ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಇಂದು ಶುಕ್ರವಾರ “ವಿ ದ ಲೀಡರ್ಸ್” (We The Leaders) ಎಂಬ ಹೊಸ ರಾಜಕೀಯ ಚಳವಳಿಯನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಈ ಚಳವಳಿಯನ್ನು ಭವಿಷ್ಯದಲ್ಲಿ ಕಾರ್ಯಕರ್ತರ ಬಲವನ್ನು ನಿರ್ಮಿಸಿ, ನಾಯಕತ್ವ ತರಬೇತಿ ನೀಡಿದ ಬಳಿಕ ರಾಜಕೀಯ ಪಕ್ಷವಾಗಿ ಪರಿವರ್ತಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಲ್ಲದೆ ತಮಿಳು ನಾಡಿನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದೂ ತಿಳಿಸಿದ್ದಾರೆ.
ಚಳವಳಿಯನ್ನು ಬೆಂಬಲಿಸಲು ಆಸಕ್ತಿ ಹೊಂದಿರುವವರು ನೋಂದಾಯಿಸಿಕೊಳ್ಳುವಂತೆ ಅವರು ಜನತೆಗೆ ಆಹ್ವಾನ ನೀಡಿದ್ದಾರೆ. ಜೊತೆಗೆ, ಸಾರ್ವಜನಿಕ ಜೀವನ ಮತ್ತು ಚುನಾವಣಾ ರಾಜಕೀಯಕ್ಕೆ ಆಸಕ್ತಿ ಹೊಂದಿರುವ ನಾಯಕರಿಗೆ ತರಬೇತಿ ನೀಡಲು ಎಪಿಜೆ ಅಬ್ದುಲ್ ಕಲಾಂ ನೈತಿಕ ಮತ್ತು ರಾಜಕೀಯ ಕೇಂದ್ರವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಯೋಜನೆಗಳನ್ನು ಅವರು ಬಹಿರಂಗಪಡಿಸದಿದ್ದರೂ, ಈ ಕೇಂದ್ರದಲ್ಲಿ ತರಬೇತಿ ಪಡೆದವರನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದು ಎಂದು ಹೇಳಿದರು.
ಅಣ್ಣಾಮಲೈ ಚಳವಳಿ ಸಿದ್ಧಾಂತ
ತಮಿಳು ಗುರುತಿನೊಂದಿಗೆ ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿರುವ ಚಳವಳಿಯೆಂದು ತಮ್ಮ ಚಳವಳಿಯನ್ನು ಬಿಂಬಿಸಿದ ಅಣ್ಣಾಮಲೈ, “ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾದಾಗ, ತಮಿಳುನಾಡು ಅದರ ಮುಂಚೂಣಿಯಲ್ಲಿರಬೇಕು. ಅದಕ್ಕಾಗಿ ರಾಜಕೀಯದ ಭಾಷೆ ಮತ್ತು ವ್ಯಾಕರಣವನ್ನೇ ಬದಲಾಯಿಸಬೇಕಾಗಿದೆ ಎಂದು ಹೇಳಿದರು.
ಚಳವಳಿಯ ಸಿದ್ಧಾಂತವನ್ನು ವಿವರಿಸಿದ ಅವರು, ತಮಿಳುನಾಡಿನ ರಾಜಕೀಯವು ತಮಿಳು ಮತ್ತು ಭಾರತೀಯ ಗುರುತಿನ ನಡುವೆ ಅನಗತ್ಯ ಸಂಘರ್ಷವನ್ನು ಸೃಷ್ಟಿಸಿದೆ. ಈ ಎರಡೂ ಗುರುತುಗಳು ಸಹಬಾಳ್ವೆ ನಡೆಸಬಹುದು ಎಂದು ಹೇಳಿದ ಅವರು, ನಾನು ಭಾರತೀಯ ಗುರುತನ್ನು ಹೊಂದಿರುವ ಹೆಮ್ಮೆಯ ತಮಿಳಿಗ ಎಂದು ಹೇಳಿದರು.
ವ್ಯಕ್ತಿಪೂಜೆ ಮತ್ತು ವಂಶಪಾರಂಪರ್ಯ ರಾಜಕೀಯವನ್ನು ಟೀಕಿಸಿದ ಅಣ್ಣಾಮಲೈ, ನಾಯಕತ್ವದ ಹುದ್ದೆಗಳು ಶಾಶ್ವತವಾಗಬಾರದು. ಚುನಾಯಿತ ಪ್ರತಿನಿಧಿಗಳಿಗೆ ಅವಧಿ ಮಿತಿಯನ್ನು ಜಾರಿಗೆ ತರಬೇಕೆಂದು ಅವರು ಪ್ರತಿಪಾದಿಸಿದರು.
ಎಪಿಜೆ ಅಬ್ದುಲ್ ಕಲಾಂ ನೈತಿಕ ಮತ್ತು ರಾಜಕೀಯ ತರಬೇತಿ ಕೇಂದ್ರ
ಎ ಪಿ ಜೆ ಅಬ್ದುಲ್ ಕಲಾಂ ನಮ್ಮ ಪಾಲಿಗೆ ಅತ್ಯಂತ ಮಹತ್ವದ ವ್ಯಕ್ತಿ. ಅವರ ಸಿದ್ಧಾಂತಗಳು ನಮಗೆ ಮುಖ್ಯ. ಅವರು ರಾಷ್ಟ್ರೀಯ ಗುರುತನ್ನು ಹೊಂದಿದ್ದ ಹೆಮ್ಮೆಯ ತಮಿಳಿಗರಾಗಿದ್ದರು ಎಂದು ಹೇಳಿದ ಅವರು, ಅವರ ಹೆಸರಿನಲ್ಲೇ ಕಾರ್ಯಕರ್ತರಿಗೆ ತರಬೇತಿ ನೀಡುವ ಕೇಂದ್ರವನ್ನು ಆರಂಭಿಸಿರುವುದಾಗಿ ತಿಳಿಸಿದರು.
ಕಾಲ ಬದಲಾಗುತ್ತಿದ್ದಂತೆ ಸಿದ್ಧಾಂತಗಳೂ ಬದಲಾಗಬೇಕು ಎಂದು ಅಭಿಪ್ರಾಯಪಟ್ಟ ಅಣ್ಣಾಮಲೈ, ಯಾವುದೇ ಸಿದ್ಧಾಂತ ಶಾಶ್ವತವಲ್ಲ. ಮುಂದಿನ ಪೀಳಿಗೆಯ ಆಶಯಗಳಿಗೆ ಹೊಂದಿಕೊಳ್ಳದ ರಾಜಕೀಯ ತತ್ತ್ವಗಳು ಅಂತಿಮವಾಗಿ ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂದು ಹೇಳಿದರು.
ಈ ಚಳವಳಿಯು ಸ್ವಚ್ಛ, ಪ್ರಾಮಾಣಿಕ ಮತ್ತು ಪರಿಣಾಮಕಾರಿ ರಾಜಕೀಯಕ್ಕಾಗಿ ಕೆಲಸ ಮಾಡಲಿದೆ ಹಾಗೂ ತಮಿಳುನಾಡಿನ ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸಲಿದೆ ಎಂದು ಅವರು ತಿಳಿಸಿದರು. ಜೊತೆಗೆ, ಇತರ ಸಿದ್ಧಾಂತಗಳ ಕುರಿತ ಚರ್ಚೆ ಮತ್ತು ವಾದ-ವಿವಾದಗಳಿಗೂ ಕೇಂದ್ರದಲ್ಲಿ ಅವಕಾಶ ನೀಡಲಾಗುವುದು ಎಂದರು.
ತಂತ್ರಜ್ಞರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಜನರು ಸಾರ್ವಜನಿಕ ಜೀವನಕ್ಕೆ ಬಂದು ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲಾಗುವುದು ಎಂದು ಅವರು ಹೇಳಿದರು.
ತಮ್ಮ ಬೆಂಬಲಿಗರು ತಾಳ್ಮೆ ವಹಿಸಬೇಕು ಎಂದು ಮನವಿ ಮಾಡಿದ ಅವರು, ವ್ಯಕ್ತಿಗಳು ಮತ್ತು ತಲೆಮಾರುಗಳನ್ನು ಮೀರಿಯೂ ಉಳಿಯುವ ಚಳವಳಿಯನ್ನು ನಿರ್ಮಿಸುವುದೇ ತಮ್ಮ ಉದ್ದೇಶ ಎಂದು ಹೇಳಿದರು.
ಘೋಷಣೆಯನ್ನು Instagram Live ಮೂಲಕ ಮಾಡಿದ್ದಕ್ಕೆ ಕಾರಣವನ್ನು ವಿವರಿಸಿದ ಅಣ್ಣಾಮಲೈ, ಯುವಜನರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದರು.
ಯುವಕರು ಬದಲಾವಣೆಗೆ ಹಾತೊರೆಯುತ್ತಿದ್ದಾರೆ. ಒಂದೆಡೆ ಝೆನ್ ಜಿ ಮತ್ತು ಝೆನ್ ಆಲ್ಫಾ ಪೀಳಿಗೆಯ ವೇಗಕ್ಕೆ ಇಂಧನ ಒದಗಿಸಬೇಕು. ಮತ್ತೊಂದೆಡೆ, ಹಿರಿಯ ನಾಗರಿಕರು ಗೌರವಯುತ ಜೀವನ ನಡೆಸಲು ಅಗತ್ಯ ಸೌಲಭ್ಯಗಳು ಮತ್ತು ಬೆಂಬಲವನ್ನು ಖಚಿತಪಡಿಸಬೇಕು ಎಂದು ಹೇಳಿದರು.
ಬೇರೆ ಪಕ್ಷಗಳಂತೆ ಬಿಜೆಪಿ
ಬಿಜೆಪಿಯೊಂದಿಗಿನ ತಮ್ಮ ಭವಿಷ್ಯದ ಸಂಬಂಧದ ಕುರಿತು ಮಾತನಾಡಿದ ಅಣ್ಣಾಮಲೈ, ರಾಜ್ಯದಲ್ಲಿ ಬಿಜೆಪಿಯನ್ನು ಇತರ ರಾಜಕೀಯ ಪಕ್ಷಗಳಂತೆ ನೋಡುತ್ತೇನೆ ಎಂದರು.
ವಿರೋಧಕ್ಕಾಗಿ ವಿರೋಧ ಮಾಡುವುದಿಲ್ಲ. ತಮಿಳುನಾಡಿನ ಹಿತಾಸಕ್ತಿಗೆ ವಿರುದ್ಧವಾದಾಗ ಮಾತ್ರ ನಾವು ವಿರೋಧಿಸುತ್ತೇವೆ ಎಂದು ಹೇಳಿದರು.
ಕಳೆದ ಡಿಸೆಂಬರ್‌ನಲ್ಲೇ ಪಕ್ಷವನ್ನು ತೊರೆಯುವ ನಿರ್ಧಾರವನ್ನು ಪಕ್ಷದ ನಾಯಕತ್ವಕ್ಕೆ ತಿಳಿಸಿದ್ದೆ, ಬಿಜೆಪಿಯಲ್ಲಿ ಇದ್ದಾಗಲೂ ತಮಿಳುನಾಡಿನ ಹಿತಾಸಕ್ತಿಗಳ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ಹೇಳಿದ ಅವರು, ಮೇಕೆದಾಟು ಯೋಜನೆಯ ವಿಚಾರದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ತಮಿಳುನಾಡು ಬಿಜೆಪಿ ಕರ್ನಾಟಕದ ವಿರುದ್ಧ ನಿಲುವು ತೆಗೆದುಕೊಂಡಿದ್ದನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.
ನಟ ರಜನಿಕಾಂತ್ ಅವರ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಅಣ್ಣಾಮಲೈ, 2020ರ ಆಗಸ್ಟ್‌ನಲ್ಲಿ ಬಿಜೆಪಿಗೆ ಸೇರುವ ಮುನ್ನ ತಮ್ಮೊಂದಿಗೆ ಮಾತನಾಡಿದ್ದರು, ಅವರು ನನ್ನನ್ನು ತಮ್ಮ ಪಕ್ಷಕ್ಕೆ ಸೇರುವಂತೆ ಬಯಸಿದ್ದರು. ಆದರೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ನಾನು ಬಿಜೆಪಿಗೆ ಸೇರಲು ಅಂದು ನಿರ್ಧರಿಸಿದೆ ಎಂದು ಅವರು ಹೇಳಿದರು.