ನವದೆಹಲಿ: "ನೀವು ನಮ್ಮ ಆನ್‌ಲೈನ್ ಪೋಸ್ಟ್‌ಗಳನ್ನು ಅಳಿಸಬಹುದು, ಆದರೆ,ನಮ್ಮನ್ನು ಅಳಿಸಲು ಸಾಧ್ಯವಿಲ್ಲ" ಎಂದು ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಶನಿವಾರ ಹೇಳಿದ್ದು, ಈ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
NEET 2026 ಪೇಪರ್ ಸೋರಿಕೆ ಹಾಗೂ CBSE ಪರೀಕ್ಷಾ ಮಂಡಳಿಯ ಅಕ್ರಮಗಳನ್ನು ವಿರೋಧಿಸಿ ಕಾಕ್‌ರೋಚ್ ಜನತಾ ಪಕ್ಷ (Cockroach Janta Party) ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಆರಂಭಿಸಿದೆ.
ಸಂಘಟನೆಯ ಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನೂರಾರು ಯುವಕರು ಜಿರೆಳೆಯ ಮಾಸ್ಕ್ ಧರಿಸಿ ಭಾಗವಹಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸರ್ಕಾರ ತಮ್ಮ ಬೇಡಿಕೆಗಳನ್ನು ಪರಿಗಣಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಚಟುವಟಿಕೆಗಳನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಆರೋಪಿಸಿದರು.
ನನ್ನ ಸ್ನೇಹಿತರೇ, ಇದು ದೀರ್ಘ ಹೋರಾಟ. ನಾವು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನ್ ಅವರ ರಾಜೀನಾಮೆಯನ್ನು ಒತ್ತಾಯಿಸಲು ಪ್ರಾರಂಭಿಸಿ ಒಂದು ತಿಂಗಳಾಗಿದೆ, ಆದರೆ ಈ ವ್ಯಕ್ತಿಗಳು ಎಷ್ಟು ನಾಚಿಕೆಯಿಲ್ಲದವರೆಂದರೆ, ಕ್ರಮ ತೆಗೆದುಕೊಳ್ಳುವ ಬದಲು, ಅವರು ನಮ್ಮ ಖಾತೆಗಳನ್ನು ಹ್ಯಾಕ್ ಮಾಡುವುದು ಮತ್ತು ನಮ್ಮ ಪೋಸ್ಟ್‌ಗಳನ್ನು ಅಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನೀವು ನಮ್ಮ ಪೋಸ್ಟ್‌ಗಳನ್ನು ಅಳಿಸಬಹುದು, ಆದರೆ, ನಮ್ಮನ್ನು ಈ ಹೋರಾಟದಿಂದ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ಅಮೆರಿಕದಿಂದ ಭಾರತಕ್ಕೆ ಬಂದ ದಿನವನ್ನು ಸ್ಮರಿಸಿರುವ ದೀಪ್ಕೆ, ವಿಮಾನ ದೆಹಲಿಯಲ್ಲಿ ಇಳಿಯುವ ಮುನ್ನ, ಸ್ವಾತಂತ್ರ್ಯದ ಕೊನೆಯ ಕ್ಷಣಗಳನ್ನು ಅನುಭವಿಸುತ್ತಿರುವಂತೆ ಭಾಸವಾಯಿತು. ಈ ಹೋರಾಟಕ್ಕಾಗಿ ನನ್ನ ಸ್ವಾತಂತ್ರ್ಯವನ್ನೇ ತ್ಯಾಗ ಮಾಡಲು ನಾನು ಸಿದ್ಧನಾಗಿದ್ದೆ ಎಂದು ತಿಳಿಸಿದರು.
ಜೈಲು ಶಿಕ್ಷೆಯ ಭಯದಿಂದಾಗಿ ಅನೇಕ ಜನರು ತಮ್ಮನ್ನು ತಾವು ರಾಜಿ ಮಾಡಿಕೊಂಡಿದ್ದಾರೆ ಮತ್ತು 'ಮಾರಾಟವಾಗಿದ್ದಾರೆ. ಈ ದೇಶದ ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮನ್ನು ತಾವು ಮಾರಿಕೊಂಡಿಲ್ಲ. ಯಾವುದೇ ಒತ್ತಡಕ್ಕೂ ಮಣಿದಿಲ್ಲ ಎಂದರು.
ಕಾಕ್‌ರೋಚ್ ಮುಖವಾಡ, ಹೂವು ಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆ
ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಕಾಕ್‌ರೋಚ್ ಮುಖವಾಡ ಧರಿಸಿ, ಕೈಯಲ್ಲಿ ಹೂವುಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. “ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿ” ಎಂಬ ಘೋಷಣೆಗಳು ನಿರಂತರವಾಗಿ ಕೇಳಿಬಂದವು.
ಪ್ರತಿಭಟನೆ ಆರಂಭಕ್ಕೂ ಮುನ್ನ ದೆಹಲಿ ತಲುಪಿದ ನಂತರ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದ ದೀಪ್ಕೆ, “ಪುಸ್ತಕ ಮತ್ತು ತ್ರಿವರ್ಣ ಧ್ವಜವನ್ನು ತೆಗೆದುಕೊಂಡು ಬನ್ನಿ. ಪೊಲೀಸರಿಗೆ ಹೂವು ನೀಡಿ ಗೌರವ ತೋರಿಸಿ. ನಮ್ಮ ಹೋರಾಟ ಪ್ರೀತಿ ಮತ್ತು ಶಾಂತಿಯ ಮಾರ್ಗದಲ್ಲಿರಬೇಕು ಎಂದು ಕರೆ ನೀಡಿದ್ದರು.
ಆರಂಭದಲ್ಲಿ ಪ್ರತಿಭಟನಾಕಾರರು ಸಂಸತ್ ಮಾರ್ಗ ಪೊಲೀಸ್ ಠಾಣೆಗೆ ತೆರಳಿ ಅನುಮತಿ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ, ಬಳಿಕ ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನೇರವಾಗಿ ಅಲ್ಲಿ ಸೇರಲು ಸಿಜೆಪಿ ಕರೆ ನೀಡಿತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು, ಅಂತರರಾಜ್ಯ ಬಸ್ ನಿಲ್ದಾಣಗಳು ಹಾಗೂ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸುಮಾರು 40 ಅರೆಸೇನಾ ಪಡೆಗಳ ಕಂಪನಿಗಳನ್ನು ದೆಹಲಿ ಪೊಲೀಸರಿಗೆ ನೆರವಾಗಲು ನಿಯೋಜಿಸಲಾಗಿದೆ. ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದ ಹೊರಗೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಬಳಿಕ ಅಭಿಜಿತ್ ದೀಪ್ಕೆ ಆರಂಭಿಸಿದ ಸಿಜೆಪಿ ಆರಂಭದಲ್ಲಿ ವ್ಯಂಗ್ಯಮಯ ಡಿಜಿಟಲ್ ವೇದಿಕೆಯಾಗಿತ್ತು. ಆದರೆ, ಈಗ ಅದು ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಕರ ಬೆಂಬಲದೊಂದಿಗೆ ಸಂಘಟಿತ ಚಳವಳಿಯಾಗಿ ರೂಪುಗೊಳ್ಳುತ್ತಿದೆ.
ನೀಟ್, ಸಿಬಿಎಸ್‌ಇ, ಸಿಯುಇಟಿ ಮತ್ತು ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು ಎಂಬುದು ಸಿಜೆಪಿಯ ಪ್ರಮುಖ ಬೇಡಿಕೆಯಾಗಿದೆ.
ಇದೇ ವೇಳೆ, ಶಿಕ್ಷಣ ಮತ್ತು ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ದೀಪ್ಕೆ ಅವರನ್ನು ಬಂಧಿಸಿದರೆ ಆರು ವಾರಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದಾರೆ.