ್ಥಿತಿ" ಎಂದು ಹಿಂದಿ ಗಾದೆಯ ಮೂಲಕ ವ್ಯಂಗ್ಯವಾಡಿದರು.
"ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಪಾತ್ರವೇನು? ವಿದ್ಯಾರ್ಥಿಗಳೇ ಹೋರಾಟ ಆರಂಭಿಸಿದರು. ಕಾಂಗ್ರೆಸ್ ಕೇವಲ ಅವರ ಹಿಂದೆ ನಿಂತಿತ್ತು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಬಳಿಕ ವಿರೋಧ ಪಕ್ಷಗಳು ಸಂಪೂರ್ಣವಾಗಿ ಆತ್ಮವಿಶ್ವಾಸ ಕಳೆದುಕೊಂಡಿದ್ದವು. ಅಂತಹ ನಿರಾಶೆಯ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಕ್ಷದಲ್ಲಿ ಅವರಿಗೆ ಒಂದು ಆಶಾಕಿರಣ ಕಂಡಿತು" ಎಂದು ಅವರು ಆರೋಪಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಯಾವುದೇ ಕಾಂಗ್ರೆಸ್ ನಾಯಕನ ವಿರುದ್ಧ ಪೊಲೀಸ್ ಕ್ರಮ ಜರುಗಿದೆಯೇ ಎಂದು ಅವರು ಪ್ರಶ್ನಿಸಿದರು.
ರಾಹುಲ್ ಗಾಂಧಿಗೆ ತಿರುಗೇಟು
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದೇಶದ ಶಿಕ್ಷಣ ವ್ಯವಸ್ಥೆಯನ್ನು "ಗೆದ್ದಲುಗಳಂತೆ ಒಳಗಿನಿಂದ ತಿಂದಿದೆ" ಎಂದು ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ವಿಜಯವರ್ಗೀಯ, "ರಾಹುಲ್ ಗಾಂಧಿಯವರ ರಾಜಕೀಯ ಚಿಂತನೆ ಮತ್ತು ಬುದ್ಧಿವಂತಿಕೆಯ ಬಗ್ಗೆ ನನಗೆ ತುಂಬಾ ವಿಷಾದವಾಗುತ್ತದೆ. ಅವರಿಗೆ ಆರ್‌ಎಸ್‌ಎಸ್ ಎಂದರೇನು ಎಂಬುದನ್ನು ಇನ್ನೂ ಅರ್ಥಮಾಡಿಕೊಳ್ಳಬೇಕಿದೆ" ಎಂದು ತಿರುಗೇಟು ನೀಡಿದರು.